ತಿರುವನಂತಪುರಂ: ವೈದ್ಯಕೀಯ ಪ್ರವೇಶ ಪರೀಕ್ಷೆ (ನೀಟ್) ವೇಳೆ ತಮ್ಮ ಒಳ ಉಡುಪುಗಳನ್ನು ಕಳಚಿಟ್ಟು ಬರುವಂತೆ ಹೇಳಲಾಗಿದ್ದ ವಿದ್ಯಾರ್ಥಿನಿಯರಿಗೆ ನೀಟ್ ಪರೀಕ್ಷೆಯನ್ನು ಪುನಃ ನಡೆಸಲಾವುದು ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‍ಟಿಎ) ತಿಳಿಸಿದೆ.
ವಿದ್ಯಾರ್ಥಿನಿಯರು ಸೆಪ್ಟೆಂಬರ್ 4 ರಂದು ಪರೀಕ್ಷೆಯನ್ನು ತೆಗೆದುಕೊಳ್ಳುವ ಆಯ್ಕೆಯನ್ನು ಮಾಡಬಹುದು. ಈ ಬಗ್ಗೆ ವಿದ್ಯಾರ್ಥಿನಿಯರಿಗೆ ಎನ್‍ಟಿಎ ಇಮೇಲ್ ಅನ್ನು ಕಳುಹಿಸಿದೆ ಎಂದು ಹೇಳಿದೆ. ಇದನ್ನೂ ಓದಿ: ಪಠ್ಯ, ಪುಸ್ತಕ ಪರಿಷ್ಕರಣೆಗೆ ಮುಂದುವರಿದ ವಿರೋಧ- ತಮ್ಮ ಕವಿತೆಯನ್ನು ಬಳಸಬೇಡಿ: ರೂಪಾ ಹಾಸನ
Advertisement
Advertisement
ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ನೀಟ್ ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿನಿಯರಿಗೆ ಪರೀಕ್ಷಾ ಕೇಂದ್ರಕ್ಕೆ ಹಾಜರಾಗುವ ಮುನ್ನ ತಮ್ಮ ಒಳಉಡುಪುಗಳನ್ನು ಕಳಚಿಡುವಂತೆ ಹೇಳಲಾಗಿತ್ತು. ಈ ಸುದ್ದಿ ಎಲ್ಲೆಡೆ ಹರಿದಾಡುತ್ತಿದ್ದಂತೆ ಜನ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಬಗ್ಗೆ ಜುಲೈನಲ್ಲಿ ವ್ಯಕ್ತಿಯೊಬ್ಬರು ಕೊಟ್ಟಾರಕರ ಪೊಲೀಸರಿಗೆ ದೂರು ನೀಡಿದ್ದರು ಮತ್ತು ಚಾತಮಂಗಲಂನಲ್ಲಿರುವ ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸುವ ಮುನ್ನ ತಮ್ಮ ಮಗಳು ಸೇರಿದಂತೆ ಮಹಿಳಾ ನೀಟ್ ಆಕಾಂಕ್ಷಿಗಳು ತಮ್ಮ ಬ್ರಾಗಳನ್ನು ತೆಗೆಯುವಂತೆ ಹೇಳಿದ್ದಾರೆ ಎಂದು ಆರೋಪಿಸಿದ್ದರು.
Advertisement
Advertisement
ಪರೀಕ್ಷಾ ಕೇಂದ್ರದೊಳಗೆ ಲೋಹದ ವಸ್ತು ತೆಗೆದುಕೊಂಡು ಹೋಗುವಂತಿಲ್ಲ ಎನ್ನುವ ನಿಯಮವಿದೆ. ಹಲವು ವಿದ್ಯಾರ್ಥಿನಿಯರು ತೊಟ್ಟಿದ್ದ ಬ್ರಾದಲ್ಲಿ ಅಂಡರ್‌ವೈರಿಂಗ್ ಇದ್ದು, ಅದು ಮೆಟಲ್ ಡಿಟೆಕ್ಟರ್‌ನಲ್ಲಿ ಡಿಟೆಕ್ಟ್ ಆಗಿದೆ. ಆ ಹಿನ್ನೆಲೆ ಸುಮಾರು 100 ವಿದ್ಯಾರ್ಥಿನಿಯರಿಗೆ ಬ್ರಾ ತೆಗೆದಿಟ್ಟು ಪರೀಕ್ಷೆ ಬರೆಸಲಾಗಿದೆ ಎಂದು ವಿದ್ಯಾರ್ಥಿನಿಯರು ದೂರಿದ್ದರು. ಈ ವಿಚಾರವಾಗಿ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ವಿದ್ಯಾರ್ಥಿಗಳನ್ನು ಪರಿಶೀಲನೆ ಮಾಡುವ ಕೆಲಸವನ್ನು ಬೇರೊಂದು ಏಜೆನ್ಸಿಗೆ ವಹಿಸಲಾಗಿತ್ತು ಎಂದು ಪರೀಕ್ಷಾ ಕೇಂದ್ರ ಹೇಳಿತ್ತು.
ನಂತರ ಕುರಿತಂತೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354 (ಹೆಂಗಸಿನ ಮಾನಭಂಗ ಮಾಡುವ ಉದ್ದೇಶದಿಂದ ಅವಳ ಮೇಲೆ ಹಲ್ಲೆ ಅಥವಾ ಆಪರಾಧಿಕ ಬಲಪ್ರಯೋಗ ಮಾಡುವುದು) ಮತ್ತು 509 (ಒಬ್ಬ ಮಹಿಳೆಯ ಮಾನಕ್ಕೆ ಕುಂದುಂಟು ಮಾಡುವ ಉದ್ದೇಶವಿರುವ ಶಬ್ದ, ಸಂಜ್ಞೆ ಅಥವಾ ಕೃತ್ಯ) ಅಡಿಯಲ್ಲಿ ಎಫ್‍ಐಆರ್ ದಾಖಲಿಸಲಾಗಿತ್ತು. ಇದನ್ನೂ ಓದಿ: NEET ಪರೀಕ್ಷಾರ್ಥಿಗಳಿಗೆ ಒಳಉಡುಪು ತೆಗೆಯಲು ಒತ್ತಾಯ- ತನಿಖೆ ಆರಂಭಿಸಿದ ಪೊಲೀಸರು
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಏಳು ಮಂದಿಯನ್ನು ಬಂಧಿಸಿದ್ದರು. ಬಂಧಿತರಲ್ಲಿ ನೀಟ್ ಪರೀಕ್ಷಾ ಕೇಂದ್ರದಲ್ಲಿ ಹಾಜರಿದ್ದ ಇಬ್ಬರು ಕಾಲೇಜು ಸಿಬ್ಬಂದಿ ಮತ್ತು ಕೇಂದ್ರದ ಭದ್ರತೆಯನ್ನು ವಹಿಸಿಕೊಂಡಿದ್ದ ಏಜೆನ್ಸಿಯ ಮೂವರು ಸೇರಿದ್ದಾರೆ. ಕೊನೆಗೆ ಎಲ್ಲಾ ಆರೋಪಿಗಳಿಗೂ ಜಾಮೀನು ಸಿಕ್ಕಿದೆ.