ಕೊನೇ ಹಂತಕ್ಕೆ ಬಂದು ನಿಂತಿದೆ ಯಶ್ 19 (Yash 19) ಸಿನಿಮಾ. ಇನ್ನೂ ಆರಂಭವೇ ಆಗಿಲ್ಲ. ಅದು ಹೇಗೆ ಕೊನೆ ಹಂತ? ಪ್ರಶ್ನೆ ಏಳುತ್ತದೆ. ಉತ್ತರಕ್ಕೂ ಮುನ್ನ ಇದಕ್ಕೆಲ್ಲ ತಳಪಾಯ ಹಾಕಿದ ಆ ಮಹಿಳಾ ನಿರ್ದೇಶಕಿಯ ಸಿನಿಮಾ ಶ್ರದ್ಧೆ, ಭಕ್ತಿ ಹಾಗೂ ತ್ಯಾಗದ ಕತೆ ಕೇಳಲೇಬೇಕು. ಯಶ್ 19 ಚಿತ್ರದ ಆ ಮಲಯಾಳಂ ನಿರ್ದೇಶಕಿ ಯಾರು? ಹೇಗೆ ಯಶ್ ಮತ್ತು ನಿರ್ದೇಶಕಿ (Director) ಹೊಂದಿಕೊಂಡರು? ಎಂಟು ವರ್ಷದ ಮಗಳನ್ನು ಬಿಟ್ಟು ಆರು ತಿಂಗಳಿಂದ ಆ ಮಹಿಳೆ ಬೆಂಗಳೂರಿನಲ್ಲಿ ಹೇಗೆ ಕಾಯಕ ಮಾಡುತ್ತಿದ್ದಾರೆ? ಯಾವಾಗ ಆರಂಭ ರಾಕಿ ನಯಾ ಯುದ್ಧ? ಇಲ್ಲಿದೆ ಎಕ್ಸ್‌ಕ್ಲೂಸಿವ್ ಸ್ಟೋರಿ.
ಯಶ್ 19, ಭಕ್ತಗಣ ಈ ಸಿನಿಮಾದ ಸುದ್ದಿಯನ್ನು ಕೇಳಲು ತುದಿಗಾಲಲ್ಲಿ ನಿಂತಿದ್ದಾರೆ. ಬರೀ ಫ್ಯಾನ್ಸ್ ಮಾತ್ರ ಅಲ್ಲ, ಇಡೀ ವಿಶ್ವವೇ ರಾಕಿಭಾಯ್ ಇಡುವ ಹೊಸ ಹೆಜ್ಜೆಯನ್ನು ಕಣ್ಣುಜ್ಜಿಕೊಂಡು ಕಾಯುತ್ತಿದ್ದಾರೆ. ಕೆಜಿಎಫ್ ಮುಗಿದು ವರ್ಷವಾಗುತ್ತಾ ಬಂತು. ಇನ್ನೇನು ಮತ್ತೆ? ಈ ಪ್ರಶ್ನೆ ಕೇಳಿದವರಿಗೆ ಯಶ್ ಉತ್ತರ ಒಂದೇ. ‘ವೇಟ್ ಮಾಡಿ ಬ್ರದರ್…ಕಾದಷ್ಟು ಹಣ್ಣಿನ ರುಚಿ ಜಾಸ್ತಿ’ ಗಡ್ಡದ ಮೇಲೆ ಕೈ ಎಳೆದುಕೊಳ್ಳುತ್ತಿದ್ದಾರೆ. ಅದೀಗ ಮುಗಿವ ಹಂತಕ್ಕೆ ಬಂದಿದೆ. ಇನ್ನೇನು ಕೆಲವೇ ದಿನಗಳಲ್ಲಿ ಅದ್ದೂರಿಯಾಗಿ ಟೈಟಲ್ ಹಾಗೂ ಉಳಿದ ವಿವರ ಹರವಿಡಲಿದ್ದಾರೆ ಯಶ್.ಇದನ್ನೂ ಓದಿ:ಶಿಕ್ಷಕಿ ಜೊತೆ ಸಪ್ತಪದಿ ತುಳಿಯಲು ಸಜ್ಜಾದ ಪೈಲ್ವಾನ್ ಖ್ಯಾತಿಯ ನಟ
Advertisement
