– ಡೆಂಗ್ಯೂ ನಿಯಂತ್ರಣಕ್ಕೆ ಬಿಬಿಎಂಪಿ ಹಲವು ಮುನ್ನೆಚ್ಚರಿಕೆ ಕ್ರಮ
ಬೆಂಗಳೂರು: ನಗರ ವ್ಯಾಪ್ತಿಯಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಬಿಬಿಎಂಪಿ ಮುಂದಾಗಿದೆ. ಡೆಂಗ್ಯೂ ಪ್ರಕರಣ ನಿಯಂತ್ರಿಸುವ ನಿಟ್ಟಿನಲ್ಲಿ ಬೃಹತ್ ಬೆಂಗಳೂರು ಮಹಾನರ ಪಾಲಿಕೆ (BBMP) ವ್ಯಾಪ್ತಿಯ ಎಲ್ಲಾ ವಾರ್ಡ್‌ಗಳಲ್ಲಿ ಸೊಳ್ಳೆ ನಿಯಂತ್ರಣ ಕುರಿತು ಅರಿವು ಮೂಡಿಸುವ ಹಾಗೂ ಔಷಧಿ ಸಿಂಪಡಣೆಯನ್ನು ಈಗಾಗಲೇ ಪ್ರಾರಂಭಿಸಲಾಗಿದೆ.
ಗುರುವಾರವೂ ಸಹ ರಾಷ್ಟ್ರೀಯ ಡೆಂಗ್ಯೂ ದಿನಾಚರಣೆಯ (National Dengue Day) ಅಂಗವಾಗಿ ಬೆಂಗಳೂರು ಪೂರ್ವ ವಲಯದ ರಾಮಸ್ವಾಮಿ ಪಾಳ್ಯದಲ್ಲಿ ಜಾಗೃತಿ ಅಭಿಯಾನ ನಡೆಸಲಾಗಿದೆ. ಬಿಬಿಎಂಪಿ ಆಯುಕ್ತರಾದ ಸುರಳ್ಕರ್ ವಿಕಾಸ್ ಕಿಶೋರ್ ಅವರು ಸಹ ಈ ಅಭಿಯಾನದಲ್ಲಿ ಸಾರ್ವಜನಿಕರು ಅನುಸರಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಸಲಹೆ ನೀಡಿದ್ದಾರೆ.
Advertisement
Advertisement
ಮಳೆ ಬಂದಾಗ ನೀರು ಸಂಗ್ರಹವಾಗಿ ಸೊಳ್ಳೆಗಳ (Mosquito) ಸಂತತಿ ಹೆಚ್ಚಾಗಲಿದ್ದು, ಅದನ್ನು ಫಾಗಿಂಗ್ ಮತ್ತು ಔಷಧಿ ಸಿಂಪಡಿಸುವ ಮೂಲಕ ತಡೆಯಬೇಕು. ಹೂವಿನ ಕುಂಡ, ಬಿಸಾಕಿದ ಟೈರ್, ನೀರು ಸಂಗ್ರಹಿಸುವ ತೊಟ್ಟಿ, ನೀರಿನ ಬಾಟಲ್ ಸೇರಿದಂತೆ ಇನ್ನಿತರ ಕಡೆಯಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಅಂತಹ ಸ್ಥಳಗಳಲ್ಲಿ ಎಚ್ಚರಿಕೆ ಕೊಳಚೆ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಬೇಕು ಎಂದಿದ್ದಾರೆ.
Advertisement
ಆಯಾ ವಲಯದ ವಾರ್ಡ್ ಮಟ್ಟದಲ್ಲಿ ಒಂದು ವಾರ್ಡ್‌ಗೆ 4 ಔಷಧಿ ಸಿಂಪಡಣೆ ಮಾಡುವ ತಂಡಗಳನ್ನು ನಿಯೋಜನೆ ಮಾಡಿದ್ದು, ತಾತ್ಕಾಲಿಕವಾಗಿ ನೀರು ನಿಲ್ಲುವ ಸ್ಥಳ ಹಾಗೂ ಶಾಶ್ವತವಾಗಿ ನೀರು ನಿಲ್ಲುವ ಸ್ಥಳಗಳನ್ನು ಗುರುತಿಸಿ ಫಾಗಿಂಗ್ ಮತ್ತು ಔಷಧಿ ಸಿಂಪಡಣೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
Advertisement
ಲಾರ್ವಾ ಸಮೀಕ್ಷೆ ಪ್ರಾರಂಭ:
ಈಡೀಸ್, ಈಜಿಪ್ಟೈ ಎಂಬ ಸೊಳ್ಳೆಗಳಿಂದ ಡೆಂಗ್ಯೂ ರೋಗ ಹರಡುತ್ತದೆ. ಆ ಸೊಳ್ಳೆಗಳು ತೆರೆದಿಟ್ಟ ನೀರಿನ ತೊಟ್ಟಿಗಳು, ಏರ್ ಕೂಲರ್ ಗಳು, ಹೂವಿನ ಕುಂಡದ ತಟ್ಟೆಗಳು, ಬಕೆಟ್‌ಗಳು, ಸಿಮೆಂಟ್ ತೊಟ್ಟಿಗಳು, ತೆಂಗಿನ ಚಿಪ್ಪುಗಳು, ಒಡೆದ ಟೈರ್‌ಗಳಲ್ಲಿ ಉತ್ಪತ್ತಿಯಾಗುತ್ತವೆ. ಈ ಸಂಬಂಧ ಪ್ರಾರಂಭಿಕ ಹಂತದಲ್ಲೇ ಸೊಳ್ಳೆ ನಿಯಂತ್ರಣ ಮಾಡಲು ಲಾರ್ವಾ ಉತ್ಪಿತ್ತಿಯಾಗುವ ತಾಣಗಳನ್ನು ಗುರುತಿಸಿ ನಾಶಪಡಿಸಲಾಗುತ್ತದೆ.
