LatestMain PostNational

ಯುಪಿಎಗೆ ಹೋಲಿಸಿದರೆ ಎನ್‍ಡಿಎ ರಫೇಲ್ ಡೀಲ್ ಶೇ.2.8 ರಷ್ಟು ಅಗ್ಗ: ಸಿಎಜಿ

ನವದೆಹಲಿ: ಯುಪಿಎ ಮಾಡಿಕೊಂಡಿದ್ದ ರಫೇಲ್ ಖರೀದಿ ಒಪ್ಪಂದಕ್ಕೆ ಹೋಲಿಕೆ ಮಾಡಿದರೆ ಎನ್‍ಡಿಎ ಮಾಡಿಕೊಂಡಿರುವ ಒಪ್ಪಂದ ಶೇ.2.8 ಎಷ್ಟು ಅಗ್ಗ ಎಂದು ಮಹಾಲೇಖಪಾಲರ ವರದಿ(ಸಿಎಜಿ) ಹೇಳಿದೆ.

ಮೋದಿ ಸರ್ಕಾರದ ಅತಿ ದೊಡ್ಡ ಹಗರಣ ಎಂದು ಕಾಂಗ್ರೆಸ್ ಆರೋಪಿಸುತ್ತಿರುವ ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದ ಸಿಎಜಿ ವರದಿ ಇಂದು ರಾಜ್ಯಸಭೆಯಲ್ಲಿ ಮಂಡನೆಯಾಗಿದೆ. 2007ರಲ್ಲಿ ಯುಪಿಎ ಪ್ರಸ್ತಾಪಿಸಿದ್ದ 126 ರಫೇಲ್ ವಿಮಾನ ಖರೀದಿಗೆ ಹೋಲಿಸಿದರೆ ಎನ್‍ಡಿಎ ಸರ್ಕಾರ 2016ರಲ್ಲಿ 36 ವಿಮಾನ ಖರೀದಿ ಸಂಬಂಧ ಮಾಡಿಕೊಂಡಿರುವ ಒಪ್ಪಂದ ಶೇ.2.8 ರಷ್ಟು ಅಗ್ಗವಾಗಿದೆ. ಅಷ್ಟೇ ಅಲ್ಲದೇ ಈ ಹೊಸ ಒಪ್ಪಂದದಿಂದಾಗಿ ಭಾರತಕ್ಕೆ ಶೇ.17.08 ರಷ್ಟು ಹಣ ಉಳಿತಾಯವಾಗಿದೆ ಎನ್ನುವ ಅಂಶ ಈ ವರದಿಯಲ್ಲಿದೆ. ಈ ವರದಿ ಮಂಡನೆಯಾಗುತ್ತಿದ್ದಂತೆ ವಿರೋಧ ಪಕ್ಷಗಳು ರಾಜ್ಯಸಭೆಯಲ್ಲಿ ಗದ್ದಲ ಎಬ್ಬಿಸಿವೆ.

 

ಮಹಾಲೇಖಪಾಲ ರಾಜೀವ್ ಮಹರ್ಷಿ ಅವರು ರಫೇಲ್ ಖರೀದಿ ಒಪ್ಪಂದ ನಡೆಸುವಾಗ ಅವರು ಹಣಕಾಸು ಕಾರ್ಯದರ್ಶಿಯಾಗಿದ್ದರು. ಇವರ ಅವಧಿಯಲ್ಲಿ ಯುಪಿಎ ಒಪ್ಪಂದ ರದ್ದಾಗಿ 36 ವಿಮಾನ ಖರೀದಿಯ ವ್ಯವಹಾರ ನಡೆದಿತ್ತು. ರಫೇಲ್ ಮಾತುಕತೆಯಲ್ಲಿ ಮಹರ್ಷಿ ಅವರು ಭಾಗಿಯಾಗಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಕಾಂಗ್ರೆಸ್ ಟೀಕೆಗೆ ಅರುಣ್ ಜೇಟ್ಲಿ ತಿರುಗೇಟು ನೀಡಿದ್ದು, ಸುಪ್ರೀಂ ಕೋರ್ಟ್ ತಪ್ಪು, ಸಿಎಜಿ ವರದಿಯೂ ತಪ್ಪು. ಅವರಿಗೆ ರಾಜವಂಶ ಮಾತ್ರ ಸರಿ, ಸತ್ಯಮೇವ ಜಯತೇ, ಕೊನೆಗೂ ಸತ್ಯವೇ ಗೆದ್ದಿದೆ. ನಮ್ಮ ರಫೇಲ್ ಒಪ್ಪಂದ ಕಡಿಮೆ ಬೆಲೆ, ವೇಗವಾಗಿ ವಿತರಣೆ, ಉತ್ತಮ ನಿರ್ವಹಣೆ ಎಂದು ಟ್ವೀಟ್ ಮಾಡಿದ್ದಾರೆ.  ಇದನ್ನೂ ಓದಿ:  18 ವರ್ಷ ಕಳೆದರೂ ಸಿತಾರಾ ವಿಮಾನ ಪೂರೈಸದ ಎಚ್‍ಎಎಲ್

