ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರದಿಂದ ಭಾರೀ ಮಳೆಯಾಗುತ್ತಿದ್ದು, ಇಂದು ಸುರಿದ ಮಳೆಗೆ ರಾಷ್ಟ್ರೀಯ ಹೆದ್ದಾರಿಯೇ ಕೊಚ್ಚಿಕೊಂಡು ಹೋಗಿದೆ.
ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಬಿಸಿರೋಡ್-ಅಡ್ಡಹೊಳೆ ಮಾರ್ಗದ ನಡುವೆ ಉಪ್ಪಿನಂಗಡಿಯ ನೀರಕಟ್ಟೆ ಪ್ರದೇಶದಲ್ಲಿ ನಡೆಯುತ್ತಿದ್ದ ಕಾಮಗಾರಿ ರಸ್ತೆ ಕೊಚ್ಚಿ ಹೋಗಿದೆ. ಇತ್ತೀಚೆಗಷ್ಟೇ ಮುಲ್ಲರಪಟ್ಣ ಸೇತುವೆ ಮುರಿದುಬಿದ್ದಿದ್ದು, ತಾತ್ಕಲಿಕವಾಗಿ ಜನ ತೂಗು ಸೇತುವೆ ಬಳಸುತ್ತಿದ್ರು. ಆದ್ರೆ ತೂಗು ಸೇತುವೆ ಗೆ ಹೋಗಲು ನಿರ್ಮಿಸಿದ ದಾರಿಯೇ ಪ್ರವಾಹಕ್ಕೊಳಗಾಗಿದ್ದು ಜನ ನಡೆದಾಡಲು ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನೂ ಓದಿ: ಮಹಾರಾಷ್ಟ್ರ ಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಿಂದ 2 ಸೇತುವೆ ಮುಳುಗಡೆ – ಜಿಲ್ಲಾಡಳಿತದಿಂದ ಸಾರ್ವಜನಿಕರಿಗೆ ಪ್ರವಾಹದ ಎಚ್ಚರಿಕೆ
Advertisement
Advertisement
ಫಲ್ಗುಣಿ ನದಿ ತುಂಬಿ ಹರಿಯುತ್ತಿದ್ದು, ಎರಡೂರಿನ ಸಂಪರ್ಕವೇ ಕಡಿತಗೊಂಡಿದೆ. ಹೀಗಾಗಿ ಕುಪ್ಪೆಪದವು ಮತ್ತು ಮುಲ್ಲರಪಟ್ಣ ಸಂಪರ್ಕ ಕಡಿತಗೊಂಡಿದೆ. ಕಳೆದ ಒಂದು ವಾರದ ಹಿಂದೆ ಸೇತುವೆ ಮುರಿದು ಬಿದ್ದಿದ್ದು, ಇದೀಗ ಮಳೆ ಜೋರಾಗಿ ತಾತ್ಕಲಿಕವಾಗಿ ಬಳಸುತ್ತಿದ್ದ ತೂಗುಸೇತುವೆ ಮೇಲೂ ಸಂಚಾರ ಸ್ಥಗಿತವಾಗಿರೋದ್ರಿಂದ ಸ್ಥಳೀಯ ನಿವಾಸಿಗಳ ಬದುಕು ಅತಂತ್ರವಾಗಿದೆ. ಇದನ್ನೂ ಓದಿ: ಉಡುಪಿಯಲ್ಲಿ ಭಾರೀ ಮಳೆ- ಉದ್ಯಾವರದಲ್ಲಿ ಮನೆ ಕುಸಿತ
Advertisement
ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿರೋ ಹಿನ್ನೆಲೆಯಲ್ಲಿ ಸುಳ್ಯ, ಪುತ್ತೂರು, ಬೆಳ್ತಂಗಡಿ, ಮೂಡುಬಿದಿರೆ ಭಾಗದಲ್ಲಿ ಶಾಲೆ, ಕಾಲೇಜಿಗೆ ರಜೆ ನೀಡಲಾಗಿದೆ. ಇನ್ನು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕುಮಾರಧಾರಾ ನದಿ ತುಂಬಿ ಹರಿದಿದ್ದು ಸ್ನಾನಘಟ್ಟ ಮುಳುಗಡೆಯಾಗಿದೆ. ಉಪ್ಪಿನಂಗಡಿ-ಸುಬ್ರಹ್ಮಣ್ಯ ಸಂಪರ್ಕಿಸುವ ರಾಜ್ಯ ಹೆದ್ದಾರಿಯ ಹೊಸ್ಮಠ ಸೇತುವೆಯೂ ಮುಳುಗಿದ್ದು, ಕುಕ್ಕೆಗೆ ಆಗಮಿಸುವ ಭಕ್ತರಿಗೆ ತೊಂದರೆಯಾಗಿದೆ. ನೇತ್ರಾವತಿ ಮತ್ತು ಕುಮಾರಧಾರಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ನದಿ ದಡಕ್ಕೆ ತೆರಳದಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ಇದನ್ನೂ ಓದಿ: ದಕ್ಷಿಣ ಕನ್ನಡದಲ್ಲಿ ಭಾರೀ ಮಳೆ – ಶಾಲಾ, ಕಾಲೇಜುಗಳಿಗೆ ರಜೆ
Advertisement
ಮೃತರಿಗೆ ಪರಿಹಾರ:
ಪುತ್ತೂರಿನ ಹೆಬ್ಬಾರಬೈಲಿನಲ್ಲಿ ಮನೆ ಕುಸಿದು ಅಜ್ಜಿ ಪಾರ್ವತಿ (65) ಹಾಗೂ ಮೊಮ್ಮಗ ಧನುಷ್ (11) ಮೃತಪಟ್ಟಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತದಿಂದ ಮೃತರಿಗೆ ತಲಾ 5 ಲಕ್ಷ ಪರಿಹಾರ ಘೋಷಣೆ ಮಾಡಲಾಗಿದೆ. ಪರಿಹಾರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಸೂಚನೆ ನೀಡಿದ್ದರು. ಮಳೆ ಪರಿಸ್ಥಿತಿ ನಿಗಾ ಇಡಲು ಸಚಿವ ಖಾದರ್ ಜಿಲ್ಲಾಧಿಕಾರಿಗೆ ಸೂಚನೆ ನಿಡಿದ್ದಾರೆ.