ಹುಬ್ಬಳ್ಳಿ: ನಾನು ಕೈ ಮುಗಿದು ಕೇಳಿಕೊಳ್ತೀನಿ. ಸಿಎಂ ಹಾಗೂ ಗೃಹ ಸಚಿವರು ನನ್ನ ಮಗಳ ಹತ್ಯೆ ಪ್ರಕರಣ ಸಂಬಂಧ ಹೇಳಿಕೆಗಳನ್ನು ಕೊಡುವುದು ನಿಲ್ಲಿಸಿ ಎಂದು ನೇಹಾ ಹಿರೇಮಠ ತಂದೆ ನಿರಂಜನ್ (Niranjan Hiremath) ಕೈ ಮುಗಿದು ಕೇಳಿಕೊಂಡಿದ್ದಾರೆ.
ಈ ಸಂಬಂಧ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನನ್ನ ಮಗಳ ಸಾವು ವೈಯಕ್ತಿಕ ಅಲ್ಲ. ಅವರಿಗೆ ಮಾಹಿತಿಯ ಕೊರತೆ ಇದೆ. ಯಾರೋ ಅವರನ್ನು ತುಷ್ಠೀಕರಣ ಮಾಡಿ ಹೇಳುವಂಗೆ ಮಾಡಿದ್ದಾರೆ. ದಯಮಾಡಿ ಅಂತಹ ಹೇಳಿಕೆಗಳನ್ನು ಕೊಡಬೇಡಿ. ಎಲ್ಲವನ್ನೂ ನನ್ನ ವೀರಶೈವ ಹಾಗೂ ಲಿಂಗಾಯತ ಸಮಾಜ ನೋಡುತ್ತಿದೆ. ವೈಯಕ್ತಿಕ ಅಂದ್ರೆ ನಾವೇನು ಯಾರಾದ್ದಾದರು ಜೊತೆ ಸಂಬಂಧ ಬೆಳೆಸಲು ಹೋಗಿದ್ದೇವಾ..?. ಅಥವಾ ವ್ಯಾಪಾರ ಇತ್ತಾ?. ವೈಯಕ್ತಿಕ ಅನ್ನುವುದಾದರೆ ಯಾವುದಾದರೂ ಸಂಬಂಧ ಇರಬೇಕು ಅಲ್ವಾ. ಈ ರೀತಿಯ ಹೇಳಿಕೆಗಳಿಂದ ನನ್ನ ಮಗಳಿಗೆ ನ್ಯಾಯ ಸಿಗಲ್ಲ ಎಂದು ನಿರಂಜನ್ ಬೇಸರ ವ್ಯಕ್ತಪಡಿಸಿದರು.
ಈ ರೀತಿಯ ಹೇಳಿಕೆಗಳನ್ನು ಕೊಡುತ್ತಾ ಮೊದಲೇ ದುಃಖದಲ್ಲಿರುವ ನಮ್ಮನ್ನು ಮತ್ತಷ್ಟು ದುಃಖಕ್ಕೆ ತಳ್ಳುತ್ತಿದ್ದೀರಿ. ರಾಜ್ಯದ ಸಿಎಂ (Siddaramaiah) ಆಗಿರುವ ನೀವು ಇಂತಹ ಹೇಳಿಕೆಗಳನ್ನು ಕೊಡುವುದು ನಿಲ್ಲಿಸಿ. ನೀವು ಕೊಟ್ಟ ಹೇಳಿಕೆಗೆ ಮೊದಲು ಸ್ಪಷ್ಟನೆ ಕೊಡಿ. ನಮ್ಮ ಹಾಗೂ ಅವರ ಮಧ್ಯೆ ಯಾವುದೇ ರೀತಿಯ ಸಂಬಂಧ ಇರಲಿಲ್ಲ. ಅವರು ನಮ್ಮ ಅಕ್ಕಪಕ್ಕದ ಮನೆಯವರಲ್ಲ.. ನಮ್ಮ ಓಣಿಯವರಲ್ಲ ಅಥವಾ ನಮ್ಮ ಕ್ಲಾಸ್‌ಮೇಟ್ ಕೂಡ ಅಲ್ಲ. ವೈಯಕ್ತಿಕ ಅಂದಿದ್ರೆ ಆಕೆ ಅವನ ಜೊತೆ ಹೋಗುತ್ತಿದ್ದಳು ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮಗನನ್ನು ಸೈನಿಕನನ್ನಾಗಿ ಮಾಡಬೇಕೆಂಬ ಕನಸು ಕಂಡಿದ್ದೆ: ಆರೋಪಿ ಫಯಾಜ್ ತಂದೆ
ಎರಡು ವರ್ಷದ ಹಿಂದೆ ಆತ ಕಾಲೇಜು ಬಿಟ್ಟಿದ್ದಾನೆ. ಅವನು ಆಕೆಯ ಮೇಲೆ ಕಣ್ಣಿಟ್ಟು, ಲವ್ ಜಿಹಾದ್ ಟ್ರೈನಿಂಗ್ ತೆಗೆದುಕೊಂಡು ಬಂದು ಆಕೆಯನ್ನು ಟಾರ್ಗೆಟ್ ಮಾಡಿದ್ದಾನೆ. ಒಳ್ಳೆಯ ಸಂಸ್ಕೃತಿ ಇರುವ ಹುಡುಗಿಯನ್ನು ಬಲೆಗೆ ಹಾಕಿಕೊಳ್ಳುವ ಪ್ರಯತ್ನ ಮಾಡಿದ್ದಾನೆ. ಆದರೆ ಆಕೆ ನಿರಾಕರಿಸಿದ್ದಕ್ಕೆ ಕೊಲೆ ಮಾಡಿದ್ದಾನೆ ಎಂದರು.
ನನ್ನ ಮಗಳನ್ನು ಈಗಾಗಲೇ ಬಲಿ ತೆಗೆದುಕೊಂಡಿದ್ದೀರಿ. ನಮ್ಮನ್ನಾದರು ಬದುಕಲು ಬಿಡಿ. ನೀವು ಇದೆ ರೀತಿಯ ಹೇಳಿಕೆ ಕೊಟ್ಟರೆ ನಾನು ಸಮಾಜದಲ್ಲಿ ಹೇಗೆ ಮುಖ ತೋರಸಲಿ. ನಾನು ನನ್ನ ಕುಟುಂಬ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ನಿರಂಜನ್ ಎಚ್ಚರಿಕೆ ನೀಡಿದರು.