– ನಮೋ ಆಗಮನ ಹಿನ್ನೆಲೆ ಹೈ ಅಲರ್ಟ್
– ಉದ್ಘಾಟನೆ ಬಳಿಕ ಮೆಟ್ರೋದಲ್ಲಿ ಪ್ರಧಾನಿ ಸಂಚಾರ
ಬೆಂಗಳೂರು: ಬಹುನೀರಿಕ್ಷಿತ ಕೆಆರ್ ಪುರಂ ಮತ್ತು ವೈಟ್‍ಫೀಲ್ಡ್ ನಡುವಿನ ಮೆಟ್ರೋ ಸಂಚಾರ ಆರಂಭಕ್ಕೆ ಕೌಂಟ್‍ಡೌನ್ ಶುರುವಾಗಿದೆ. ನಾಳೆ ಮಧ್ಯಾಹ್ನ ನೂತನ ಮಾರ್ಗದ ಸಂಚಾರಕ್ಕೆ ಪ್ರಧಾನಿಗಳು ಹಸಿರು ನಿಶಾನೆ ತೋರುವ ಮೂಲಕ ಲೋಕಾರ್ಪಣೆ ಮಾಡಲಿದ್ದಾರೆ.
Advertisement
ಕೆ.ಆರ್ ಪುರಂ (KR Puram) ಮತ್ತು ವೈಟ್‍ಫೀಲ್ಡ್ ನಡುವಿನ ಮೆಟ್ರೋ (Namma Metro) ಉದ್ಘಾಟನೆ ಕಾಯುವಿಕೆಗೆ ಕೊನೆಗೂ ಫುಲ್‍ಸ್ಟಾಪ್ ಇಡುವ ಸಂದರ್ಭ ಬಂದಿದೆ. ಬಹುನಿರೀಕ್ಷಿತ ಹೊಸ ಮಾರ್ಗಕ್ಕೆ ನಾಳೆ ಚಾಲನೆ ಸಿಗಲಿದ್ದು, ಉದ್ಘಾಟನೆಯ ಅಂತಿಮ ತಯಾರಿ ಭರದಿಂದ ಸಾಗಿದೆ.
Advertisement
Advertisement
ನಾಳೆ ಮಧ್ಯಾಹ್ನ 13.55ಕ್ಕೆ ಪ್ರಧಾನಿಗಳು ಎಚ್‍ಎಎಲ್ (HAL) ನಿಂದ ರಸ್ತೆ ಮೂಲಕ ನೇರವಾಗಿ ವೈಟ್‍ಫಿಲ್ಡ್ ನ ಕಾಡುಗೋಡಿ ಮೆಟ್ರೋ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. 1 ಗಂಟೆಯಿಂದ 1.35ರ ಒಳಗೆ 13.71 ಕಿ.ಮೀ ಉದ್ದ ಮೆಟ್ರೋ ಮಾರ್ಗವನ್ನ ಉದ್ಘಾಟನೆ ಮಾಡಲಿದ್ದಾರೆ. ಬಳಿಕ ಅದೇ ಮೆಟ್ರೋದಲ್ಲಿ ಮೋದಿ ಸಂಚಾರ ಮಾಡಲಿದ್ದಾರೆ. ವೈಟ್‍ಫಿಲ್ಡ್‍ನ ಕಾಡುಗೋಡಿ ನಿಲ್ದಾಣದಿಂದ ಒಂದು ಕಿ.ಮೀ ದೂರದಲ್ಲಿರುವ ಚೆನ್ನಸಂದ್ರ ಮೆಟ್ರೋ ನಿಲ್ದಾಣದವರೆಗೆ ಹೊಸ ಮಾರ್ಗದಲ್ಲಿ ಸಂಚಾರ ಮಾಡಿ ಅಲ್ಲಿಂದ ನೇರವಾಗಿ ಮತ್ತೆ ಎಚ್‍ಎಎಲ್‍ಗೆ ತೆರಳಿ ಅಲ್ಲಿಂದ ದಾವಣಗೆರೆಗೆ ಪ್ರಯಾಣ ಬೆಳೆಸಲಿದ್ದಾರೆ. ಇದನ್ನೂ ಓದಿ: ಚಾಮರಾಜನಗರಕ್ಕೆ ಭೇಟಿ ಕೊಟ್ರೆ ಅಧಿಕಾರ ಹೋಗುತ್ತೆ – ಮೌಢ್ಯಕ್ಕೆ ಸೆಡ್ಡು ಹೊಡೆದ ಸಿದ್ದರಾಮಯ್ಯ, ಬೊಮ್ಮಾಯಿ
Advertisement
ಪ್ರಧಾನಿಗಳ ಆಗಮನ ಹಿನ್ನೆಲೆ ವೈಟ್‍ಫಿಲ್ಡ್ ಕಾಡುಗೋಡಿ ಮತ್ತು ಚೆನ್ನಸಂದ್ರ ಮೆಟ್ರೋ ನಿಲ್ದಾಣದ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಬೆಳಗ್ಗೆಯಿಂದಲೇ ಸ್ಥಳದಲ್ಲಿ ಬಾಂಬ್ ಸ್ಕ್ವಾಡ್, ಡಾಗ್ ಸ್ಕ್ವಾಡ್ ತಂಡಗಳು ತಪಾಸಣೆ ಆರಂಭಿಸಿವೆ. ಇನ್ನೂ ಪ್ರಧಾನಿಗಳು ಸಂಚರಿಸುವ ಎರಡು ನಿಲ್ದಾಣಗಳನ್ನ ಈಗಾಗಲೇ ಎಸ್ ಪಿಜೆ ಪಡೆಗಳು ಸಂಪೂರ್ಣ ಕಂಟ್ರೋಲ್ ತೆಗೆದುಕೊಂಡು ಭದ್ರತೆ ಪರಿಶೀಲನೆ ನಡೆಸಿವೆ. ಇನ್ನೂ ಪ್ರಧಾನಿಗಳು ಎಚ್‍ಎಎಲ್‍ನಿಂದ ಆಗಮಿಸುವ ಮಾರ್ಗ ಮಧ್ಯೆ ಕೂಡ ಬಿಜೆಪಿ ಬಾವುಟ, ಫ್ಲೆಕ್ಸ್ ಗಳ ಭರಾಟೆ ಜೋರಾಗಿದೆ. ನಮೋ ಸ್ವಾಗತಕ್ಕಾಗಿ ರಸ್ತೆಯ ಎರಡು ಬದಿಯಲ್ಲೂ ಬ್ಯಾರಿಕೇಡ್ ಹಾಕಿ ಬಿಜೆಪಿ ಕಾರ್ಯಕರ್ತರು ಮತ್ತು ಸಾರ್ವಜನಿಕರಿಗೆ ನಿಂತು ನೋಡಲು ವ್ಯವಸ್ಥೆ ಮಾಡಲಾಗಿದೆ.
ಒಟ್ಟಾರೆ ಹಲವು ದಿನಗಳಿಂದ ಜಟಾಯು ಪಕ್ಷಿಗಳಂತೆ ಕಾಯುತ್ತಿದ್ದ ಈ ಭಾಗದ ಜನರ ಬಹುದಿನದ ಕನಸು ಈಡೇರುತ್ತಿದ್ದು, ಇನ್ಮೇಲೆ ಸವಾರರಿಗೆ ಸ್ವಲ್ಪಮಟ್ಟಿಗಾದ್ರು ಟ್ರಾಫಿಕ್ ಕಿರಿಕಿರಿ ತಪ್ಪಲಿದೆ.