Tuesday, 22nd October 2019

Recent News

ಎಚ್‍ಎಎಲ್ ಜೊತೆ ರಫೇಲ್ ಯೋಜನೆ ಕೈಬಿಟ್ಟಿದ್ದೇಕೆ: ಸ್ಪಷ್ಟನೆ ನೀಡಿದ ರಕ್ಷಣಾ ಸಚಿವೆ

ನವದೆಹಲಿ: ಎಚ್‍ಎಎಲ್(ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್)ನೊಂದಿಗೆ ರಫೇಲ್ ಯುದ್ದ ವಿಮಾನದ ಒಪ್ಪಂದವನ್ನು ಕೈಬಿಟ್ಟಿದ್ದೇಕೆ ಎಂಬುದರ ಕುರಿತು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟನೆ ನೀಡಿದ್ದಾರೆ.

ರಫೇಲ್ ಒಪ್ಪಂದ ವಿಚಾರಕ್ಕೆ ಸಂಬಂಧಿಸಿದಂತೆ ದೆಹಲಿ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾದಲ್ಲಿ ಸಂಪಾದಕರು ಮತ್ತು ವರದಿಗಾರರ ಜೊತೆ ಸಂವಾದ ನಡೆಸಿದ ಸೀತಾರಾಮನ್ ಕಾಂಗ್ರೆಸ್ ಅವಧಿಗಿಂತ ನಮ್ಮ ಒಪ್ಪಂದ ಅತ್ಯುತ್ತಮವಾಗಿದೆ ಎಂದು ಹೇಳುವ ಮೂಲಕ ಮತ್ತೊಮ್ಮೆ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡರು.

ಫ್ರಾನ್ಸ್ ಡಸಾಲ್ಟ್ ಏವಿಯೇಶನ್ ಸಹಯೋಗದೊಂದಿಗೆ ರಫೇಲ್ ಯುದ್ದ ವಿಮಾನಗಳನ್ನು ನಿರ್ಮಿಸುವ ಸಾಮರ್ಥ್ಯ ಎಚ್‍ಎಎಲ್‍ಗೆ ಇರಲಿಲ್ಲ. ಇದು ಯುಪಿಎ ಅವಧಿಯಲ್ಲಿ ಮಾಡಿಕೊಂಡಿದ್ದ 126 ರಫೆಲ್ ಯುದ್ದ ವಿಮಾನಗಳ ಖರೀದಿ ಒಪ್ಪಂದ ಮುರಿದು ಬೀಳಲು ಪ್ರಮಖ ಕಾರಣ. ರಫೇಲ್ ಯುದ್ದ ವಿಮಾನಗಳ ಖರೀದಿ ಸಂಬಂಧ ಎಚ್‍ಎಎಲ್ ಮತ್ತು ಫ್ರಾನ್ಸ್’ನ ಡಸಾಲ್ಟ್ ಏವಿಯೇಶನ್ ಜೊತೆಗೆ ಹಲವು ಸುತ್ತಿನ ಮಾತುಕತೆಗಳು ನಡೆದವು. ಮಾತುಕತೆ ವೇಳೆ ರಫೇಲ್ ಯುದ್ದ ವಿಮಾನಗಳನ್ನು ಭಾರತದಲ್ಲಿಯೇ ಉತ್ಪಾದಿಸಲು ಮುಂದಾದರೆ ಅದರ ಬೆಲೆ ಮೂಲ ಬೆಲೆಗಿಂತ ದುಪ್ಪಟ್ಟಾಗುವ ವಿಚಾರ ಬೆಳಕಿಗೆ ಬಂದಿತ್ತು. ಒಂದು ವೇಳೆ ವಿಮಾನಗಳನ್ನು ಭಾರತದಲ್ಲೇ ತಯಾರಿಸಿದರೆ, ಅವುಗಳಿಗೆ ಗ್ಯಾರೆಂಟಿ ಕೊಡಬೇಕಾಗಿತ್ತು. ಆದರೆ ವಿಮಾನಗಳಿಗೆ ಗ್ಯಾರಂಟಿ ಕೊಡುವ ಪರಿಸ್ಥಿತಿಯಲ್ಲಿ ಎಚ್‍ಎಎಲ್ ಇರಲಿಲ್ಲ. ಹೀಗಾಗಿ ಡಸಾಲ್ಟ್ ಕಂಪೆನಿಯು ಜಂಟಿಯಾಗಿ ರಫೇಲ್ ವಿಮಾನಗಳನ್ನು ನಿರ್ಮಿಸುವ ಮಾತುಕತೆಯನ್ನು ನಿಲ್ಲಿಸಿತ್ತು ಎಂದು ವಿವರಿಸಿದರು.

