– ಶರತ್ ಬಚ್ಚೆಗೌಡ ಪಕ್ಷಕ್ಕೆ ಬಂದ್ರೆ ಸ್ವಾಗತ
– ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗಲಿ
ಕೋಲಾರ: ಬಿಜೆಪಿ ಸರ್ಕಾರದಲ್ಲಿ ಸಿಎಂ ಯಡಿಯೂರಪ್ಪಗೆ ರಾಜ್ಯದ ಅಭಿವೃದ್ಧಿಗಿಂತ ತಮ್ಮ ಪಕ್ಷದ ಶಾಸಕರನ್ನು ಸಮಾದಾನ ಪಡಿಸುವುದೇ ದೊಡ್ಡ ಕೆಲಸವಾಗುತ್ತದೆ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
Advertisement
Advertisement
ಜಿಲ್ಲಾ ಪಂಚಾಯತ ಕೆಡಿಪಿ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ಸಿನಲ್ಲಿ ಅಧಿಕಾರ ಪಡೆದುಕೊಂಡವರು ಬಿಜೆಪಿಗೆ ಹೋಗಿದ್ದಾರೆ, ಹೊಸ ನೀರು ಹೋದಮೇಲೆ ಹಳೆ ನೀರಿಗೆ ಅಲ್ಲಿ ಬೆಲೆ ಇಲ್ಲ ಹಾಗಾಗಿ ಬಿಜೆಪಿಯಲ್ಲಿ ಸಚಿವ ಸಂಪುಟ ವಿಚಾರವಾಗಿ ಗೊಂದಲ ಮುಂದುವರೆಯುತ್ತದೆ. ಎಂಟಿಬಿಗೆ ಬಿಜೆಪಿಯಲ್ಲಿ ಸ್ಥಾನಮಾನ ಕೊಡಲು ಸಾಧ್ಯವೇ ಇಲ್ಲ. ಗೆದ್ದಿರುವವರಿಗೆ ಸ್ಥಾನಮಾನ ಕೊಡುವುದೇ ಕಷ್ಟವಾಗಿದೆ. ಹಳಬರು-ಹೊಸಬರನ್ನು ಒಟ್ಟಾಗಿ ಕರೆದುಕೊಂಡು ಹೋಗುವುದೇ ಸಿಎಂಗೆ ಸರ್ಕಸ್ ಆಗುತ್ತದೆ ಎಂದರು.
Advertisement
Advertisement
ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು. ನೂತನ ಶಾಸಕ ಶರತ್ ಬಚ್ಚೇಗೌಡ ಕಾಂಗ್ರೆಸ್‍ಗೆ ಬಂದರೆ ಸ್ವಾಗತಿಸುತ್ತೇವೆ. ಸ್ವತಂತ್ರವಾಗಿ ಸ್ಪರ್ಧಿಸಿ ಗೆದ್ದಿರುವ ಶರತ್ ಏಕೆ ಕಾಂಗ್ರೆಸ್‍ಗೆ ಬರಬಾರದು ಎಂದು ಪ್ರಶದನಿಸಿದರು. ಇದೇ ವೇಳೆ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡುವಂತೆ ಹೈಕಮಾಂಡ್‍ಗೆ ಒತ್ತಾಯ ಮಾಡುತ್ತೇನೆ ಎಂದರು.
ಸಂಸದ, ಶಾಸಕರ ನಡುವೆ ವಾಗ್ವಾದ
ಕೆಡಿಪಿ ಸಭೆಯಲ್ಲಿ ಸಂಸದ ಮುನಿಸ್ವಾಮಿ ಹಾಗೂ ಮಾಲೂರು ಕಾಂಗ್ರೇಸ್ ಶಾಸಕ ಹಾಗೂ ಕೋಲಾರ ಹಾಲು ಒಕ್ಕೂಟದ ಅಧ್ಯಕ್ಷ ನಂಜೇಗೌಡ ನಡುವೆ ಏರು ಧ್ವನಿಯಲ್ಲಿ ವಾಗ್ವಾದ ನಡೆಯಿತು. ಕೆಎಂಎಫ್ ನಲ್ಲಿ ಸಾಕಷ್ಟು ಅವ್ಯವಹಾರ ನಡೆಯುತ್ತಿದೆ ಎಂದು ಸಂಸದ ಮುನಿಸ್ವಾಮಿಗೆ ಆರೋಪಿಸಿದರು. ಇದಕ್ಕೆ ಉತ್ತರಿಸುವ ವೇಳೆ ಶಾಸಕರು ಏಕವಚನದಲ್ಲಿ ಮಾತನಾಡಿ ನೀನು ಎಂದು ಸಂಭೋಧಿಸಿದರು. ಇದಕ್ಕೆ ಕೋಪಗೊಂಡ ಸಂಸದರು ನ್ಯಾಯವಾಗಿ ಮಾತನಾಡಿ ಎಂದು ಎಚ್ಚರಿಕೆ ನೀಡಿದರು. ಈ ವೇಳೆ ಸಂಸದರು ಹಾಗೂ ಶಾಸಕರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ನಂತರ ಸಭೆಯಲ್ಲಿದ್ದ ಕೋಲಾರ ಜೆಡಿಎಸ್ ಶಾಸಕ ಶ್ರೀನಿವಾಸಗೌಡ ಮತ್ತು ಸಚಿವ ನಾಗೇಶ್ ಸಮಾಧಾನ ಪಡಿಸಿದರು. ನಂತರ ಸಭೆಯಲ್ಲಿ ಒಬ್ಬರಿಗೊಬ್ಬರು ಸಮರ್ಥಿಸಿಕೊಂಡರು. ಮಧ್ಯಾಹ್ನದ ಊಟವನ್ನು ಇಬ್ಬರೂ ಜೊತೆಯಲ್ಲೆ ಸವಿದರು.