ಕನ್ನಡ ಸ್ಟಾರ್‌ಗಳನ್ನು ಬಿಡಿ. ಅವರನ್ನು ದಾಟಿ ಯಶ್ (Yash) ಮುಂದೆ ಹೋಗಿದ್ದಾರೆ. ಅಥವಾ ಜನರು ಹಾಗಂತ ಆಶೀರ್ವಾದ ಮಾಡಿದ್ದಾರೆ. ಇನ್ನೇನಿದ್ದರೂ ಅವರದ್ದು ಪ್ಯಾನ್ ಇಂಡಿಯಾ ಲೆವೆಲ್. ಅದಕ್ಕೆ ತಕ್ಕಂತೆ ಕತೆ, ಚಿತ್ರಕತೆ, ಮೇಕಿಂಗ್ ಮಾಡಬೇಕು. ಎರಡು ಮೂರು ವರ್ಷದಿಂದ ಇದಕ್ಕಾಗಿ ತಪಸ್ಸು ಮಾಡಿದ್ದಾರೆ. ಹಲವಾರು ಸ್ಟಾರ್ ಡೈರೆಕ್ಟರ್‌ಗಳು ಭೇಟಿ ಮಾಡಿದ್ದಾರೆ. ಎಲ್ಲರ ಕತೆ ಕೇಳಿದ್ದಾರೆ. ಅದ್ಯಾಕೊ.. ರಾಕಿಭಾಯ್ ಮನಸು ಹುಚ್ಚೆದ್ದು ಕುಣಿಯಲಿಲ್ಲ. ಈ ಪಾತ್ರ ಮಾಡಲೇಬೇಕು ಅನ್ನಿಸಲಿಲ್ಲ. ಹುರುಪು ಮೂಡಿಸಲಿಲ್ಲ. ಯಾರ ಬಳಿ ಇದೆ ನಂಗೆ ಹೊಂದುವ ಕತೆ. ಯಾರು ನನ್ನನ್ನು ಹ್ಯಾಂಡಲ್ ಮಾಡುತ್ತಾರೆ. ಯೋಚನೆ ಜಾರಿಯಲ್ಲಿತ್ತು. ಆಗಲೇ ಬಂದು ನಿಂತರು ಗೀತು ಮೋಹನ್‌ದಾಸ್.
Advertisement
Advertisement
ರಾಜಮೌಳಿ, ಶಂಕರ್, ಸುಕುಮಾರ್, ಬನ್ಸಾಲಿ ಹೀಗೆ ದೇಶದ ಎಲ್ಲ ಭಾಷೆಯ ಟಾಪ್ ಸ್ಟಾರ್ ಡೈರೆಕ್ಟರ್ ಜೊತೆಯೇ ಯಶ್ ಹೊಸ ಸಿನಿಮಾ ಮಾಡ್ತಾರೆ ಬಿಡಪ್ಪ. ಈ ರೀತಿ ಎಲ್ಲರೂ ಅಂದುಕೊಂಡಿದ್ದರು. ಆ ಸಮಯದಲ್ಲಿ ಇದೇ ಸಮಾಚಾರ ಎಲ್ಲೆಡೆ ಧಗಧಗಿಸುತ್ತಿತ್ತು. ಯಾರು ಯಾರು ಯಾರು ಡೈರೆಕ್ಟರ್? ಉತ್ತರ ಸಿಗಲಿಲ್ಲ. ಈಗ ಎಲ್ಲದಕ್ಕೂ ಪೂರ್ಣ ವಿರಾಮವನ್ನು ಇಟ್ಟಿದ್ದಾರೆ. ಅಫ್‌ಕೋರ್ಸ್ ಅಧಿಕೃತವಾಗಿ ಯಶ್ ಟೀಮ್ ಹೇಳಿಲ್ಲ. ಆದರೆ ಖಬರ್ ಮಾತ್ರ ಪಕ್ಕಾ ಅಂದ್ರ ಪಕ್ಕಾ. ಆಗಲೇ ನೋಡಿ ಮಲಯಾಳಂ ನಿರ್ದೇಶಕಿ ಗೀತು ಮೋಹನ್‌ದಾಸ್ ಬೆಂಗಳೂರಿಗೆ ಕಾಲಿಟ್ಟಿದ್ದು, ಯಶ್‌ಗೆ ಕತೆ ಹೇಳಿದ್ದು ಮುಂದಾಗಿದ್ದು ಇತಿಹಾಸ. ಗೀತು, ಯಶ್ 19 ಚಿತ್ರಕ್ಕೆ ಕ್ಯಾಮೆರಾ ಹಿಡಿಯಲಿದ್ದಾರೆ ಅದರಲ್ಲಿ ನೋ ಡೌಟ್.
