SC-ST ಗ್ರಾಹಕರಿಗೆ ಉಚಿತ ವಿದ್ಯುತ್‌ ಅನುಷ್ಠಾನಕ್ಕೆ ಹೊಸ ಆ್ಯಪ್‌

Public TV
2 Min Read
bescom 2

ಬೆಂಗಳೂರು: ರಾಜ್ಯದ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್‌) ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಟುಂಬಗಳಿಗೆ ಮಾಸಿಕ 75 ಯುನಿಟ್‌ ಗೃಹ ಬಳಕೆಯ ʼಅಮೃತ ಜ್ಯೋತಿʼ ಉಚಿತ ವಿದ್ಯುತ್‌ ಯೋಜನೆಯನ್ನು ರದ್ದುಪಡಿಸಿಲ್ಲ ಎಂದು ಬೆಸ್ಕಾಂ ಸ್ಪಷ್ಟಪಡಿಸಿದೆ.

ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಆಗಸ್ಟ್‌ 24, 2022 ರಂದು ಹೊರಡಿಸಿದ್ದ ಮಾರ್ಗಸೂಚಿ ಸುತ್ತೋಲೆಯನ್ನು ಇ-ಆಡಳಿತ ಇಲಾಖೆಯು ಭಾಗಶ: ಪರಿಷ್ಕರಿಸಿದ್ದರಿಂದ ಸುತ್ತೋಲೆಯನ್ನು ಸೆಪ್ಟೆಂಬರ್‌ 3, 2022 ರಂದು ಹಿಂಪಡೆಯಲಾಗಿದೆಯೇ ಹೊರತು, ಯೋಜನೆಯನ್ನು ರದ್ದುಪಡಿಸಿಲ್ಲ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ. ಇದನ್ನೂ ಓದಿ: ರಮ್ಯಾ ಹೇಳಿದ್ದು ನಿಜ: ಶಾಸಕ ಅರವಿಂದ ಲಿಂಬಾವಳಿ

bpl card

ಬಿಪಿಎಲ್‌ ಕುಟುಂಬದ ಎಸ್ಸಿ-ಎಸ್ಟಿ ಗ್ರಾಹಕರಿಗೆ 75 ಯುನಿಟ್‌ವರೆಗೆ ಉಚಿತ ವಿದ್ಯುತ್‌ ನೀಡುವ ಅಮೃತ ಜ್ಯೋತಿ ವಿದ್ಯುತ್‌ ಯೋಜನೆಯನ್ನು ರಾಜ್ಯ ಸರ್ಕಾರ ಮೇ 18, 2022 ರಂದು ರಾಜ್ಯಾದ್ಯಂತ ಜಾರಿಗೆ ತಂದಿತ್ತು. ಈ ಯೋಜನೆಯ ಪ್ರಯೋಜನವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಬಿಪಿಎಲ್‌ ಕುಟುಂಬಗಳಿಗೆ ಸುಲಭ ಮತ್ತು ಸುಲಲಿತವಾಗಿ ಅನುಷ್ಠಾನಗೊಳಿಸಲು ಇ-ಆಡಳಿತ ಇಲಾಖೆಯು ಹೊಸ ಆ್ಯಪ್‌ ಒಂದನ್ನು ಅಭಿವೃದ್ಧಿಪಡಿಸುತ್ತಿದೆ.

ಈ ಯೋಜನೆಯನ್ನು ರದ್ದುಗೊಳಿಸಲಾಗಿದೆ ಎಂಬ ತಪ್ಪು ಮಾಹಿತಿಯು ಸಾರ್ವಜನಿಕರಲ್ಲಿ ಗೊಂದಲ ಮೂಡಿಸಿದೆ. ಯೋಜನೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಬೆಸ್ಕಾಂ ತಿಳಿಸಿದೆ. ಇದನ್ನೂ ಓದಿ: ಮೈಸೂರು ಮೇಯರ್, ಉಪ ಮೇಯರ್ ಎಲೆಕ್ಷನ್: ಬಿಜೆಪಿ ಬಾಯಿಗೆ ಬಿತ್ತು ಡಬಲ್ ಲಡ್ಡು!

ಈ ಯೋಜನೆಯ ಪ್ರಯೋಜನ ಸುಮಾರು 39 ಲಕ್ಷ ಬಿಪಿಎಲ್‌ ಕುಟುಂಬಗಳ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಗ್ರಾಹಕರಿಗೆ ಸಿಗಲಿದ್ದು, ಈಗಾಗಲೇ 4 ಲಕ್ಷ ಫಲಾನುಭವಿಗಳನ್ನು ಗುರುತಿಸಲಾಗಿದೆ. ಮೇ ಮತ್ತು ಜೂನ್‌ ತಿಂಗಳ ವಿದ್ಯುತ್‌ ಬಿಲ್‌ ಮೊತ್ತವನ್ನು ಸುಮಾರು 15,000 ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಮೂಲಕ ಮರುಪಾವತಿಸಲಾಗಿದೆ ಎಂದು ಬೆಸ್ಕಾಂ ತಿಳಿಸಿದೆ. ಈ ಯೋಜನೆಯನ್ನು ಇ-ಆಡಳಿತ ಇಲಾಖೆಯ ಸಹಯೋಗದೊಂದಿಗೆ ಡಿಬಿಟಿ ವ್ಯವಸ್ಥೆಯಡಿ ಜಾರಿಗೊಳಿಸಲಾಗಿದೆ. ಫಲಾನುಭವಿ ಗ್ರಾಹಕರಿಗೆ ತಾವು ಪಾವತಿಸಿದ ಒಟ್ಟು ವಿದ್ಯುತ್‌ ಬಿಲ್ಲಿನ ಮೊತ್ತದಲ್ಲಿ 75 ಯುನಿಟ್‌ಗಳವರೆಗಿನ ವಿದ್ಯುತ್‌ ಶುಲ್ಕದ ಮೊತ್ತವನ್ನು ಅವರ ಬ್ಯಾಂಕ್‌ ಖಾತೆಗೆ ನೇರ ವರ್ಗಾವಣೆ ಮಾಡಲಾಗುತ್ತಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *