ಕಠ್ಮಂಡು: ನೇಪಾಳದಲ್ಲಿ (Nepal) ಕಳೆದ ವಾರ ಸಂಭವಿಸಿದ ವಿನಾಶಕಾರಿ ಪ್ರವಾಹ ಸಾವಿರಾರು ಜನರನ್ನ ಬಲಿಪಡೆದುಕೊಂಡಿದೆ. ಆದ್ರೆ ಈ ಪ್ರವಾಹ ಬಂದುಹೋದ ನಂತರವೂ ನೂರಾರು ನೋವಿನ ಕಥೆಗಳು ಬೆಳಕಿಗೆ ಬರುತ್ತಿವೆ. ಈವರೆಗೆ ಕಾಣೆಯಾಗಿರುವ 4,000ಕ್ಕೂ ಅಧಿಕ ಜನರ ಪೈಕಿ ನೂರಾರು ಶಾಲಾ ಮಕ್ಕಳು ಕಣ್ಮರೆಯಾಗಿದ್ದಾರೆ. ಇತ್ತ ತಮ್ಮ ಮಕ್ಕಳನ್ನ ಕಳೆದುಕೊಂಡಿರುವ ಪೋಷಕರು ಕಣ್ಣೀರಿಡುತ್ತಿದ್ದಾರೆ.
ಹೌದು. ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, ರಣಭೀಕರ ಪ್ರವಾಹಕ್ಕೆ ತುತ್ತಾದ ನೇಪಾಳದ ರಸುವಾ ಮತ್ತು ನುವಕೋಟ್ (Rasuwa and Nuwakot) ಜಿಲ್ಲೆಗಳಲ್ಲಿ ಕೊಚ್ಚಿಹೋಗಿರುವ ಸುಮಾರು 600 ಮಕ್ಕಳು ಇನ್ನೂ ಪತ್ತೆಯಾಗಿಲ್ಲ. ಈ ಮಧ್ಯೆ ಅಲ್ಲಿನ ಕುಟುಂಬಗಳು ಮತ್ತು ಅಧಿಕಾರಿಗಳಿಗೆ ಮಕ್ಕಳ ಬಗ್ಗೆ ನಿಗಾ ಇಡಲು ಒಂದು ಕಾಲದಲ್ಲಿ ಸಹಾಯ ಮಾಡಿದ ಶಾಲೆಗಳೂ (Nepal School) ಕೂಡ ನಾಮಾವಶೇಷವಾಗಿವೆ.

ರಸುವಾ ಜಿಲ್ಲೆಯ 4 & ನುವಕೋಟ್‌ನ 8 ಶಾಲೆಗಳು ಸೇರಿ 12 ಶಾಲೆಗಳು ಸಂಪೂರ್ಣ ನಾಶವಾಗಿವೆ. ಮತ್ತೊಂದು ಕಡೆ ನೆಟ್‌ವರ್ಕ್ ಸಮಸ್ಯೆಗಳು ಎದುರಾಗಿರುವ ಕಾರಣ ಮಕ್ಕಳನ್ನು ಪತ್ತೆಹಚ್ಚುವುದೇ ರಕ್ಷಣಾ ತಂಡಗಳಿಗೆ ಸವಾಲಿನ ಕೆಲಸವಾಗಿದೆ. ಇತ್ತ ತಮ್ಮ ಮಕ್ಕಳನ್ನು ಕಳೆದುಕೊಂಡ ಪೋಷಕರು ಕಣ್ಣೀರಿಡುತ್ತಾ ಗೋಳಾಡುವ ದೃಶ್ಯಗಳು ಮನಕಲುಕುತ್ತಿವೆ.