Advertisement
ಗೀತು ಮೋಹನ್‌ದಾಸ್ (Geethu Mohandas) ಈಗ ತಾನೇ ಈ ಹೆಸರನ್ನು ಕನ್ನಡಿಗರು ಕೇಳುತ್ತಿದ್ದಾರೆ. ಮಲಯಾಳಂನಲ್ಲಿ (Malyalam) ಇವರಿಗೆ ದೊಡ್ಡ ಹೆಸರಿದೆ. ಆದರೆ ಮಾಸ್ ಸಿನಿಮಾ ಕೆಟಗರಿಯಲ್ಲಿ ಅಲ್ಲ. ಇವರದ್ದು ಏನಿದ್ದರೂ ಒಂಥರಾ ಬ್ರಿಡ್ಜ್ ಅಥವಾ ಕಲಾತ್ಮಕ ಸಿನಿಮಾ. 42 ವರ್ಷದ ಗೀತು ಬಾಲನಟಿಯಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಬಾಲ ನಟಿ ಹಾಗೂ ನಟಿಯಾಗಿ ಮೂವತ್ತಕ್ಕೂ ಹೆಚ್ಚು ಸಿನಿಮಾದಲ್ಲಿ ನಟಿಸಿದ್ದಾರೆ. ಅನೇಕ ಪ್ರಶಸ್ತಿ ಪಡೆದಿದ್ದಾರೆ. ಅದ್ಯಾಕೊ ಇವರಿಗೆ ನಿರ್ದೇಶನದ ಹುಡುಕಿ ಬಂದಿತು. ಆಗಲೇ ಇವರು ತಮ್ಮದೇ ಪ್ರೊಡಕ್ಷನ್ ಕಂಪನಿ ಸ್ಥಾಪಿಸಿದರು. ಕಿರು ಚಿತ್ರವನ್ನು ನಿರ್ಮಿಸಿ, ನಿರ್ದೇಶಿದರು. ಅದಕ್ಕೆ ಅಂತರಾಷ್ಟ್ರೀಯ ಪ್ರಶಸ್ತಿಗಳು ದಕ್ಕಿದವು.
