ಟೆಲ್ಅವಿವ್: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದು, ಇಸ್ರೇಲ್ನ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸುವಂತೆ ಆಹ್ವಾನ ನೀಡಿದ್ದಾರೆ. ಇದೇ ಸಂದರ್ಭ ಭಾರತೀಯ ಪೈಲಟ್ ಸ್ಮಿತ್ ಮಚ್ಚರ್ ಅವರನ್ನೂ ಸ್ವಾತಂತ್ರ್ಯ ದಿನಾಚರಣೆಯ ವಿಶೇಷ ಕಾರ್ಯಕ್ರಮದಲ್ಲಿ ಗೌರವಿಸುವುದಾಗಿ ತಿಳಿಸಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿರುವ ನೆತನ್ಯಾಹು, ಭಾರತದ ಪ್ರಧಾನಿ ಮೋದಿ ಅವರು ಆಹ್ವಾನಕ್ಕೆ ಧನ್ಯವಾದ ತಿಳಿಸಿರುವುದಾಗಿಯೂ ಹೇಳಿದ್ದಾರೆ. ಭಯೋತ್ಪಾದನೆ ವಿರುದ್ಧ ಭಾರತ ಮತ್ತು ಇಸ್ರೇಲ್ ಭೂಮಿಯ ಮೇಲೂ, ವಾಯುಮಾರ್ಗದಲ್ಲೂ ಒಟ್ಟಾಗಿ ಹೋರಾಡುತ್ತಿವೆ ಎಂಬ ಸಂದೇಶವನ್ನು ಮೋದಿ ನೀಡಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.
Received a phone call from Israeli Prime Minister Benjamin Netanyahu. We reviewed the sustained momentum in our bilateral ties and reaffirmed our commitment to further strengthening our partnership.
We also exchanged views on recent developments in West Asia and underscored the urgent need to restore peace and stability in the region.
@netanyahu
— Narendra Modi (@narendramodi) October 22, 2026
ʻನನ್ನ ಸ್ನೇಹಿತ, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡಿದೆ. ಇಸ್ರೇಲ್ನ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಧೈರ್ಯಶಾಲಿ ಭಾರತೀಯ ಪೈಲಟ್ ಅವರೊಂದಿಗೆ ದೀಪ ಬೆಳಗಿಸುವ ಸಮಾರಂಭದಲ್ಲಿ ಭಾಗವಹಿಸುವಂತೆ ಆಹ್ವಾನಿಸಿದೆ. ಮೋದಿ ಅವರು ಆಹ್ವಾನಕ್ಕೆ ಧನ್ಯವಾದ ತಿಳಿಸಿದರು. ಭೂಮಿಯ ಮೇಲೆ ಮತ್ತು ವಾಯುಮಾರ್ಗದಲ್ಲಿ ಭಾರತ ಹಾಗೂ ಇಸ್ರೇಲ್ ಭಯೋತ್ಪಾದನೆಯ ವಿರುದ್ಧ ಒಟ್ಟಾಗಿ ಹೋರಾಡುತ್ತಿವೆ ಎಂದು ಹೇಳಿದರಲ್ಲದೇ, ಭಾರತ ಮತ್ತು ಇಸ್ರೇಲ್ ನಡುವಿನ ದೀರ್ಘಕಾಲದ ಸಂಬಂಧದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು ಎಂದು ಪೋಸ್ಟ್ನಲ್ಲಿ ಹಂಚಿಕೊಂಡಿದ್ದಾರೆ.
ದ್ವಿಪಕ್ಷೀಯ ಸಂಬಂಧ ಬಲಪಡಿಸಲು ಉಭಯ ನಾಯಕರ ಒತ್ತು
ಇತ್ತ ಪ್ರಧಾನಿ ನರೇಂದ್ರ ಮೋದಿ ಅವರು ಎಕ್ಸ್ (X)ನಲ್ಲಿ ಪ್ರತಿಕ್ರಿಯಿಸಿದ್ದು, ಭಾರತ ಮತ್ತು ಇಸ್ರೇಲ್ ನಡುವಿನ ದ್ವಿಪಕ್ಷೀಯ ಸಂಬಂಧಗಳಲ್ಲಿ ನಿರಂತರ ಪ್ರಗತಿ ಕಂಡುಬರುತ್ತಿರುವ ಕುರಿತು ಉಭಯ ನಾಯಕರು ಚರ್ಚಿಸಿದ್ದಾಗಿ ತಿಳಿಸಿದ್ದಾರೆ.
ಎರಡೂ ದೇಶಗಳ ನಡುವಿನ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಬದ್ಧತೆಯನ್ನ ಪುನರುಚ್ಚರಿಸಿದ್ದೇವೆ. ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಇತ್ತೀಚಿನ ಬೆಳವಣಿಗೆಗಳ ಬಗ್ಗೆಯೂ ಅಭಿಪ್ರಾಯ ವಿನಿಮಯ ಮಾಡಿಕೊಂಡಿದ್ದು, ಈ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಮರುಸ್ಥಾಪಿಸುವ ತುರ್ತು ಅಗತ್ಯವನ್ನು ಒತ್ತಿಹೇಳಿರುವುದಾಗಿ ತಿಳಿಸಿದ್ದಾರೆ.