ಸುಪ್ರೀಂ ತೀರ್ಪಿನಲ್ಲಿ ಏನಿತ್ತು?
ರಫೇಲ್ ಖರೀದಿ ಒಪ್ಪಂದದಲ್ಲಿ ಸಂದೇಹ ಪಡುವ ಅಗತ್ಯವಿಲ್ಲ. ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎನ್ನುವುದಕ್ಕೆ ಯಾವುದಕ್ಕೆ ಸಾಕ್ಷ್ಯಗಳು ಸಿಕ್ಕಿಲ್ಲ. ಗುಣಮಟ್ಟದ ವಿಮಾನ ಖರೀದಿ ವಿಚಾರಕ್ಕೆ ಸಂಬಂಧಿಸಿದಂತೆ ಎದ್ದಿರುವ ಖರೀದಿ ಒಪ್ಪಂದ ಬೆಲೆಯ ಪರಾಮರ್ಶೆ ಮಾಡುವುದು ಕೋರ್ಟ್ ಕೆಲಸವಲ್ಲ. 126 ಜೆಟ್ ಬದಲು 36 ಜೆಟ್ ಖರೀದಿ ಒಪ್ಪಂದ ಮಾಡಿಕೊಂಡಿರುವ ಭಾರತ ಸರ್ಕಾರದ ಈ ನಿರ್ಧಾರವನ್ನು ಬದಲಾಯಿಸಿ ಎಂದು ನಾವು ಹೇಳಲು ಸಾಧ್ಯವಿಲ್ಲ. 2016ರ ಸಪ್ಟೆಂಬರ್ ತಿಂಗಳಿನಲ್ಲಿ ಈ ಡೀಲ್ ನಡೆದಾಗ ಯಾರು ಪ್ರಶ್ನೆ ಕೇಳಿರಲಿಲ್ಲ.

