ನಾವೆಷ್ಟು ಪಾಕಿಸ್ತಾನಿ ವಿಮಾನಗಳನ್ನ ಹೊಡೆದಿದ್ದೇವೆ ಅಂತ ಯಾರೊಬ್ಬರೂ ಕೇಳಲಿಲ್ಲ – ಸಂಸತ್‌ನಲ್ಲಿ ರಾಜನಾಥ್‌ ಸಿಂಗ್‌ ಬೇಸರ

Public TV
4 Min Read
Rajnath Singh 2

ನವದೆಹಲಿ: ವಿಪಕ್ಷಗಳು ನಮ್ಮ ದೇಶದ ಎಷ್ಟು ವಿಮಾನಗಳು ಬಿದ್ದಿವೆ ಅಂತಲೇ ಕೇಳುತ್ತಿವೆ. ಆದ್ರೆ ನಾವು ಎಷ್ಟು ಪಾಕಿಸ್ತಾನಿ ವಿಮಾನಗಳನ್ನ ಹೊಡೆದುರುಳಿಸಿದ್ದೇವೆ ಅಂತ ಯಾರೊಬ್ಬರೂ ಕೇಳಲಿಲ್ಲ. ವಿಪಕ್ಷಗಳ ಪ್ರಶ್ನೆಗಳು ಜನರ ಪ್ರಶ್ನೆ ಎಂದು ಅನ್ನಿಸುತ್ತಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ (Rajnath Singh) ಆಪರೇಷನ್‌ ಸಿಂಧೂರ Operation Sindoor) ಚರ್ಚೆ ವೇಳೆ ಬೇರ ಹೊರಹಾಕಿದರು.

ಲೋಕಸಭೆಯಲ್ಲಿ (Lok Sabha) ಈ ಚರ್ಚೆಗೆ ನಾಂದಿ ಹಾಡಿದ ಸಚಿವರು ವಿಪಕ್ಷಗಳ ವಿರುದ್ಧ ಹರಿಹಾಯ್ದರು. ಸಂಸತ್‌ನಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ಸಂಬಂಧಿಸಿದ ಮುಖ್ಯ ಪ್ರಶ್ನೆಗಳನ್ನು ಸರ್ಕಾರಕ್ಕೆ ಕೇಳುವುದು ವಿರೋಧ ಪಕ್ಷಗಳ ಕೆಲಸ. ವಿಪಕ್ಷಗಳು ನಮ್ಮ ದೇಶದ ಎಷ್ಟು ವಿಮಾನಗಳು ಬಿದ್ದಿವೆ ಅಂತಲೇ ಕೇಳುತ್ತಿವೆ. ನಾವು ಎಷ್ಟು ಪಾಕಿಸ್ತಾನಿ ವಿಮಾನಗಳನ್ನ (Pakistani Planes) ಹೊಡೆದುರುಳಿಸಿದ್ದೇವೆ ಅಂತ ಯಾರೊಬ್ಬರೂ ಕೇಳಲಿಲ್ಲ. ವಿಪಕ್ಷಗಳ ಪ್ರಶ್ನೆಗಳು ಜನರ ಪ್ರಶ್ನೆ ಎಂದು ಅನ್ನಿಸುತ್ತಿಲ್ಲ ಎಂದು ಹರಿಹಾಯ್ದರು.

ವಿಪಕ್ಷಗಳು ನಮ್ಮ ಸೈನಿಕರಲ್ಲಿ ಯಾರಿಗಾದರೂ ಹಾನಿಯಾಗಿದೆಯೇ ಅಂತ ಕೇಳಿ ಅದಕ್ಕೆ ಉತ್ತರ ಇಲ್ಲ. ಆಪರೇಷನ್ ಸಿಂಧೂರ್ ಕಾರ್ಯಚರಣೆ ಯಶಸ್ವಿಯಾಗಿದೆ ಎಂದು ಕೇಳಿ.. ಅದಕ್ಕೆ ಉತ್ತರ ಹೌದು. ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳ ಸಿಂಧೂರ ಅಳಿಸಿದ ಉಗ್ರರನ್ನು ನಮ್ಮ ಸಶಸ್ತ್ರ ಪಡೆಗಳು ನಿರ್ಮೂಲನೆ ಮಾಡಿದೆಯೇ? ಉತ್ತರ: ಹೌದು ಎದೇ ಆಗಿದೆ. ನೀವು ಪ್ರಶ್ನೆ ಕೇಳಲು ಬಯಸಿದ್ರೆ ಇದನ್ನ ಕೇಳಿ ಎಂದು ಕುಟುಕಿದರು.