ಇಲ್ಲಿವರೆಗೆ ಗೀತು ನಿರ್ದೇಶನ ಮಾಡಿದ್ದು ಎರಡೇ ಸಿನಿಮಾ. ಲೈರ್ಸ್ ಡೀಸ್ ಮತ್ತು ಮೋತಾನ್. ಹಿಂದಿ ಹಾಗೂ ಮಲಯಾಳಂ ಭಾಷೆ. ಎರಡಕ್ಕೂ ರಾಷ್ಟ್ರ ಪ್ರಶಸ್ಸಿ ಹಾಗೂ ಅಂತರಾಷ್ಟ್ರೀಯ ಪ್ರಶಸ್ತಿ ಲೆಕ್ಕವಿಲ್ಲದಷ್ಟು ಸಿಕ್ಕವು. ಇವರ ಬಯೋಡೇಟಾ ಇಷ್ಟೇ. ಒಂದೇ ಒಂದು ಮಾಸ್ ಸಿನಿಮಾ ಮಾಡಿಲ್ಲ, ಮಾಸ್ ಹೀರೋಗೆ ಕ್ಯಾಮೆರಾ ಹಿಡಿದಿಲ್ಲ. ಅಂಥ ನಿರ್ದೇಶಕಿಯನ್ನು ಯಶ್ ಆಯ್ಕೆ ಮಾಡಿಕೊಂಡಿದ್ದಾರೆ. ಅದು ಹೇಗೆ ಸಾಧ್ಯ ಎಂದು ಕೇಳುವಂತಿಲ್ಲ. ಇಬ್ಬರ ನಡುವೆ ಕತೆ. ಚಿತ್ರಕತೆ ಮೇಕಿಂಗ್ ಎಲ್ಲ ವಿಷಯದಲ್ಲಿ ಹೊಂದಾಣಿಕೆ ಹುಟ್ಟಿದಾಗ ಮಾತ್ರ ಕೈ ಜೋಡಿಸಲು ಸಾಧ್ಯ ಅಲ್ಲವೆ? ಅದಾಗಿದ್ದಕ್ಕೇ ಕಳೆದ ಆರು ತಿಂಗಳಿಂದ ಗೀತು ಬೆಂಗಳೂರಿನಲ್ಲಿದ್ದಾರೆ. ಎಂಟು ವರ್ಷದ ಮಗಳನ್ನು ಕೇರಳದಲ್ಲೇ ಬಿಟ್ಟಿದ್ದಾರೆ.
ಗೀತು ಮೋಹನ್ ದಾಸ್‌ಗೆ ಏಳೆಂಟು ವರ್ಷದ ಮಗಳಿದ್ದಾಳೆ. ಹೆಸರು ಆರಾಧನಾ. ಹೆಚ್ಚು ಕಮ್ಮಿ ಐದಾರು ತಿಂಗಳಿಂದ ಬೆಂಗಳೂರಿನ ವೆಸ್ಟ್ ಎಂಡ್ ಹೋಟೆಲ್‌ನಲ್ಲಿದ್ದಾರೆ ಗೀತು. ಹಗಲು ರಾತ್ರಿ ದುಡಿಯುತ್ತಿದ್ದಾರೆ. ಕನ್ನಡ ಬರಲ್ಲ. ಆದರೂ ಎಲ್ಲ ವಿಭಾಗಕ್ಕೆ ಜೀವ ತುಂಬಿದ್ದಾರೆ. ಒಂದೊಂದು ದೃಶ್ಯಕ್ಕೂ ಪಕ್ಕಾ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಯಾವ್ಯಾವ ದೃಶ್ಯ, ಎಲ್ಲೆಲ್ಲಿ ಶೂಟಿಂಗು, ಸೆಟ್ಟು,ಸ್ಥಳ ಯಾವುದೂ ಹೋಗಲಿ ಬಿಡು ಎನ್ನುವಂತಿಲ್ಲ. ಎಲ್ಲವೂ ಕಾಗದದ ಮೇಲೆ ಮೂಡಬೇಕು. ಅದು ಕಾರ್ಯರೂಪಕ್ಕೆ ಬರಬೇಕು. ಹೀಗೆ ಇಡೀ ಸಹಾಯಕ ಹುಡುಗರ ತಂಡದ ಜವಾಬ್ದಾರಿ ಈ ಮಹಿಳೆ ಹೊತ್ತುಕೊಂಡಿದ್ದಾರೆ. ಅಫ್‌ಕೋರ್ಸ್ ಇದಕ್ಕೆಲ್ಲ ಇಂಚಿಂಚಾಗಿ ಗೈಡ್ ಮಾಡಲು ಯಶ್ ಇದ್ದೇ ಇದ್ದಾರೆ.