ಉಸ್ತುವಾರಿ ಸಚಿವರ ಮೌನ
ಸಂಸದರ ಜೊತೆ ಮಾತನಾಡುತ್ತ ಕುಳಿತ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ನಾಗೇಶ್ ಬದಲಾಗಿ ಇಡೀ ಸಭೆಯನ್ನು ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ನಡೆಸಿಕೊಟ್ಟರು. ಸಚಿವ ನಾಗೇಶ್ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾಗಿ ಮೂರು ತಿಂಗಳ ನಂತರ ಮೂರು ಬಾರಿ ದಿನಾಂಕ ನಿಗದಿ ಮಾಡಿ ನಂತರ ಮುಂದೂಡಿ ಕೊನೆಗೆ ಇಂದು ಸಭೆ ನಡೆಸಿದರು. ಆದರೆ ನಡೆಸಿಕೊಟ್ಟವರು ಮಾತ್ರ ನಾರಾಯಣಸ್ವಾಮಿ.
ಸಭೆಯಲ್ಲಿ ಪ್ರತಿ ವಿಷಯದ ಮೇಲೆ ಚರ್ಚೆ ಬಂದಾಗಲೂ ಅಧಿಕಾರಿಗಳನ್ನು ಪ್ರಶ್ನೆ ಮಾಡಿ ಸಚಿವರೇ ಅದೇಶ ನೀಡುತ್ತಿದ್ದರು. ಆದರೆ ಈ ಬಾರಿ ನಾರಾಯಣಸ್ವಾಮಿಯವರು ಮಾಡಿದ್ದಾರೆ.
ಈ ವೇಳೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ಜನಪ್ರತಿನಿಧಿಗಳಿಗೆ ಸರಿಯಾಗಿ ಶಿಷ್ಟಾಚಾರ ಪಾಲನೆಯಾಗುತ್ತಿಲ್ಲ. ಕೋಲಾರ ತಾಲೂಕು ವಡಗೂರು ಗ್ರಾಮದಲ್ಲಿ ರಾಜೀವ್‍ಗಾಂಧಿ ಸೇವಾ ಕೇಂದ್ರವನ್ನು ನನ್ನ ಗಮನಕ್ಕೆ ತರದೆ ಉದ್ಘಾಟನೆ ಮಾಡಲಾಗಿದೆ ಎಂದು ಆರೋಪಿಸಿ ಶಿಷ್ಟಾಚಾರ ಉಲ್ಲಂಘನೆ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು. ಇದಕ್ಕೆ ಸಭೆಯಲ್ಲಿದ್ದ ಎಲ್ಲ ಜನಪ್ರತಿನಿಧಿಗಳು ಧ್ವನಿಗೂಡಿಸಿದರು. ಜಿಲ್ಲಾಧಿಕಾರಿಗಳು ಉತ್ತರಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಸಭೆಗೂ ನಮಗೂ ಸಂಬಂಧವೇ ಇಲ್ಲವೆಂದು ಕುಳಿತಿದ್ದ ಅಧಿಕಾರಿಗಳು, ಕೆಲವರು ನಿದ್ದೆಗೆ ಜಾರಿದರೆ, ಬಹುತೇಕರು ಮೊಬೈಲ್ ನಲ್ಲೇ ಮುಳುಗಿದ್ದರು. ಸಭೆಯಲ್ಲಿ ಜನರ ಸಮಸ್ಯೆಗಳಿಗಿಂತ ಹೆಚ್ಚಾಗಿ ಶಾಸಕರು ಮತ್ತು ಸಚಿವರು ತಮ್ಮ ಸಮಸ್ಯೆಗಳ ಬಗ್ಗೆಯೇ ಚಿಂತಿಸಿದ್ದು, ಮತ್ತೊಂದು ವಿಶೇಷವಾಗಿತ್ತು.