ನಮ್ಮದು ಪ್ರತೀಕಾರದ ಪ್ರವಾಹ
ಲೋಕಸಭೆಯಲ್ಲಿ ಆಪರೇಷನ್‌ ಸಿಂಧೂರ ಕುರಿತು ಭಾಷಣ ಮಾಡಿದ ರಾಜನಾಥ್‌ ಸಿಂಗ್‌, ಈ ಸೇನಾ ಕಾರ್ಯಾಚರಣೆ ಭಾರತದ ಸೇನಾ ಸಾಮರ್ಥ್ಯಕ್ಕೆ ಉದಾಹರಣೆ ಮಾತ್ರವಲ್ಲದೇ, ಭಯೋತ್ಪಾದನೆ ವಿರುದ್ಧ ಭಾರತದ ಶೂನ್ಯ ಸಹಿಷ್ಣುತೆಯ ಪ್ರತೀಕ ಎಂದು ಬಣ್ಣಿಸಿದರು. ಪಾಕಿಸ್ತಾನದ ದಾಳಿ ವೇಳೆ ಭಾರತದ್ದು ಆತ್ಮರಕ್ಷಣೆಯ ಪ್ರತಿದಾಳಿಯಾಗಿತ್ತು. ಭಾರತ ಯಾರನ್ನೂ ಉದ್ದೇಶ ಪೂರ್ವಕವಾಗಿ ಟಾರ್ಗೆಟ್‌ ಮಾಡಿಲ್ಲ. ಆದ್ರೆ ಪಾಕಿಸ್ತಾನ ನಮ್ಮ ವಿಮಾನ ನಿಲ್ದಾಣ, ಸೇನಾ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಿತ್ತು. ಈ ಎಲ್ಲ ದಾಳಿಗಳನ್ನು ನಮ್ಮ ಸೇನೆ ವಿಫಲಗೊಳಿಸಿದೆ. ಒಂದೇ ಒಂದು ನಿಗದಿತ ಸ್ಥಳದಲ್ಲಿ ಪಾಕಿಸ್ತಾನಕ್ಕೆ ದಾಳಿ ಮಾಡಲು ಸಾಧ್ಯವಾಗಿಲ್ಲ ಎಂದು ಸಂಸತ್‌ಗೆ ತಿಳಿಸಿದರು.

ಪಾಕ್‌ ಏರ್‌ಬೇಸ್‌ಗಳೇ ಧ್ವಂಸ
ಪಾಕಿಸ್ತಾನದ ದಾಳಿಗೆ ʻಆಪರೇಷನ್ ಸಿಂಧೂರʼ ಹೆಸರಿನಲ್ಲಿ ಭಾರತ ಪ್ರತಿ ದಾಳಿ ನಡೆಸಿತು. ಪಾಕಿಸ್ತಾನದ ವಿಮಾನ ನಿಲ್ದಾಣ, ಸೇನಾ ನೆಲೆ, ಏರ್‌ ಡಿಫೆನ್ಸ್ ಸಿಸ್ಟಮ್ (ರಕ್ಷಣಾ ವ್ಯವಸ್ಥೆ) ಗಳನ್ನ ಟಾರ್ಗೆಟ್‌ ಮಾಡಿ ಧ್ವಂಸಗೊಳಿಸಿತು. ಮೂರು ಸೇನಾಪಡೆಗಳನ್ನ ಬಳಸಿಕೊಂಡು ಪಾಕಿಸ್ತಾನದ ಪ್ರತಿಯೊಂದು ದಾಳಿಗೂ ತಕ್ಕ ಉತ್ತರ ನೀಡಲಾಯಿತು ಎಂದು ವಿವರಿಸುತ್ತಿದ್ದರು. ಈ ವೇಳೆ ವಿಕ್ಷಗಳಿಂದ ಗದ್ದಲ ಶುರುವಾಯಿತು, ಭಾಷಣಕ್ಕೆ ಅಡ್ಡಿಪಡಿಸುವ ಪ್ರಯತ್ನವೂ ನಡೆಯಿತು. ಆದಾಗ್ಯೂ ರಾಜನಾಥ್‌ ಸಿಂಗ್‌ ಮಾತು ಮುಂದುವರಿಸಿದ್ರು.

