ಬೆಂಗಳೂರು: ಬಹಳ ದಿನಗಳ ಕನಸು, ಬೆಂಗಳೂರಿನ ಹಳದಿ (ಯೆಲ್ಲೋ) ಮೆಟ್ರೋ ಲೈನ್ (Yellow Metro Line) ಅನ್ನು ಇದೇ ಆ. 10ರಂದು ನಮ್ಮ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರು (Narendra Modi) ಲೋಕಾರ್ಪಣೆ ಮಾಡಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ.ವಿಜಯೇಂದ್ರ (B Y Vijayendra) ತಿಳಿಸಿದರು.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಯೆಲ್ಲೋ ಲೈನ್ ಕನಿಷ್ಠ 8 ಲಕ್ಷ ಜನರಿಗೆ ಅನುಕೂಲ ಆಗಲಿದೆ. ಪ್ರಧಾನಿಯವರು ಬೆಳಗ್ಗೆ ಬೆಂಗಳೂರಿಗೆ (Bengaluru) ಬರಲಿದ್ದು, ಹೆಲಿಕಾಪ್ಟರ್ ಮೂಲಕ ಮೇಖ್ರಿ ವೃತ್ತದ ಬಳಿ ಇರುವ ಮಿಲಿಟರಿ ಮೈದಾನಕ್ಕೆ ಆಗಮಿಸುವರು. ಬಳಿಕ ಮೇಖ್ರಿ ವೃತ್ತ, ಚಾಲುಕ್ಯ ವೃತ್ತ ಮೂಲಕ ಸಂಗೊಳ್ಳಿ ರಾಯಣ್ಣ ರೈಲ್ವೆ ಸ್ಟೇಷನ್‌ಗೆ ಬಂದು ತಲುಪುವರು. ಅಲ್ಲಿ ಬೆಂಗಳೂರು-ಬೆಳಗಾವಿ ನಡುವಿನ ವಂದೇ ಭಾರತ್ ರೈಲಿನ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ವಿವರಿಸಿದರು. ಇದನ್ನೂ ಓದಿ: ಉತ್ತರಕಾಶಿಯಲ್ಲಿ ಮೇಘಸ್ಫೋಟ – ಈವರೆಗೆ 274 ಮಂದಿ ರಕ್ಷಣೆ, ಪತ್ತೆಯಾಗದ 59 ಜನರು
ಸಂಗೊಳ್ಳಿ ರಾಯಣ್ಣ ರೈಲ್ವೆ ಸ್ಟೇಷನ್‌ನಿಂದ ಸೌತ್ ಎಂಡ್ ವೃತ್ತದ ಮೂಲಕ ರಾಗಿಗುಡ್ಡ ತಲುಪುವರು. ಬಳಿಕ ಎಲೆಕ್ಟ್ರಾನಿಕ್ ಸಿಟಿ ಮೆಟ್ರೋ ಸ್ಟೇಷನ್‌ನಲ್ಲೂ ಕಾರ್ಯಕ್ರಮ ಇದೆ. ಪ್ರಧಾನಿಯವರು ಬರುವ ಸಂದರ್ಭವನ್ನು ಬೆಂಗಳೂರಿನ ಮಹಾಜನತೆ ಕಾತುರದಿಂದ ಕಾಯುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರೂ ಪ್ರಧಾನಿಯವರನ್ನು ಬಹಳ ಸಂತೋಷದಿಂದ ಸ್ವಾಗತಿಸಲು ಸಿದ್ಧರಾಗಿದ್ದಾರೆ. ಈ ಕಾರ್ಯಕ್ರಮ ಯಶಸ್ವಿಯಾಗುವ ನಿಟ್ಟಿನಲ್ಲಿ ಬೆಂಗಳೂರಿನ ಮಹಾಜನತೆ ಕೈಜೋಡಿಸಬೇಕೆಂದು ವಿನಂತಿಸಿದರು. ಇದನ್ನೂ ಓದಿ: ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ – ಕೆಆರ್ ಮಾರ್ಕೆಟ್‌ನಲ್ಲಿ ಖರೀದಿ ಭರಾಟೆ ಜೋರು
ಮೆಟ್ರೋ ಕಾಮಗಾರಿಯು ಹಿಂದೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರ್ಕಾರ ಇದ್ದಾಗ, ಬಸವರಾಜ್ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದಾಗ ಸಾಕಷ್ಟು ವೇಗ ಪಡೆದಿತ್ತು. ಈಗ ಬೆಂಗಳೂರಿನಲ್ಲಿ ಒಂದು ರೀತಿಯ ಹಬ್ಬದ ವಾತಾವರಣ ಇದೆ ಎಂದು ವಿಶ್ಲೇಷಿಸಿದರು. ಭಾರತದ ಪ್ರಧಾನ ಮಂತ್ರಿಯವರು ಮೆಟ್ರೋ ಲೋಕಾರ್ಪಣೆಗೆ ಬರುತ್ತಿದ್ದಾರೆ ಎಂಬುದನ್ನು ಡಿ.ಕೆ.ಶಿವಕುಮಾರ್ ಅವರು ಅರ್ಥ ಮಾಡಿಕೊಳ್ಳಬೇಕು ಎಂದು ಪ್ರಶ್ನೆಗೆ ಉತ್ತರಿಸಿದರು.
ಪ್ರಧಾನಿಯವರ ಸ್ವಾಗತಕ್ಕೆ ಬಿಜೆಪಿ ಸಿದ್ಧತೆ
ಪ್ರಧಾನಿಯವರನ್ನು ಬೆಂಗಳೂರಿನ ಮೇಖ್ರಿ ವೃತ್ತ, ಚಾಲುಕ್ಯ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಸೌತ್‌ಎಂಡ್ ಸರ್ಕಲ್, ರಾಗಿಗುಡ್ಡ, ಎಲೆಕ್ಟ್ರಾನಿಕ್ ಸಿಟಿ ಮೆಟ್ರೋ ಸ್ಟೇಷನ್‌ಗಳ ಬಳಿ ಮತ್ತು ಮೆಟ್ರೋ ಹಳದಿ ಮಾರ್ಗದ ಎಲ್ಲ ಮೆಟ್ರೋ ಸ್ಟೇಷನ್‌ಗಳಲ್ಲಿ ಬಿಜೆಪಿಯ ಸಾವಿರಾರು ಕಾರ್ಯಕರ್ತರು ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲಿದ್ದಾರೆ ಎಂದು ತಿಳಿಸಿದರು.