ಯಶ್ ತಲೆಯಲ್ಲಿ ಎಲ್ಲವೂ ನಿಕ್ಕಿಯಾಗಿದೆ. ಮುಂದೆ ಯಾವ ರೀತಿ ಹೆಜ್ಜೆ ಇಡಬೇಕು ? ಯಾವ ಕತೆ ಮಾಡಬೇಕು ? ಕೆಜಿಎಫ್‌ಗಿಂತ ಭಿನ್ನವಾಗಿ ಹಾಗೂ ಅದಕ್ಕಿಂತ ಎತ್ತರಕ್ಕೆ ಸಿನಿಮಾವನ್ನು ಹೇಗೆ ತೆಗೆದುಕೊಂಡು ಹೋಗಬೇಕು ? ನ್ಯಾಶನಲ್ ಮಾರ್ಕೆಟ್‌ಗೆ ನುಗ್ಗಿದ್ದೇವೆ…ಇನ್ನು ಇಂಟರ್‌ನ್ಯಾಶನಲ್ ಮಟ್ಟ ಮುಟ್ಟುವುದು ಹೇಗೆ ? ಯಾವ ರೀತಿ ಹಾಲಿವುಡ್‌ಗೆ ಸ್ಯಾಂಡಲ್‌ವುಡ್ ಖದರ್ ತೋರಿಸಬೇಕು ? ಇದೇ ಕ್ಷಣ ಕ್ಷಣ ತಲೆಯಲ್ಲಿ ಓಡಾಡುತ್ತಿದೆ. ನಿಯತ್ತಿನ ತಂತ್ರಜ್ಞರನ್ನು ಒಂದುಗೂಡಿಸಿದ್ದಾರೆ. ಎಲ್ಲರೂ ಶಿಸ್ತು, ಶ್ರದ್ಧೆ ಹಾಗೂ ನಿಯತ್ತಿಗೆ ಇನ್ನೊಂದು ಹೆಸರಾದವರು. ಅವರಿಂದಲೇ ಹೊಸ ಚಿತ್ರಕ್ಕೆ ತುಪ್ಪದ ದೀಪ ಬೆಳಗಲಿದ್ದಾರೆ. ಗೀತು ಮೋಹನ್ ದಾಸ್ ನಮ್ಮ ಯಶ್ ಯಾಗಕ್ಕೆ ಉಘೇ ಉಘೆ ಎಂದಿದ್ದಾರೆ. ಈ ಸುದ್ದಿ ಕೇಳುತ್ತಿದ್ದಂತೆಯೇ ಒಬ್ಬೊಬ್ಬರು ಒಂದೊಂದು ರೀತಿ ಮಾತಾಡುತ್ತಾರೆ…ಅಥವಾ ಮಾತು ಶುರು ಮಾಡುತ್ತಾರೆ. ಹೆಸರೇ ಕೇಳದ…ಮಾಸ್ ಸಿನಿಮಾ ನಿರ್ದೇಶಿಸದ ಹೆಣ್ಣು ಅದು ಹೇಗೆ ಈ ಚಿತ್ರಕ್ಕೆ ಜೀವ ತುಂಬುತ್ತಾಳೆ ? ಯಶ್ ಅದ್ಯಾಕೆ ಈಕೆಯನ್ನು ಒಪ್ಪಿಕೊಂಡರು ? ಗ್ಯಾಂಗ್‌ಸ್ಟರ್ ಕತೆಯನ್ನು ಈ ಮಹಿಳೆ ನಿರ್ದೇಶಿಸಿ ಗೆಲ್ಲುತ್ತಾಳಾ ? ಕುತೂಹಲ ಹೆಚ್ಚಾಗುತ್ತಿದೆ. ಉತ್ತರ ಸಿನಿಮಾ ಮಾತ್ರ ಕೊಡುತ್ತದೆ. ಅದಕ್ಕಾಗಿ ಇನ್ನು ಒಂದೂವರೆ ವರ್ಷವೋ ಎರಡು ವರ್ಷವೋ ಕಾಯಬೇಕು, ಬೇರೆ ದಾರಿ ಇಲ್ಲ.