ಉಡುಪಿ: ನೇಜಾರಿನ (Nejar) ತಾಯಿ ಮಕ್ಕಳ ಹಂತಕನಿಗೆ ಕಠಿಣ ಶಿಕ್ಷೆಯಾಗುವ ನಿಟ್ಟಿನಲ್ಲಿ ವಿಶೇಷ ತ್ವರಿತ ನ್ಯಾಯಾಲಯದ ಮೂಲಕ ವಿಚಾರಣೆ ನಡೆಸಬೇಕು ಎಂದು ಕುಟುಂಬ ಒತ್ತಾಯಿಸಿದೆ. ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಗೆ (Laxmi Hebbalkar) ಸಂತ್ರಸ್ತ ಕುಟುಂಬ ಮನವಿ ಮಾಡಿದೆ. ವಿಶೇಷ ಸರ್ಕಾರಿ ಅಭಿಯೋಜಕರನ್ನು ನೇಮಿಸಬೇಕೆಂದು ಕೂಡ ಕುಟುಂಬದ ಸದಸ್ಯರು ಒತ್ತಾಯಿಸಿದರು.
ಸಾಮೂಹಿಕ ಹತ್ಯಾಕಾಂಡದ ಆಘಾತದಿಂದ ಕುಟುಂಬ ಇನ್ನು ಹೊರಬಂದಿಲ್ಲ. ಕೆಲಸ ಮಾಡುವ ಸ್ಥಳದಲ್ಲಿ ತನ್ನ ಸಹೋದರಿ ಅನುಭವಿಸಿದ ನೋವು ಬೇರೆ ಯಾರೂ ಅನುಭವಿಸಬಾರದು ಎಂದು ಸಹೋದರ ಅಸಾದ್ ಹೇಳಿದ್ದಾರೆ. ಸಹೋದ್ಯೋಗಿಗಳ ಕಿರುಕುಳದಿಂದ ಅನೇಕ ಯುವತಿಯರು ಸಂಕಷ್ಟ ಅನುಭವಿಸುತ್ತಿದ್ದಾರೆ. ಮನೆಯವರಿಗೆ ತಿಳಿಸಿದರೆ ಕೆಲಸದಿಂದ ಬಿಡಿಸುತ್ತಾರೆ ಎಂಬ ಭಯದಲ್ಲಿ ಹೇಳುವುದಿಲ್ಲ. ಹಾಗಾಗಿ ಕೆಲಸ ಮಾಡುವ ಸ್ಥಳದಲ್ಲಿ ಮಹಿಳೆಯರ ಭದ್ರತೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಅಸಾದ್ ಒತ್ತಾಯಿಸಿದ್ದಾರೆ. ದುಡಿಯುವ ಹೆಣ್ಣು ಮಕ್ಕಳಿಗೆ ಭದ್ರತೆ ನೀಡುವುದು ಸರ್ಕಾರದ ಜವಾಬ್ದಾರಿ ಎಂದಿದ್ದಾರೆ. ಇದನ್ನೂ ಓದಿ: 15 ನಿಮಿಷದಲ್ಲಿ 4 ಕೊಲೆ, ಇದು ವಿಶ್ವ ದಾಖಲೆ – ಸ್ಟೇಟಸ್ ಹಾಕಿದಾತನಿಗೆ ಬಿಸಿ ಮುಟ್ಟಿಸಿದ ಪೊಲೀಸರು
ಈ ಸಾಮೂಹಿಕ ಹತ್ಯಾಕಾಂಡಕ್ಕೆ ಕಾರಣವೇನು ಅನ್ನೋ ಕುತೂಹಲ ಎಲ್ಲರಿಗೂ ಇತ್ತು. ಅಯ್ನಾಸ್ ಕುರಿತಾಗಿ ನರಹಂತಕ ಪ್ರವೀಣ್ ಚೌಗಲೆ (Praveen Chaugale) ಹೊಂದಿದ್ದ ಪೊಸೆಸಿವ್ ನೆಸ್ ಕಾರಣ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆರೋಪಿ ಪ್ರವೀಣ್ ಚೌಗುಲೆ ಅಸೂಯೆ ಮತ್ತು ಹಗೆತನದಿಂದ ಕೂಡಿದ ವ್ಯಕ್ತಿ. ಅಯ್ನಾಸ್‍ಳನ್ನು ಅತಿಯಾಗಿ ಹಚ್ಚಿಕೊಂಡಿದ್ದ. ಆಕೆ ತನ್ನ ನಿಯಂತ್ರಣದಲ್ಲೇ ಇರಬೇಕು ಎಂಬ ಮನಸ್ಥಿತಿ ಹೊಂದಿದ್ದ. ಅಯ್ನಾಜ್ ತನ್ನ ಜೊತೆ ಮಾತ್ರ ಮಾತನಾಡಬೇಕು, ಬೆರೆಯಬೇಕು ಎಂಬ ಮನಸ್ಥಿತಿಯ ವ್ಯಕ್ತಿ ಎಂದಿದ್ದಾರೆ.
ಸದ್ಯ ಆರೋಪಿಯ ತನಿಖೆ ಮತ್ತಷ್ಟು ತೀವ್ರವಾಗಿ ನಡೆಯುತ್ತಿದೆ. ಕೊಲೆಗೆ ನಿಖರ ಕಾರಣ ಏನು ಎಂಬುದನ್ನು ತಿಳಿದುಕೊಳ್ಳಲಿದ್ದಾರೆ. ವಿಚಾರಣೆ ಬಗ್ಗೆ ಸರ್ಕಾರ ಯಾವ ತೀರ್ಮಾನ ತೆಗೆದುಕೊಳ್ಳುತ್ತದೆ ನೋಡಬೇಕು.