ಮತ್ತೆ ಕೆಣಕಿದ್ರೆ ಸುಮ್ಮನಿರಲ್ಲ
ಗಡಿ ದಾಟುವುದು, ಅಲ್ಲಿನ ಪ್ರದೇಶವನ್ನ ವಶಕ್ಕೆ ಪಡೆಯುವುದು ನಮ್ಮ ಉದ್ದೇಶವಾಗಿರಲಿಲ್ಲ. ಪಹಲ್ಗಾಮ್‌ ದಾಳಿಗೆ ಪ್ರತಿಕಾರ, ಭಯೋತ್ಪಾದಕ ನೆಲೆಗಳನ್ನ ಧ್ವಂಸ ಮಾಡುವುದು, ಫ್ರಾಕ್ಸಿ ವಾರ್ ಮಾಡುತ್ತಿರುವ ಪಾಕಿಸ್ತಾನಕ್ಕೆ ಬುದ್ಧಿ ಕಲಿಸುವುದು ನಮ್ಮ ಉದ್ದೇಶವಾಗಿತ್ತು. ಇದರಲ್ಲಿ ಪಾಕಿಸ್ತಾನ ಸೋಲು ಒಪ್ಪಿಕೊಂಡಿತು. ದಾಳಿಯನ್ನ ನಿಲ್ಲಿಸುವಂತೆ ಮನವಿ ಮಾಡಿಕೊಂಡಿತು. ಪಾಕಿಸ್ತಾನದ ಡಿಜಿಎಂಓ ಮನವಿ ಬಳಿಕವೇ ಕದನ ವಿರಾಮ ಮಾಡಿಕೊಳ್ಳಲಾಯಿತು. ಆದ್ರೆ ಆಪರೇಷನ್‌ ಸಿಂಧೂರ ಇನ್ನೂ ಮುಗಿದಿಲ್ಲ. ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಪಾಕ್‌ ಪ್ರಚೋದನೆ ನೀಡಿದ್ರೆ ಮತ್ತೆ ಆಪರೇಷನ್‌ ಶುರುವಾಗಲಿದೆ. ಆಪರೇಷನ್‌ ಸಿಂಧೂರದಿಂದ ನಮ್ಮ ಸೈನಿಕರ ಮನೋಬಲ ಹೆಚ್ಚಾಗಿದೆ ಎಂದು ಇಂಚಿಂಚೂ ಮಾಹಿತಿ ನೀಡಿದರು.

ಪಹಲ್ಗಾಮ್‌ ದಾಳಿಯ ಇಂಚಿಂಚು ವಿವರ
ಇದರೊಂದಿಗೆ ಏ.22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ಗುಂಪೊಂದು ಅಮಾಯಕ ಪ್ರವಾಸಿಗರ ಮೇಲೆ ಭೀಕರ ದಾಳಿ ನಡೆಸಿತು. ಈ ದಾಳಿಯಲ್ಲಿ ಓರ್ವ ವಿದೇಶಿ ಪ್ರಜೆಯೂ ಸೇರಿದಂತೆ ಒಟ್ಟು 26 ಭಾರತೀಯ ನಾಗರಿಕರು ಸಾವನ್ನಪ್ಪಿದ್ದರು. ಭಯೋತ್ಪಾದಕರು ಪ್ರವಾಸಿಗರ ಧರ್ಮ ಕೇಳಿ ಅವರ ಮೇಲೆ ಗುಂಡು ಹಾರಿಸಿದ್ದರು. ಈ ಘಟನೆ ದೇಶಾದ್ಯಂತ ಆಕ್ರೋಶದ ಅಲೆಯನ್ನೇ ಸೃಷ್ಟಿಸಿತ್ತು. ಈ ದಾಳಿಯನ್ನು ಲಷ್ಕರ್-ಎ-ತೋಯ್ಬಾ ಸಂಘಟನೆಯ ಅಂಗಸಂಸ್ಥೆ ದಿ ರೆಸಿಸ್ಟನ್ಸ್‌ ಫ್ರಂಟ್‌ (ಟಿಆರ್‌ಎಫ್‌) ನಡೆಸಿತ್ತು ಎಂದು ರಾಜನಾಥ್‌ ಸಿಂಗ್‌, ಆಪರೇಷನ್‌ ಸಿಂಧೂರ ಸೇನಾ ಕಾರ್ಯಾಚರಣೆ ಆರಂಭಿಸಲು ಕಾರಣವಾದ ಘಟನೆಗಳನ್ನು ವಿವರಿಸಿದರು.

Share This Article