ನವದೆಹಲಿ: ತಮಿಳುನಾಡಿನ ಕೂನೂರು ಬಳಿಕಯ ಅರಣ್ಯ ಪ್ರದೇಶದಲ್ಲಿ ನಡೆದ ಹೆಲಿಕಾಪ್ಟರ್ ದುರಂತದಲ್ಲಿ ಬದುಕುಳಿದ ಏಕೈಕ ಸೇನಾಧಿಕಾರಿ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಈ ವರ್ಷ 2021ರ ಸೆಪ್ಟೆಂಬರ್‌ನಲ್ಲಿ ಈ ಹಿಂದೆ ತಾವು ಓದಿದ ಹರಿಯಾಣದ ಚಂಡೀಮಂದಿರ್ ಆರ್ಮಿ ಸ್ಕೂಲ್‍ನ ಪ್ರಾಂಶುಪಾಲರಿಗೆ ಪತ್ರವೊಂದನ್ನು ಬರೆದಿದ್ದರು. ಮಕ್ಕಳನ್ನು ಉದ್ದೇಶಿಸಿ ವರುಣ್ ಸಿಂಗ್ ಬರೆದಿದ್ದ ಪತ್ರ, ಎಂಥವರಿಗೂ ಸ್ಫೂರ್ತಿ ತುಂಬುವಂತಿದೆ.
ಪತ್ರದಲ್ಲಿ ಏನಿದೆ?:
ನಮಸ್ಕಾರ ಮೇಡಂ,
ಈ ಹೈಪರ್ ಕಾಂಪಿಟೇಟೀವ್ ಪ್ರಪಂಚದಲ್ಲಿ ಮುಂದುವರೆಯುವ ಸಲುವಾಗಿ ಓದಿನಲ್ಲಿ, ಕ್ರೀಡೆಯಲ್ಲಿ ಸಾಮಾನ್ಯರಾಗಿರುವ ವಿದ್ಯಾರ್ಥಿಗಳಿಗೆ ಸ್ಪೂರ್ತಿ ತುಂಬಬಹುದು ಎಂದು ನಾನು ಭಾವಿಸಿರುವೆ. ಅದಕ್ಕಾಗಿಯೇ ನಾನು ನನ್ನ ಜೀವನದ ಆಲೋಚನೆಗಳನ್ನು ನಿಮ್ಮ ಜೊತೆ ಹಂಚಿಕೊಳ್ಳಲು ಬಯಸುವೆ. ಇದನ್ನೂ ಓದಿ: ಹೆಲಿಕಾಪ್ಟರ್ ದುರಂತ – ಕ್ಯಾಪ್ಟನ್ ವರುಣ್ ಸಿಂಗ್‌ಗೆ ಬೆಂಗಳೂರಿನಲ್ಲಿ ಹೆಚ್ಚಿನ ಚಿಕಿತ್ಸೆ
ನಾನು 12ನೇ ತರಗತಿಯಲ್ಲಿ ಇದ್ದಾಗ ಓದು, ಕ್ರೀಡೆಯಲ್ಲಿ average student. ಆದರೆ, ನನಗೆ ವಿಮಾನಯಾನದ ಬಗ್ಗೆ ಅಪರಿಮಿತ ಆಸಕ್ತಿ ಇತ್ತು. ಅದೇ ನನ್ನನ್ನು ಈ ಮಟ್ಟಕ್ಕೆ ತಂದಿದೆ. ನೀವೀಗ ಸಾಮಾನ್ಯ ವಿದ್ಯಾರ್ಥಿ ಆಗಿರಬಹುದು. ಆದರೆ, ಭವಿಷ್ಯದ ಜೀವನ ಇದೇ ರೀತಿ ಇರಲ್ಲ. ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಒಂದೇ ರೀತಿ ಇರುವುದಿಲ್ಲ. ಎಲ್ಲರೂ ಶೇಕಡಾ 90ಕ್ಕಿಂತ ಹೆಚ್ಚು ಅಂಕ ಪಡೆಯಲು ಸಾಧ್ಯವಿಲ್ಲ. ನೀವು ಓದುವುದರಲ್ಲಿ, ಕ್ರೀಡೆಯಲ್ಲಿ ಸಾಮಾನ್ಯ ವಿದ್ಯಾರ್ಥಿ ಆಗಿದ್ದರೂ ಪರವಾಗಿಲ್ಲ. ನಿಮ್ಮನ್ನು ನೀವು ಕೀಳರಿಮೆಯಿಂದ ನೋಡಿಕೊಳ್ಳಬೇಡಿ. ಎಂದಿಗೂ ನಂಬಿಕೆ, ಭರವಸೆಗಳನ್ನು ಕಳೆದುಕೊಳ್ಳಬೇಡಿ.