ಸಂಪರ್ಕ ವ್ಯವಸ್ಥೆಯ ಹುಡುಕಾಟಕ್ಕೆ ದೊಡ್ಡ ಸವಾಲು
ಪ್ರವಾಹ ಪೀಡಿತ ಪ್ರದೇಶದ ದೊಡ್ಡ ಭಾಗಗಳಲ್ಲಿ ಸಂವಹನ ಮೂಲಸೌಕರ್ಯಗಳಿಗೆ ಹಾನಿಯಾಗಿದ್ದು, ರಕ್ಷಣಾ ಕಾರ್ಯ ಅತ್ಯಂತ ಕಠಿಣವಾಗಿದೆ. ಇದರಿಂದಾಗಿ ಅಧಿಕಾರಿಗಳು ಶಾಲೆಗಳು, ಸ್ಥಳೀಯ ಅಧಿಕಾರಿಗಳು, ಕುಟುಂಬಗಳು ಮತ್ತು ರಕ್ಷಣಾ ತಂಡಗಳಿಂದ ಲಭ್ಯವಾಗುತ್ತಿರುವ ಅಪೂರ್ಣ ಮಾಹಿತಿಯನ್ನೇ ಅವಲಂಬಿಸಬೇಕಾಗಿದೆ. ಮಕ್ಕಳ ವಿಷಯದಲ್ಲೂ ಈ ಸಮಸ್ಯೆ ಗಂಭೀರವಾಗಿದೆ. 12 ಶಾಲೆಗಳು ನಾಶವಾಗಿರುವುದರಿಂದ, ಸಾಮಾನ್ಯವಾಗಿ ವಿದ್ಯಾರ್ಥಿಗಳ ವಿವರ ಪತ್ತೆಗೆ ಕುಟುಂಬಗಳನ್ನು ಸಂಪರ್ಕಹಿಸುವುದಕ್ಕೂ ಸಹ ಯಾವುದೇ ವ್ಯವಸ್ಥೆ ಇಲ್ಲದಂತಾಗಿದೆ.

ನುವಕೋಟ್ ಶಿಕ್ಷಣ ಅಭಿವೃದ್ಧಿ ಮತ್ತು ಸಮನ್ವಯ ಘಟಕದ ಮುಖ್ಯಸ್ಥ ಸೂರ್ಯ ಬಹದ್ದೂರ್ ಖತ್ರಿ ಈ ಬಗ್ಗೆ ಮಾತನಾಡುತ್ತಾ, ಕಾಣೆಯಾದ ವಿದ್ಯಾರ್ಥಿಗಳ ಕುರಿತು ಪರಿಶೀಲಿಸಿದ ಡೇಟಾವನ್ನು ಸಂಗ್ರಹಿಸಲು ಮುಖ್ಯಶಿಕ್ಷಕರೊಂದಿಗೆ ನಿರಂತರವಾಗಿ ಸಂಪರ್ಕ ಸಾಧಿಸುತ್ತಿದ್ದೇವೆ. ಆದ್ರೆ ಸಂವಹನ ಮೂಲಸೌಕರ್ಯಗಳ ಕೊರತೆಯಿಂದ ನಿಖರವಾಗಿ ಸಂವಹನ ಸಾಧಿಸಲು ಸಾಧ್ಯವಾಗುತ್ತಿಲ್ಲ. ಕೆಲವು ಕಾಣೆಯಾದ ವಿದ್ಯಾರ್ಥಿಗಳು ಪತ್ತೆಯಾಗಿದ್ದರೂ, ವಿವಿಧ ಶಾಲೆಗಳಿಂದ ಪತ್ತೆಯಾಗದ ಮಕ್ಕಳ ಹೊಸ ವರದಿಗಳು ಬರುತ್ತಲೇ ಇವೆ. ನುವಾಕೋಟ್ ಒಂದೇ ಜಿಲ್ಲೆಯಲ್ಲಿ ಕನಿಷ್ಠ 300 ಮಕ್ಕಳು ನಾಪತ್ತೆಯಾಗಿದ್ದಾರೆ ಎಂದು ಅಂದಾಜಿಸಿದ್ದೇವೆ ಎಂದು ತಿಳಿಸಿದ್ದಾರೆ.