ನಾಲ್ಕು ಮತ್ತು ಐದನೇಯ ತಲೆಮಾರಿನ ಫೈಟರ್ ಜೆಟ್ ಭಾರತೀಯ ವಾಯುಸೇನೆಗೆ ನಿಯೋಜಿಸುವ ಅಗತ್ಯವಿದೆ. ಖರೀದಿ, ಬೆಲೆ ನಿರ್ಣಯ, ದೇಶಿ ಪಾಲುದಾರ ಆಯ್ಕೆ ವಿಚಾರದಲ್ಲಿ ಮಧ್ಯಪ್ರವೇಶಿಸುವ ಅಗತ್ಯ ಕಂಡು ಬರುವುದಿಲ್ಲ. ಒಪ್ಪಂದದಲ್ಲಿ ಭಾಗಿಯಾದ ಎಲ್ಲರೂ ಖರೀದಿ ಹೇಗೆ ನಡೆಯಿತು ಎನ್ನುವ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ. ತುಲನಾತ್ಮಕ ಬೆಲೆ ವಿವರವನ್ನು ನೀಡಿ ವಿಮಾನಗಳನ್ನು ಖರೀದಿಸಿ ಎಂದು ಹೇಳುವುದು ಕೋರ್ಟ್ ಕೆಲಸವಲ್ಲ. ನಾವು ಕೇಳಿದ ಪ್ರಶ್ನೆಗಳಿಗೆ ಸಿಕ್ಕಿದ ಉತ್ತರಿಂದ ನಮ್ಮ ಸಂಶಯ ಪರಿಹಾರವಾಗಿದ್ದು ತೃಪ್ತಿಯಾಗಿದೆ. ರಕ್ಷಣೆಯಂತಹ ಸೂಕ್ಷ್ಮ ವಿಚಾರದಲ್ಲಿ ತನಿಖೆಗೆ ಆದೇಶ ನೀಡುವುದು ಸರಿಯಲ್ಲ. ದೇಶಿ ಪಾಲುದಾರನ ಆಯ್ಕೆ ಮಾಡುವುದು ಕಂಪನಿಗೆ ಬಿಟ್ಟ ವಿಚಾರ. ಈ ವಿಚಾರದಲ್ಲಿ ನಾವು ಮಧ್ಯಪ್ರವೇಶಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಇದನ್ನೂ ಓದಿ:ಒಂದೇ ಯುದ್ಧ ವಿಮಾನ ನಿರ್ಮಿಸದ ರಿಲಯನ್ಸ್ ಕಂಪನಿ ಜೊತೆ ಒಪ್ಪಂದ ಮಾಡಿದ್ದು ಯಾಕೆ: ಪ್ರಶ್ನೆಗೆ ಡಸಾಲ್ಟ್ ಸಿಇಒ ಉತ್ತರ ನೀಡಿದ್ದು ಹೀಗೆ

ರಫೇಲ್ ಯುದ್ದ ವಿಮಾನ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ವಕೀಲ ಎಂ.ಎಲ್ ಶರ್ಮಾ, ವಿನೀತಾ ದಾಂಡ, ಆಪ್ ನಾಯಕ ಸಂಜಯ್ ಸಿಂಗ್ ಮಾಜಿ ಕೇಂದ್ರ ಸಚಿವ ಯಶವಂತ ಸಿನ್ಹಾ, ಅರುಣ್ ಶೌರಿ ಹಾಗೂ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅರ್ಜಿ ಸಲ್ಲಿಸಿದ್ದರು. ರಫೇಲ್ ಒಪ್ಪಂದವನ್ನು ರದ್ದುಗೊಳಿಸಿ ಸುಪ್ರೀಂಕೋರ್ಟ್ ಮೇಲುಸ್ತುವಾರಿಯಲ್ಲಿ ಸಿಬಿಐ ತನಿಖೆ ನಡೆಸಬೇಕು ಎಂದು ವಕೀಲರು ಆಗ್ರಹಿಸಿದ್ದರು. ಈ ಅರ್ಜಿಗಳನ್ನು ಒಟ್ಟಾಗಿಸಿದ್ದ ಮುಖ್ಯ.ನ್ಯಾ ರಂಜನ್ ಗೋಗಯ್ ನೇತೃತ್ವದ ನ್ಯಾ. ಎಸ್‍ಕೆ ಕೌಲ್, ನ್ಯಾ. ಕೆಎಂ ಜೋಸೆಫ್ ಅವರಿದ್ದ ತ್ರಿಸದಸ್ಯ ಪೀಠ ಸುದೀರ್ಘ ವಿಚಾರಣೆ ನಡೆಸಿತ್ತು. ನವೆಂಬರ್ 14 ರಂದು ವಿಚಾರಣೆ ಅಂತ್ಯಗೊಳಿಸಿದ್ದ ಸುಪ್ರೀಂಕೋರ್ಟ್ ಡಿಸೆಂಬರ್ 14 ರಂದು ತೀರ್ಪು ಪ್ರಕಟಿಸಿ ಎಲ್ಲ ಅರ್ಜಿಗಳನ್ನು ವಜಾಗೊಳಿಸಿತ್ತು. ಇದನ್ನೂ ಓದಿ:ಎಚ್‍ಎಎಲ್ ಜೊತೆ ರಫೇಲ್ ಯೋಜನೆ ಕೈಬಿಟ್ಟಿದ್ದೇಕೆ: ಸ್ಪಷ್ಟನೆ ನೀಡಿದ ರಕ್ಷಣಾ ಸಚಿವೆ

Leave a Reply

Your email address will not be published.

Back to top button