ಜೀವನದಲ್ಲಿ ಯಾವುದೂ ಸಲಭವಾಗಿ ಸಿಗುವುದಿಲ್ಲ. ಪ್ರಯತ್ನ ಮಾಡಲೇಬೇಕು, ಅದಕ್ಕೆ ಸಮಯ ಮತ್ತು ಪ್ರಯತ್ನದ ತ್ಯಾಗ ಬೇಕು. ಯಾವತ್ತೂ ಯಾವುದೂ ನಿಮ್ಮಿಂದ ಅಸಾಧ್ಯ ಎಂದು ಭಾವಿಸಬೇಡಿ. ಆದರೆ, ಅದು ಸಾಧ್ಯವಾಗದಿದ್ದರೇ ಬೇಸರಿಸಿಕೊಳ್ಳದಿರಿ. ಬದುಕಿನಲ್ಲಿ ಇದೊಂದೇ ಮುಖ್ಯವಾಗಿರುವುದಿಲ್ಲ. ನೀವೆಲ್ಲರೂ ನಿಮ್ಮ ಮನಸ್ಸಿನ ಮಾತನ್ನು ಕೇಳಿ. ನೀವು ಯಾವುದೇ ಒಂದು ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಬಹುದು. ಅದು ಕಲೆ ಆಗಿರಬಹುದು, ಸಂಗೀತವಾಗಿರಬಹುದು, ಗ್ರಾಫಿಕ್ಸ್ ವಿನ್ಯಾಸವಾಗಿರಬಹುದು, ಸಾಹಿತ್ಯವಾಗಿರಬಹುದು ನೀವು ಮಾಡುವ ಯಾವುದೇ ಕೆಲಸದಲ್ಲಿ ಸಾರ್ಥಕ ಭಾವ ಇರಲಿ. ನಿಮ್ಮ ಕೈಲಾಗಿದ್ದನ್ನು ಮಾಡಿ. ಏನಾದರೂ ಮಾಡಲು ಹೊರಟಾಗ ನಿಮ್ಮ ಕೈಯಲ್ಲಿ ಆಗುತ್ತಿಲ್ಲ ಎಂದು ಹಿಂದೆ ಸರಿಯಬೇಡಿ. ಸದಾ ಜಾಗೃತರಾಗಿರಿ. ಪ್ರಯತ್ನ ಚಿಂತನೆಗೆ ದೂಡುವಂತಿದೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: 2015ರಲ್ಲಿ ಹೆಲಿಕಾಪ್ಟರ್ ಪತನಗೊಂಡಾಗ ಪಾರಾಗಿದ್ದರು ಬಿಪಿನ್ ರಾವತ್
ನಿನ್ನೆ ವರುಣ್ ಸಿಂಗ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ವೆಲ್ಲಿಂಗ್ಟನ್ ಸೇನಾ ಆಸ್ಪತ್ರೆಯಿಂದ ಏರ್‌ಲಿಫ್ಟ್ ಮೂಲಕ ಬೆಂಗಳೂರಿನ ಏರ್‌ಫೋರ್ಸ್ ಕಮಾಂಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ವರುಣ್ ಸಿಂಗ್ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ಮಾಹಿತಿ ನೀಡಿವೆ. ಇದನ್ನೂ ಓದಿ: ಹೆಲಿಕಾಪ್ಟರ್ ದುರಂತ ಬಗ್ಗೆ ಊಹಾಪೋಹ ನಿಲ್ಲಿಸಿ: ಐಎಎಫ್