ಬೆಂಗಳೂರು: ನೇಪಾಳ-ಟಿಬೆಟ್ ಗಡಿಯಲ್ಲಿ ಸಂಭವಿಸಿದ ಭೀಕರ ಪ್ರವಾಹ ಹಾಗೂ ಭೂಕುಸಿತದ ದುರಂತದಲ್ಲಿ ಕನ್ನಡಿಗರೂ ಸಿಲುಕಿಕೊಂಡಿದ್ದು, ಮಾನಸ ಸರೋವರ ಯಾತ್ರೆಗೆ ತೆರಳಿದ್ದ ಬೆಂಗಳೂರು ಮೂಲದ ನಾಲ್ವರು ಎನ್‌ಆರ್‌ಐ ಕನ್ನಡಿಗರು ನಾಪತ್ತೆಯಾಗಿದ್ದಾರೆ.
ಮೂಲತಃ ಬೆಂಗಳೂರಿನವರಾಗಿದ್ದು, ಸದ್ಯ ಅಮೆರಿಕದಲ್ಲಿ ನೆಲೆಸಿರುವ ನಾಲ್ವರು ಯಾತ್ರಿಕರು ಮಾನಸ ಸರೋವರ ಯಾತ್ರೆಗಾಗಿ ಅಮೆರಿಕದಿಂದ ನೇಪಾಳಕ್ಕೆ ಆಗಮಿಸಿದ್ದರು. ನಿನ್ನೆ ಪ್ರವಾಹ ಸಂಭವಿಸಿದ ಪ್ರದೇಶದಲ್ಲಿದ್ದ ಚೀನಾ ಎಂಬೆಸ್ಸಿಗೆ ತೆರಳಿದ್ದ ಇವರು, ಪ್ರವಾಹದ ಬಳಿಕ ಸ್ನೇಹಿತರು ಹಾಗೂ ಕುಟುಂಬಸ್ಥರ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದಾರೆ. ಈ ಸಂಬಂಧ ಅವರ ಸ್ನೇಹಿತರು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ (KSDMA) ಕರೆ ಮಾಡಿ ಮಾಹಿತಿ ನೀಡಿದ್ದು, ಪತ್ತೆಗಾಗಿ ನೆರವು ಕೋರಿದ್ದಾರೆ.
ಇಬ್ಬರು ಸುರಕ್ಷಿತ: ಇದೇ ವೇಳೆ ಹೈದರಾಬಾದ್‌ನ 23 ಮಂದಿ ಹಾಗೂ ಕರ್ನಾಟಕದ ಇಬ್ಬರು ಸೇರಿದಂತೆ ಒಟ್ಟು 25 ಜನರ ತಂಡ ನೇಪಾಳ ಪ್ರವಾಸ ಕೈಗೊಂಡಿತ್ತು. ಪ್ರವಾಹದಲ್ಲಿ ಸಿಲುಕಿದ್ದ ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಮಲ್ಲಿನಾಥ್ ಕೊಲಕುಂದಿ ಹಾಗೂ ಸಂಗಮೇಶ್ ಕನಕಪುರ ಎಂಬ ಇಬ್ಬರನ್ನು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಯಶಸ್ವಿಯಾಗಿ ಸಂಪರ್ಕಿಸಿದೆ.
ಸದ್ಯ ಇಬ್ಬರೂ ಸುರಕ್ಷಿತವಾಗಿದ್ದು, ಅವರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ. ರಕ್ಷಿಸಲ್ಪಟ್ಟ ಕನ್ನಡಿಗರನ್ನು ನೇಪಾಳದಿಂದ ನವದೆಹಲಿಗೆ ಕರೆತರಲು ರಾಜ್ಯ ಸರ್ಕಾರ ಎಲ್ಲಾ ಅಗತ್ಯ ವ್ಯವಸ್ಥೆಗಳನ್ನು ಕೈಗೊಳ್ಳುತ್ತಿದೆ.
