-ಬಂದ ಪುಟ್ಟ ಹೋದ ಪುಟ್ಟ ಎಂಬಂತಾದ ಜಿಲ್ಲಾ ಉಸ್ತುವಾರಿ ಸಚಿವರ ಭೇಟಿ
-ಸಚಿವರ ಎದುರೇ ಪಾಲಿಕೆ ಸದಸ್ಯರ ಜಟಾಪಟಿ
ಶಿವಮೊಗ್ಗ: ಜಿಲ್ಲೆಯಲ್ಲಿ ಇತ್ತೀಚೆಗಷ್ಟೇ ಸುರಿದ ಭಾರೀ ಮಳೆಯಿಂದಾಗಿ, ಉಂಟಾದ ಮಳೆಹಾನಿ ಸಮೀಕ್ಷೆ ನಡೆಸಲು ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣ ಗೌಡರಿಗೆ ಕಾಂಗ್ರೆಸ್ ಪಾಲಿಕೆ ಸದಸ್ಯರು ಫುಲ್ ಕ್ಲಾಸ್ ತೆಗೆದುಕೊಂಡ ಘಟನೆ ನಡೆದಿದೆ.
Advertisement
ಶಿವಮೊಗ್ಗಕ್ಕೆ ಇಂದು ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ ಬಂದ ಪುಟ್ಟ, ಹೋದ ಪುಟ್ಟ ಎಂಬಂತಾಗಿತ್ತು. ಕಳೆದ 4 ದಿನಗಳ ಹಿಂದೆ ಸುರಿದ ಭಾರಿ ಮಳೆಗೆ ಶಿವಮೊಗ್ಗ ತತ್ತರಿಸಿ ಹೋಗಿತ್ತು. ಅನೇಕ ಬಡಾವಣೆಗಳಿಗೆ ನೀರು ನುಗ್ಗಿ ಅವಾಂತರವೇ ಸೃಷ್ಟಿಯಾಗಿತ್ತು. ಮನೆಗಳಿಗೆ ನೀರು ನುಗ್ಗಿ ನಿವಾಸಿಗಳು ಪಡಬಾರದ ಪಾಡು ಪಡುವಂತಾಗಿತ್ತು. ಆದರೆ, ಜಿಲ್ಲಾ ಉಸ್ತುವಾರಿ ಸಚಿವರು ಮಾತ್ರ, ಈ ಕಡೆ ಮುಖ ಕೂಡಾ ಹಾಕಿರಲಿಲ್ಲ. ಇದರಿಂದ ಬೇಸತ್ತ ಜನರು, ಹಿಡಿ ಶಾಪ ಹಾಕಿದ್ದರು. ಅಂದಹಾಗೆ, ಮಳೆ ಮುಗಿದು ನಾಲ್ಕು ದಿನಗಳು ಕಳೆದ ಮೇಲೆ ಬಂದ ಸಚಿವರಿಗೆ ಇಂದು ಪಾಲಿಕೆಯ ವಿಪಕ್ಷದವರು ಸರಿಯಾಗಿಯೇ ತರಾಟೆಗೆ ತೆಗೆದುಕೊಂಡಿದ್ದಾರೆ. ಮಳೆ ಹಾನಿ ವೀಕ್ಷಿಸಲು ಬಂದ ಸಚಿವರು ನೈಜ ಸಮಸ್ಯೆ ಅರಿಯದೆ ಕಾಟಾಚಾರಕ್ಕೆ ವೀಕ್ಷಿಸಲು ಬಂದಿದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
Advertisement
ಇದೇ ವೇಳೆ ಕಾಂಗ್ರೆಸ್ ಕಾರ್ಪೋರೇಟರ್ ಯಮುನಾ ರಂಗೇಗೌಡ ಹಾಗೂ ಮೇಯರ್ ಬೀದಿ ಕಾಳಗಕ್ಕೆ ಇಳಿದಿದ್ದರಿಂದ ಪೊಲೀಸರು ಮಧ್ಯೆ ಪ್ರವೇಶಿಸುವ ಸಂದರ್ಭ ಎದುರಾಗಿದ್ದು, ವಿಪರ್ಯಾಸವಾಗಿತ್ತು. ಯಾವುದೇ ಪೂರ್ವ ಮಾಹಿತಿ ಇಲ್ಲದೇ, ಫೀಲ್ಡ್‍ಗೆ ಇಳಿದ ನಾರಾಯಣಗೌಡರು ಮಾತ್ರ ಕೆಲವೊಂದು ಕಡೆಗಳಲ್ಲಿ ಮೂಕ ಪ್ರೇಕ್ಷಕರಾಗುವಂತಾಗಿದ್ದು, ಸೋಜಿಗವಾಗಿತ್ತು. ಇದನ್ನೂ ಓದಿ: ಪತ್ನಿಗೆ 90,000 ಮೌಲ್ಯದ ಉಡುಗೊರೆ ನೀಡಿದ ಭಿಕ್ಷುಕ
Advertisement
ಒಂದು ವಾರ ಸುರಿದ ಅಕಾಲಿಕ ಮಳೆಯಿಂದಾಗಿ ನಗರ ಪ್ರದೇಶದಲ್ಲಿ ಮನೆಗಳಿಗೆ ನೀರು ನುಗ್ಗಿ ವ್ಯಾಪಕ ಹಾನಿ ಉಂಟಾಗಿದೆ. ಇದೇ ರೀತಿ ಮೆಕ್ಕೆಜೋಳ ಹಾಗೂ ಭತ್ತದ ಬೆಳೆಗಳಿಗೂ ಹಾನಿ ಉಂಟಾಗಿದೆ. ಸುಮಾರು 3 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿದೆ. 2139 ಮನೆಗಳಿಗೆ ಭಾಗಶಃ ಹಾನಿಯುಂಟಾಗಿದೆ. 24 ಶಾಲೆಗಳು ಹಾಗೂ 17 ಅಂಗನವಾಡಿ ಕಟ್ಟಡಗಳಿಗೆ ಹಾನಿಯುಂಟಾಗಿದೆ. ಬೆಳೆ ಹಾನಿಗೆ ಪ್ರಸ್ತುತ ಹೆಕ್ಟೇರ್‍ಗೆ 13 ರಿಂದ 15 ಸಾವಿರ ರೂ. ಪರಿಹಾರ ಒದಗಿಸಲಾಗುತ್ತಿದೆ. ಇದನ್ನು ಹೆಚ್ಚಿಸುವ ಕುರಿತು ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ನಾರಾಯಣ ಗೌಡರು ಹೇಳಿದರು. ಇದನ್ನೂ ಓದಿ: ನಮ್ಮಲ್ಲಿ ಯಾವುದೇ ಬಣ ಇಲ್ಲ, ಹೈಕಮಾಂಡ್ ಹೇಳಿದ್ದೇ ಅಂತಿಮ: ಪರಿಷತ್ ಟಿಕೆಟ್ ಬಗ್ಗೆ ಡಿಕೆಶಿ ಮಾತು