ಕೊಳಚೆ ಹಾಗೂ ಇನ್ನಿತರ ಪ್ರದೇಶಗಳಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷಣಾ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ನಮ್ಮ ಕ್ಲಿನಿಕ್ ವೈದ್ಯರ ತಂಡ ಹಾಗೂ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿ ಮತ್ತು ಸಿಬ್ಬಂದಿ ತಂಡಗಳನ್ನು ರಚಿಸಿಕೊಂಡು ಮನೆ-ಮನೆ ಭೇಟಿ ನೀಡಿ ಡೆಂಗ್ಯೂ ಪ್ರಕರಣಗಳ ಪತ್ತೆ ಹಚ್ಚುವ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ಸಹ ಹೇಳಿದ್ದಾರೆ.
ಜಾಥಾ, ಧ್ವನಿವರ್ಧಕಗಳ ಮೂಲಕ ಜಾಗೃತಿ ಅಭಿಯಾನ:
ನಗರದಲ್ಲಿ ಡೆಂಗ್ಯೂ ನಿಯಂತ್ರಿಸುವ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣ, ಆಯಾ ವಲಯಗಳ ವಾರ್ಡ್ ಮಟ್ಟದಲ್ಲಿ ಜಾಗೃತಿ ಜಾಥಾ ಹಾಗೂ ಪಾಲಿಕೆಯ ಕಸದ ವಾಹನಗಳಲ್ಲಿ ಧ್ವನಿವರ್ಧಕಗಳ ಮೂಲಕ ಡೆಂಗ್ಯೂ ಬಗ್ಗೆ ನಾಗರೀಕರಲ್ಲಿ ಅರಿವು ಮೂಡಿಸುವ ಕೆಲಸ ಮಾಡಿಸಲಾಗುತ್ತಿದೆ. ಜೊತೆಗೆ ಮನೆ-ಮನೆಗೆ ತೆರಳಿ ಡೆಂಗ್ಯೂ ನಿಯಂತ್ರಣದ ಕುರಿತು ಭಿತ್ತಿಪತ್ರಗಳನ್ನು ವಿತರಿಸಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ನುಡಿದಿದ್ದಾರೆ.
ಈ ವೇಳೆ ಮುಖ್ಯ ಆರೋಗ್ಯಾಧಿಕಾರಿ ಡಾ.ಮದನಿ, ಪೂರ್ವ ವಲಯ ಆರೋಗ್ಯಾಧಿಕಾರಿ ಡಾ.ಭಾಗ್ಯಲಕ್ಷ್ಮಿ, ಡೆಂಗ್ಯೂ ನೋಡಲ್ ಅಧಿಕಾರಿ ಸುಜಾತಾ ಸೇರಿದಂತೆ ಇನ್ನಿತರರು ಜಾಥಾದಲ್ಲಿ ಪಾಲ್ಗೊಂಡಿದ್ದರು.
ಮೇ 1 ರಿಂದ 13ರ ವರೆಗೆ ದಾಖಲಾದ ಡೆಂಗ್ಯೂ ಪ್ರಕರಣಗಳು – ಯಾವ ವಲಯದಲ್ಲಿ ಎಷ್ಟು ಕೇಸ್?
ಬೊಮ್ಮನಹಳ್ಳಿ: 23
ಪೂರ್ವ: 41
ಮಹದೇವಪುರ: 44
ಆರ್.ಆರ್ ನಗರ: 08
ದಕ್ಷಿಣ: 34
ಪಶ್ಚಿಮ: 16
ಯಲಹಂಕ: 06
ದಾಸರಹಳ್ಳಿ: 00
ಒಟ್ಟು: 172 ಪ್ರಕರಣ