– ನಾನು ಶೀಘ್ರದಲ್ಲೇ ನನ್ನ ತಂದೆಯ ತಾಯ್ನಾಡು ಭಾರತಕ್ಕೆ ಭೇಟಿ ಕೊಡ್ತೀನಿ
ವಾಷಿಂಗ್ಟನ್: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ 9 ತಿಂಗಳು ಸಿಲುಕಿಕೊಂಡು ನಂತರ ಭೂಮಿಗೆ ವಾಪಸ್ ಆದ ಬಳಿಕ ಗಗನಯಾತ್ರಿ ಸುನೀತಾ ವಿಲಿಯಮ್ಸ್ (Sunita Williams) ಮೊದಲ ಬಾರಿಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ.
ಬಾಹ್ಯಾಕಾಶದಲ್ಲಿನ ಹಲವಾರು ಕೌತುಕಗಳು, ಸಂಶೋಧನೆಗಳು ಹಾಗೂ ಭೂಮಿ ಕುರಿತು ಸುದ್ದಿಗೋಷ್ಠಿಯಲ್ಲಿ ಸುನೀತಾ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಈ ವೇಳೆ, ಭಾರತದ ಬಗ್ಗೆಯೂ ಮಾತನಾಡಿದ್ದಾರೆ.
ನಾನು ಶೀಘ್ರದಲ್ಲೇ ನನ್ನ ತಂದೆಯ ತಾಯ್ನಾಡಿಗೆ ಭೇಟಿ ನೀಡಲಿದ್ದೇನೆ. ಮುಂದಿನ ಆಕ್ಸಿಯಮ್ ಕಾರ್ಯಾಚರಣೆಯಲ್ಲಿ ಭಾಗವಹಿಸಲಿರುವ ಭಾರತೀಯ ಪ್ರಜೆಗಳನ್ನು ಭೇಟಿ ಮಾಡುತ್ತೇನೆ. ನಮ್ಮ ಅನುಭವಗಳನ್ನು ಹಂಚಿಕೊಳ್ಳಬಹುದೆಂದು ನಾನು ಭಾವಿಸುತ್ತೇನೆ. ಭಾರತ ಶ್ರೇಷ್ಠ ಪ್ರಜಾಪ್ರಭುತ್ವ ದೇಶ ಎಂದು ಬಣ್ಣಿಸಿದ್ದಾರೆ.
ಭಾರತ ಬಾಹ್ಯಾಕಾಶ ಜಗತ್ತಿನಲ್ಲಿ ತನ್ನ ನೆಲೆಯನ್ನು ಸ್ಥಾಪಿಸಿದೆ. ನಾನು ಅವರಿಗೆ ಸಹಾಯ ಮಾಡಲು ಹಿಂಜರಿಯುವುದಿಲ್ಲ. ಬಾಹ್ಯಕಾಶದಿಂದ ಭಾರತ ಅದ್ಭುತವಾಗಿ ಕಾಣುತ್ತದೆ. ಹಿಮಾಲಯದ ಮೇಲೆ ಹೋದಾಗಲೆಲ್ಲ ಅದ್ಬುತ ಚಿತ್ರಗಳು ಸಿಕ್ಕವು. ಗುಜರಾತ್ ಮತ್ತು ಮುಂಬೈ ದೀಪಗಳ ಜಾಲದಂತೆ ಕಾಣುತ್ತದೆ ಎಂದು ತಿಳಿಸಿದ್ದಾರೆ.