ಬೆಂಗಳೂರು: ಹನುಮಧ್ವಜ (Hanuma Flag) ಬಳಿಕ ಇದೀಗ ಹಸಿರು ಬಾವುಟ ತೆರವು ವಿವಾದವಾಗಿದೆ. ಮಂಡ್ಯದ ಕೆರಗೋಡು (Keragodu Mandya) ಬಳಿಕ ಬೆಂಗಳೂರಿನ ಶಿವಾಜಿನಗರಕ್ಕೂ ಧ್ವಜ ಗಲಾಟೆ ಕಾಲಿಟ್ಟಿದೆ.
ಶಿವಾಜಿನಗರದ (Shivajinagar) ಚಾಂದಿನಿ ಚೌಕ್‍ನ ಬಳಿಯಲ್ಲಿ ಬಿಬಿಎಂಪಿ ಅಳವಡಿಕೆ ಮಾಡಿರುವ ವಿದ್ಯುತ್ ಕಂಬದಲ್ಲಿ ಹಸಿರು ಧ್ವಜವನ್ನು ಹಾರಿಸಲಾಗಿತ್ತು. ಇದರ ಫೋಟೋ ತೆಗೆದು ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡುವ ಕೆಲಸ ಶುರು ಮಾಡಿದ್ರು. ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿದ್ದ ಜನರು ಪ್ರಶ್ನೆ ಮಾಡ್ತಾ ಇದ್ರು. ಈ ಬಗ್ಗೆ ಯತ್ನಾಳ್ ಟ್ವೀಟ್ ಮಾಡಿದ್ರು.
ಮಾನ್ಯ @CPBlr @DCPEASTBCP ಅವರೇ, ಈ ರೀತಿ ಶತ್ರು ದೇಶದ ಬಣ್ಣವನ್ನು ಹೋಲುವ ಹಸಿರು ಧ್ವಜವನ್ನು ಸಾರ್ವಜನಿಕ ಪ್ರದೇಶದಲ್ಲಿ ಹಾರಿಸುವುದು ನಮ್ಮ flag code ಗೆ ವಿರುದ್ದವಾದದ್ದಲ್ಲವೇ ? ಈ ಕೂಡಲೇ, ಇದನ್ನು ತೆಗೆದು ಇಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿ. ಶಿವಾಜಿನಗರ ಇರುವುದು ಭಾರತದಲ್ಲಿ, ಪಾಕಿಸ್ತಾನದಲ್ಲಲ್ಲ https://t.co/Ln6mx86Erd
— Basanagouda R Patil (Yatnal) (@BasanagoudaBJP) January 30, 2024
ಇದರಿಂದ ಎಚ್ಚೆತ್ತ ಪೊಲೀಸರು ಸ್ಥಳಕ್ಕೆ ತಕ್ಷಣವೇ ದೌಡಾಯಿಸಿದ್ರು. ಬಳಿಕ ಸ್ಥಳೀಯರನ್ನು ಬಳಸಿಕೊಂಡು ಹಸಿರು ಧ್ವಜ ತೆರವು ಮಾಡೋ ಕೆಲಸ ಮಾಡಿದರು. ನಂತರ ಅದೇ ಜಾಗದಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿದರು. ಅಷ್ಟೇ ಅಲ್ಲದೇ ಚಾಂದಿನಿ ಚೌಕ್ ನ ಸರ್ಕಲ್ ಗೆ ಪೂರ ತ್ರಿವರ್ಣ ಧ್ವಜ ಹಾರಿಸಿದ್ರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿವಹಿಸಿದ್ದಾರೆ.
ಈ ಬಗ್ಗೆ ಸ್ಥಳೀಯ ಅಕ್ಮಲ್ ಎಂಬವರು ಪ್ರತಿಕ್ರಿಯೆ ನೀಡಿದ್ದು, ಕಳೆದ 30 ವರ್ಷಗಳಿಂದ ದರ್ಗಾದ ಬಾವುಟ ಹಾಕಲಾಗಿತ್ತು. ಪೊಲೀಸರು ಬಾವುಟ ಹಾಕಿರುವ ಬಗ್ಗೆ ಮಾಹಿತಿ ಕೇಳಿದ್ರು. ಬಳಿಕ ನೀವೇ ಬಾವುಟವನ್ನ ತೆರವುಗೊಳಿಸುವಂತೆ ಸೂಚಿಸಿದ್ರು. ಪೊಲೀಸರ ಸೂಚನೆಯಂತೆ ಹಸಿರು ಬಾವುಟ ತೆರವುಗೊಳಿಸಿ ರಾಷ್ಟ್ರೀಯ ಬಾವುಟವನ್ನ ಹಾಕಲಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಆಂಜನೇಯನ ತಂಟೆಗೆ ಬರ್ಬೇಡಿ, ಹುಷಾರ್- ಸಿಎಂಗೆ ಆರ್ ಅಶೋಕ್ ಎಚ್ಚರಿಕೆ
ಘಟನೆ ಬಗ್ಗೆ ಸರ್ಕಾರದ ವಿರುದ್ಧ ಎಂಎಲ್‍ಸಿ ರವಿಕುಮಾರ್ ಕಿಡಿಕಾರಿದ್ದು, ಹನುಮ ಧ್ವಜ ತೆಗೆಸಿದ್ರಿ. ಇದಕ್ಕೆ ಹೇಗೆ ಅನುಮತಿ ಕೊಟ್ಟಿರಿ. ಇದು ಮುಲ್ಲಾ, ಮೌಲ್ವಿ ಸರ್ಕಾರ ಎಂದು ಟೀಕಿಸಿದ್ರು. ನಮ್ಮ ರಾಜ್ಯದ ಮಂಡ್ಯ ಜಿಲ್ಲೆ ಕೆರೆಗೋಡಿನಲ್ಲಿ ಹನುಮಧ್ವಜ ಇಳಿಸಿರೋದನ್ನ ಬಿಜೆಪಿ ಖಂಡಿಸಲಿದೆ. ಹಿಂದೂ ದೇವಸ್ಥಾನಗಳ ಹಣ ಬೇಕು, ಹಿಂದೂ ಎಂಎಲ್‍ಎ ಬೇಕು, ಹಿಂದೂ ಎಂಪಿ ಬೇಕು. ಆದರೆ ಹಿಂದೂ ದೇವರ ಧ್ವಜ ಹಾರಿಸೋದು ಬೇಡ ಅಂತಾರೆ. ಈ ಹಿನ್ನೆಲೆ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ 12 ಪ್ರಶ್ನೆ ಕೇಳ್ತಿದ್ದೀವಿ ಎಂದರು.