ಯುಪಿಎ ಸರ್ಕಾರದ ಅವಧಿಯಲ್ಲಿನ ಒಪ್ಪಂದಕ್ಕೆ ಹೋಲಿಸಿದರೆ, ಮುಂದಿನ ವರ್ಷ 2019ರ ಸೆಪ್ಟೆಂಬರ್ ತಿಂಗಳಿನಲ್ಲಿಯೇ ರಫೇಲ್ ಯುದ್ಧವಿಮಾನಗಳು ಸೇನೆಗೆ ಸಿಗಲಿವೆ. ಇವುಗಳು ಶಸ್ತ್ರಬಳಕೆ, ಏವಿಯೋನಿಕ್ಸ್ ತಂತ್ರಜ್ಞಾನ ಹಾಗೂ ಇನ್ನೂ ಅನೇಕ ಉನ್ನತ ತಂತ್ರಜ್ಞಾನಗಳನ್ನು ಒಳಗೊಂಡಿವೆ. 2016ರಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು 36 ರಫೇಲ್ ಯುದ್ಧವಿಮಾನಗಳನ್ನು ಖರೀದಿಸಲು ಫ್ರಾನ್ಸ್’ನೊಂದಿಗೆ ಒಪ್ಪಂದ ಮಾಡಿಕೊಟ್ಟಿತ್ತು. ಈ ವಿಚಾರದಲ್ಲಿ ಬಹುಕೋಟಿ ಹಗರಣ ನಡೆದಿದ್ದು, ಎಚ್‍ಎಎಲ್‍ನೊಂದಿಗೆ ಒಪ್ಪಂದ ಮಾಡಿಕೊಂಡಿಲ್ಲವೆಂದು ಕಾಂಗ್ರೆಸ್ ಗಂಭೀರವಾಗಿ ಆರೋಪ ಮಾಡುತ್ತಿದೆ ಎಂದು ತಿಳಿಸಿದರು.

ಕಾಂಗ್ರೆಸ್‍ಗೆ ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ಮಾತನಾಡಲು ಯಾವುದೇ ವಿಷಯಗಳು ಸಿಗಲಿಲ್ಲ. ಹೀಗಾಗಿ ಅವರು ರಫೇಲ್ ಒಪ್ಪಂದದಲ್ಲಿ ಬಹುಕೋಟಿ ಹಗರಣ ನಡೆದಿದೆ ಎಂದು ಹೇಳಲು ಮುಂದಾದರು. ಆದರೆ ನಮ್ಮದು ದೇಶಕಂಡ ಅತ್ಯಂತ ಸ್ವಚ್ಛ ಹಾಗೂ ಭ್ರಷ್ಟಾಚಾರ ಮುಕ್ತ ಸರ್ಕಾರ ಎಂಬುದು ಜನರಿಗೆ ಗೊತ್ತಿದೆ. ಹತಾಶಾ ಮನೋಭಾವನೆಗೆ ತಲುಪಿರುವ ಕಾಂಗ್ರೆಸ್ ನಮ್ಮ ಸರ್ಕಾರದಿಂದ ಕಲಿಯಬೇಕಾದ ಪಾಠಗಳು ಸಾಕಷ್ಟು ಇವೆ ಎಂದು ಹೇಳಿದರು.

ರಫೇಲ್ ಒಪ್ಪಂದದ ಕುರಿತು ವಿರೋಧ ಪಕ್ಷಗಳಿಗೆ ಮನವರಿಕೆ ಮಾಡಿಕೊಡುವ ಆಸಕ್ತಿ ನಮಗಿಲ್ಲ. ವಿರೋಧ ಪಕ್ಷಗಳು ಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಅವರಿಗೆ ವಾಯುಪಡೆಯ ಕಾರ್ಯಾಚರಣೆ ಸನ್ನದ್ಧತೆಯು ಹೇಗೆ ಇರಬೇಕೆಂಬುದರ ಕಾಳಜಿ ಇಲ್ಲ. ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ 526 ಕೋಟಿಗೆ ಒಪ್ಪಂದ ಆಗಿತ್ತು. ಆದರೆ ಬಿಜೆಪಿ ಅವಧಿಯಲ್ಲಿ 1,670 ಕೋಟಿ ರೂಪಾಯಿ ಏರಿಕೆ ಮಾಡಿದೆ ಎಂದು ಕಾಂಗ್ರೆಸ್ ಆರೋಪ ಮಾಡುತ್ತಿದೆ. ನಾನು ಇಷ್ಟಂತು ಹೇಳಬಲ್ಲೆ, ಯುಪಿಎ ಅವಧಿಯಲ್ಲಿನ ಒಪ್ಪಂದದ ವಿಮಾನಗಳು ಕೇವಲ ಹಾರುವ ಮತ್ತು ಇಳಿಯುವ ಸಾಮರ್ಥ್ಯವನ್ನು ಮಾತ್ರ ಹೊಂದಿದ್ದವು. ಆದರೆ ನಮ್ಮ ಅವಧಿಯಲ್ಲಿನ ವಿಮಾನಗಳು ಅತ್ಯಾಧುನಿಕ ತಂತ್ರಜ್ಞಾನಗಳ ಸಹಿತ ಶತ್ರುಗಳೊಂದಿಗೆ ಹೋರಾಡುವ ಶಕ್ತಿಯನ್ನು ಸಹ ಹೊಂದಿವೆ ಎಂದು ತಿಳಿಸಿದರು.

