– 2nd PUC ನಲ್ಲಿ ಸೆಕೆಂಡ್ ಕ್ಲಾಸಲ್ಲಿ ಪಾಸಾಗಿದ್ದ ಆರೋಪಿ ಪುತ್ರ ರಿಷಿ
ಜೈಪುರ: ದೇಶಾದ್ಯಂತ ಸಂಚಲನ ಮೂಡಿಸಿರುವ ನೀಟ್ (NEET- UG) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಮತ್ತೊಂದು ರೋಚಕ ಸಂಗತಿ ಬೆಳಕಿಗೆ ಬಂದಿದೆ. ಪ್ರಕರಣದ ಹೊಣೆ ಹೊತ್ತಿರುವ ಕೇಂದ್ರೀಯ ತನಿಖಾ ದಳ ಒಬ್ಬೊಬ್ಬರೇ ವಂಚಕರನ್ನ ಸಮಾಜದ ಮುಂದೆ ತರುತ್ತಿದೆ.
ಈ ಮಧ್ಯೆ ಬಂಧಿತ ಸಹೋದರರಾದ ದಿನೇಶ್ ಬಿವಾಲ್, ಮಂಗಿಲಾಲ್ ಬಿವಾಲ್ ಮತ್ತು ಮಂಗಿಲಾಲ್ ಅವರ ಹಿರಿಯ ಮಗ ವಿಕಾಸ್ ಮೂವರು ಪ್ರಶ್ನೆಪತ್ರಿಕೆಗಳನ್ನ ಪಡೆದುಕೊಂಡಿದ್ದಲ್ಲದೇ, ತರಬೇತಿ ಕೇಂದ್ರಗಳಿಗೆ ಪೂರೈಸಿದ್ದರು ಎಂಬುದು ಗೊತ್ತಾಗಿದೆ. ಸದ್ಯ ಮಂಗಿಲಾಲ್, ಆರೋಪಿ ದಿನೇಶ್ ಬಿವಾಲ್‌ನನ್ನ ಬಂಧಿಸಿರುವ ಸಿಬಿಐ ದಿನೇಶ್ ಬಿವಾಲ್ ಮಗ ರಿಷಿ ಬಿವಾಲ್ ಗಾಗೀ ಹುಡುಕಾಟ ನಡೆಸುತ್ತಿದೆ. ಏಕೆಂದ್ರೆ ಆರೋಪಿ ರಿಷಿಗಾಗಿ ತಂದೆ ದಿನೇಶ್ ಬಿವಾಲ್ 10 ಲಕ್ಷ ರೂ. ನೀಡಿ ಪ್ರಶ್ನೆಪತ್ರಿಕೆ ಖರೀದಿಸಿರುವುದು ಗೊತ್ತಾಗಿದೆ.

ಆರೋಪಿ ದಿನೇಶ್, ತನ್ನ ಮಗನಿಗಾಗಿ ಪ್ರಶ್ನೆ ಪತ್ರಿಕೆಯನ್ನ ಖರೀದಿಸಿದ್ದಾಗಿ ವಿಚಾರಣೆಯ ಸಮಯದಲ್ಲಿ ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗಿದೆ.
10 ಲಕ್ಷಕ್ಕೆ ಖರೀದಿ ಮಾಡಿದ್ರೂ ಕಳಪೆ ಸಾಧನೆ
ತನಿಖಾಧಿಕಾರಿಗಳ ಪ್ರಕಾರ, ದಿನೇಶ್ ಬಿವಾಲ್ ತನ್ನ ಮಗನಿಗಾಗಿ ಸಿಕಾರ್ ನಲ್ಲಿ 10 ಲಕ್ಷ ರೂ. ನೀಡಿ ಪ್ರಶ್ನೆಪತ್ರಿಕೆ ಖರೀದಿ ಮಾಡಿದ್ದರಂತೆ. ಆದಾಗ್ಯೂ ರಿಷಿ 720 ಅಂಕಗಳಲ್ಲಿ ಕೇವಲ 107 ಅಂಕಗಳನ್ನಷ್ಟೇ ಗಳಿಸಿದ್ದಾನೆ. ಈ ಹಗರಣ ಬೆಳಕಿಗೆ ಬರುತ್ತಿದ್ದಂತೆ ತಲೆಮರೆಸಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

10ನೇ ತರಗತಿಯಲ್ಲಿ ಕಳಪೆ ಅಂಕ
ರಿಷಿ ಹಿನ್ನೆಲೆ ಪರಿಶೀಲಿಸಿದಾಗ ಆತ 10ನೇ ತರಗತಿ ಮತ್ತು ದ್ವಿತೀಯ ಪಿಯುಸಿ ಬೋರ್ಡ್ ಪರೀಕ್ಷೆಯಲ್ಲೂ ಅತ್ಯಂತ ಕಳಪೆ ಅಂಕ ಪಡೆದುಕೊಂಡಿದ್ದಾನೆ ಅನ್ನೋದು ಗೊತ್ತಾಗಿದೆ. SSLC ನಲ್ಲಿ ಶೇ.44 ಅಂಕಗಳನ್ನಷ್ಟೇ ಪಡೆದುಕೊಂಡಿದ್ದ, ದ್ವಿತೀಯ ಪಿಯುಸಿ ನಲ್ಲೂ 2nd ಕ್ಲಾಸ್‌ನಲ್ಲಿ (ಶೇ.50.80 ಪರ್ಸೆಂಟ್) ಪಾಸ್ ಆಗಿದ್ದಾನೆ. ಅದೂ ಕೂಡ ಗ್ರೇಸ್ ಅಂಕಗಳಿಂದ ಉತ್ತೀರ್ಣನಾಗಿದ್ದಾನೆ. ಹೀಗಿರುವ ಪುತ್ರನಿಗೆ 10 ಲಕ್ಷ ರೂ. ನೀಡಿ ತಂದೆ ಪ್ರಶ್ನೆಪತ್ರಿಕೆ ಖರೀದಿಸಿದ್ದಾರೆ ಅನ್ನೋದು ತನಿಖೆಯಿಂದ ಬಯಲಾಗಿದೆ.

