ನವರಾತ್ರಿ ಹಬ್ಬದ 9ನೇ ದಿನ (ಅಕ್ಟೋಬರ್ 19) ಸಿದ್ಧಿದಾತ್ರಿ ದೇವಿಯನ್ನ ಪೂಜಿಸಲಾಗುತ್ತದೆ. ದೇವಿಗೆ ನವಿಲು ಹಸಿರು ಬಣ್ಣ ಪ್ರಿಯವಾಗುವುದರಿಂದ ಈ ದಿನ ನವಿಲು ಹಸಿರು ಬಣ್ಣದ ಬಟ್ಟೆ ಧರಿಸಿ ಪೂಜೆ ನೆರವೇರಿಸಲಾಗುತ್ತದೆ. ಈ ಬಣ್ಣವು ಮುಕ್ತ ಹೃದಯದ ಪ್ರತೀಕವಾಗಿದೆ.
ಇಂದು ನವದುರ್ಗೆಯರ ಕೊನೆಯ ಹಾಗೂ ಪರಮೋಚ್ಚ ಸ್ವರೂಪವಾದ ಸಿದ್ಧಿದಾತ್ರಿ ದೇವಿಯನ್ನು ಆರಾಧಿಸಲಾಗುತ್ತದೆ. ‘ಸಿದ್ಧಿ’ ಎಂದರೆ ಆಧ್ಯಾತ್ಮಿಕ ಶಕ್ತಿ, ಜ್ಞಾನ ಮತ್ತು ಪರಿಪೂರ್ಣತೆ. ‘ದಾತ್ರಿ’ ಎಂದರೆ ಅದನ್ನು ದಯಪಾಲಿಸುವವಳು ಅಥವಾ ಕರುಣಿಸುವವಳು. ಎಲ್ಲಾ ರೀತಿಯ ಲೌಕಿಕ ಮತ್ತು ಅಲೌಕಿಕ ಇಷ್ಟಾರ್ಥಗಳನ್ನು ಈಡೇರಿಸುವ ಮಹಾಮಾತೆಯೇ ಸಿದ್ಧಿದಾತ್ರಿ.
ದೇವಿಯ ದಿವ್ಯ ಸ್ವರೂಪ:
ಸಿದ್ಧಿದಾತ್ರಿಯು ಅರಳಿದ ಕಮಲದ ಹೂವಿನ ಮೇಲೆ (ಪದ್ಮಾಸನದಲ್ಲಿ) ಶಾಂತವಾಗಿ ಕುಳಿತಿದ್ದಾಳೆ. ಆಕೆಯ ವಾಹನ ಸಿಂಹವೂ ಹೌದು. ದೇವಿಗೆ ನಾಲ್ಕು ಕೈಗಳಿದ್ದು, ಬಲಗೈಗಳಲ್ಲಿ ಚಕ್ರ ಮತ್ತು ಗದೆ, ಎಡಗೈಗಳಲ್ಲಿ ಶಂಖ ಮತ್ತು ಕಮಲದ ಹೂವನ್ನು ಧರಿಸಿದ್ದಾಳೆ. ದೇವ, ಗಂಧರ್ವ, ಯಕ್ಷ, ಸಿದ್ಧರು ಹಾಗೂ ಮುನಿಗಳೆಲ್ಲರೂ ತಮ್ಮ ಸಿದ್ಧಿಗಳ ಪ್ರಾಪ್ತಿಗಾಗಿ ಈಕೆಯನ್ನೇ ಪೂಜಿಸುತ್ತಾರೆ.
ಪೂಜಾ ವಿಧಾನ:
ನವಿಲು ಹಸಿರು (Peacock Green) ಬಣ್ಣದ ಬಟ್ಟೆ ಧರಿಸಿ ಪೂಜಿಸುವುದು ಅತ್ಯಂತ ಶುಭಕರ. ಇದು ಸಮೃದ್ಧಿ, ಶಾಂತಿ ಮತ್ತು ಶುದ್ಧ ಪ್ರಕೃತಿಯ ಸಂಕೇತವಾಗಿದೆ. ದೇವಿಗೆ ಎಳ್ಳು ಅಥವಾ ಎಳ್ಳಿನಿಂದ ಮಾಡಿದ ಖಾದ್ಯಗಳು, ಕಡಲೆ ಕಾಳು, ಹಲ್ವಾ ಮತ್ತು ಖೀರು (ಪಾಯಸ) ಅತ್ಯಂತ ಪ್ರಿಯವಾದ ನೈವೇದ್ಯಗಳಾಗಿವೆ.
ನವಮಿಯ ದಿನ ಕನ್ಯಾ ಪೂಜೆಯನ್ನು ನೆರವೇರಿಸಿ, ನವರಾತ್ರಿ ವ್ರತದ ಪೂರ್ಣ ಫಲಕ್ಕಾಗಿ ನವಚಂಡಿ ಹೋಮ/ಹವನವನ್ನು ಮಾಡುವುದು ರೂಢಿಯಲ್ಲಿದೆ.

