ನೆಲಮಂಗಲ: ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಗೋಪಾಲಯ್ಯ ಇಂದು ಬೆಂಗಳೂರು ಹೊರವಲಯ ನೆಲಮಂಗಲ ನಗರಕ್ಕೆ ದಿಢೀರ್ ಭೇಟಿ ನೀಡಿದರು.
Advertisement
ನಾಲ್ಕು ದಿನದ ಹಿಂದೆ ಪಬ್ಲಿಕ್ ಟಿವಿಯಲ್ಲಿ ಪಡಿತರ ಅಂಗಡಿಯ ದಿನಸಿಯಲ್ಲಿ ದೂಳು ಮತ್ತು ಹುಳ ಇದ್ದ ಪ್ರಕರಣದ ಹಿನ್ನಲೆ ಸುದ್ದಿ ಪ್ರಸಾರವಾಗಿತ್ತು. ಈ ಸಂಬಂಧ ಇಂದು ಸಚಿವರು ಭೇಟಿ ನೀಡಿದರು. ನೆಲಮಂಗಲ ನಗರದ ನ್ಯಾಯ ಬೆಲೆ ಅಂಗಡಿಗೆ ತೆರಳಿ ಪರಿಶೀಲನೆ ನಡೆಸಿ ಅಕ್ಕಿ ಗೋಧಿಯನ್ನು ವೀಕ್ಷಿಸಿದರು. ತೂಕ ಹಾಗೂ ಗುಣಮಟ್ಟ ಪರಿಶೀಲನೆ ನಡೆಸಿದ ಸಚಿವ ಗೋಪಾಲಯ್ಯ, ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದ್ದಾರೆ.
Advertisement
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಗೋಪಾಲಯ್ಯ, ಇದು ದಿಢೀರ್ ಭೇಟಿಯಲ್ಲ. ರಾಜ್ಯದ ಹಲವು ಕಡೆ ಪಡಿತರ ವಿತರಣಾ ಮಳಿಗೆಗಳಿಗೆ ತೆರಳುತ್ತೇನೆ. ಒಂದು ಕುಟುಂಬಕ್ಕೆ 10 ಕೆಜಿ ಅಕ್ಕಿ ಮತ್ತು ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ ಸಹ ಮೂರು ತಿಂಗಳ ಪಡಿತರ ಜೊತೆಗೆ ತೊಗರಿ ಬೇಳೆ ಸಹ ನೀಡಲಿದೆ. ಇದೀಗ ಬಿಪಿಎಲ್ ಕಾರ್ಡ್ ಕೇಳಿರುವ ಕುಟಂಬಗಳಿಗೂ ಕಾರ್ಡ್ ವಿತರಿಸಲಿದ್ದೇವೆ ಎಂದರು.
Advertisement
Advertisement
ಬಯೋಮೆಟ್ರಿಕ್ ಇಲ್ಲದ ಕುಟುಂಬಗಳಿಗೂ ಆಹಾರ ವಿತರಿಸಲು ಚಿಂತನೆ ನಡೆಸಿದ್ದೇವೆ. ಮುಂದಿನ ದಿನಗಳಲ್ಲಿ ರಾಜ್ಯದ ಹಲವು ಜಿಲ್ಲೆಗಳಿಗೆ ತೆರಳುತ್ತೇನೆ ಎಂದು ತಿಳಿಸಿದರು. ಈ ವೇಳೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಆಹಾರ ಮತ್ತು ನಾಗರಿಕ ಸರಬರಾಜು ಆಯುಕ್ತರು, ಹಿರಿಯ ಅಧಿಕಾರಿಗಳು ಸೇರಿದಂತೆ ನೆಲಮಂಗಲ ಶಾಸಕ ಡಾ.ಶ್ರೀನಿವಾಸ ಮೂರ್ತಿ, ತಹಶೀಲ್ದಾರ್ ಶ್ರೀನಿವಾಸಯ್ಯ ಮತ್ತು ಪೊಲೀಸ್ ಅಧಿಕಾರಿಗಳು ಜೊತೆಯಲ್ಲಿ ಇದ್ದರು.