ಏನಿದು ರಫೇಲ್ ಒಪ್ಪಂದ?
ಯುಪಿಎ ಸರ್ಕಾರದ ಅವಧಿಯಲ್ಲಿ 2012ರಲ್ಲಿ ಫ್ರಾನ್ಸ್’ನ ಡಸಾಲ್ಟ್ ಏವಿಯೇಶನ್ ಸಂಸ್ಥೆಯೊಂದಿಗೆ 126 ಮಧ್ಯಮ ಶ್ರೇಣಿಯ ಬಹುಮುಖಿ ಯುದ್ಧ ವಿಮಾನಗಳ(ಎಂಎಂಆರ್’ಸಿಎ-ಮೀಡಿಯಂ ಮಲ್ಟಿ ರೋಲ್ ಕಾಂಬಾಟ್ ಏರ್’ಕ್ರಾಫ್ಟ್) ಖರೀದಿಗೆ ಒಪ್ಪಂದ ಮಾಡಿಕೊಟ್ಟಿತ್ತು. ಮಾತುಕತೆಯ ನಿಯಮಗಳ ಪ್ರಕಾರ ಡಸಾಲ್ಟ್ ಏವಿಯೇಶನ್ ಸಂಸ್ಥೆಯು 18 ರಫೇಲ್ ಜೆಟ್‍ಗಳನ್ನು ಹಾರಾಡಲು ಸನ್ನದ್ಧವಾಗಿರುವ ಸ್ಥಿತಿಯಲ್ಲಿ ಭಾರತಕ್ಕೆ ಪೂರೈಸಬೇಕು ಹಾಗೂ ಭಾರತದ ಎಚ್‍ಎಎಲ್‍ನೊಂದಿಗೆ ಉಳಿದ 108 ಯುದ್ಧ ವಿಮಾನಗಳನ್ನು ಭಾರತದಲ್ಲಿಯೇ ತಯಾರಿಸಬೇಕೆನ್ನುವ ಷರತ್ತನ್ನು ಹಾಕಿತ್ತು.

ಎಚ್‍ಎಎಲ್ ಕೈ ಬಿಡಲು ಕಾರಣಗಳೇನು?
ಎಚ್‍ಎಎಲ್ ಸಂಸ್ಥೆಗೆ ರಫೇಲ್ ಯುದ್ಧ ವಿಮಾನಗಳನ್ನು ನಿರ್ಮಿಸುವ ಸಾಮರ್ಥ್ಯವಿಲ್ಲವೆಂಬುದೇ ಪ್ರಮುಖ ಕಾರಣ. ಅಲ್ಲದೇ ಎಚ್‍ಎಎಲ್‍ನಲ್ಲಿ ಉತ್ಪಾದನೆಯಾಗುವ ವಿಮಾನಗಳ ವೆಚ್ಚವು ಫ್ರಾನ್ಸ್’ನಲ್ಲಿ ತಯಾರಾಗುವ ವಿಮಾನಗಳ ವೆಚ್ಚಕ್ಕಿಂತ ದುಬಾರಿಯಾಗಿತ್ತು. ಸಂಸ್ಥೆಗೆ ವಿಮಾನಗಳ ಉತ್ಪಾದನೆಗೆ ಬೇಕಾಗುವ ಸಂಪನ್ಮೂಲಗಳ ಬಗ್ಗೆ ಅಂದಿನ ಕೇಂದ್ರ ಸರ್ಕಾರ ತಲೆ ಕೆಡಿಸಿಕೊಂಡಿರಲಿಲ್ಲ. ಇದಲ್ಲದೇ 2013ರ ರಕ್ಷಣಾ ಸಚಿವ ಎ.ಕೆ.ಆಂಟನಿಯವರು ಪದೇ ಪದೇ ಯುದ್ಧ ವಿಮಾನಗಳ ಖರೀದಿ ಮಾತುಕತೆಯಲ್ಲಿ ಮಧ್ಯ ಪ್ರವೇಶಿಸುತ್ತಿದ್ದರಿಂದ ಫ್ರಾನ್ಸ್ ಕಂಪೆನಿಯು ಜಂಟಿ ತಯಾರಿಕೆಗೆ ಹಿಂದೇಟು ಹಾಕಿತು ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply

Your email address will not be published. Required fields are marked *