ಶಿವಮೊಗ್ಗ: ಉಸ್ತುವಾರಿ ಜಿಲ್ಲೆ ಬದಲಾಯಿತು ಅಂದಾಕ್ಷಣ ಮಂಡ್ಯ ಬಿಟ್ಟು ಕೊಡುವುದಿಲ್ಲ ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ. ನಾರಾಯಣಗೌಡ ಹೇಳಿದರು.
ಉಸ್ತುವಾರಿ ಸಚಿವ ಸ್ಥಾನ ಬದಲಾವಣೆ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಹಾಗೂ ನನ್ನದು ಇಬ್ಬರದ್ದು ಮಂಡ್ಯ ಜನ್ಮ ಭೂಮಿಯಾಗಿದೆ. ಮಂಡ್ಯವನ್ನು ನಾವು ನಿರ್ವಹಣೆ ಮಾಡುತ್ತೇವೆ. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಮಂಡ್ಯದಲ್ಲಿ ಖಾತೆ ತೆರೆಯಲಾಗಿದೆ. ಈ ಮೊದಲು ಮಂಡ್ಯ ಜಿಲ್ಲೆಯಲ್ಲಿ ಹತ್ತಾರು ಗ್ರಾಮ ಪಂಚಾಯ್ತಿಯು ಕೂಡಾ ಗೆಲ್ಲುತ್ತಿರಲಿಲ್ಲ. ಆದರೆ ಈಗ 900ಕ್ಕೂ ಹೆಚ್ಚು ಗ್ರಾಮ ಪಂಚಾಯ್ತಿ ಸದಸ್ಯರನ್ನು ಗೆದ್ದಿದ್ದೇವೆ ಎಂದರು. ಇದನ್ನೂ ಓದಿ: ನಾರಾಯಣ ಗುರುಗಳ ಬಗ್ಗೆ ಪ್ರಧಾನಿ ಸೇರಿದಂತೆ ಎಲ್ಲರಿಗೂ ಗೌರವ ಇದೆ: ಎಸ್.ಅಂಗಾರ
ಕೆ.ಆರ್ ಪೇಟೆಯಲ್ಲಿ 34 ಗ್ರಾಮ ಪಂಚಾಯ್ತಿಯಲ್ಲಿ 19 ಗ್ರಾಮ ಪಂಚಾಯ್ತಿ ಗೆದ್ದಿದ್ದೇವೆ. ಯಡಿಯೂರಪ್ಪ ಅವರ ಆಶೀರ್ವಾದದಿಂದಲೇ ಗೆದ್ದಿರುವುದು ನಾನು ಯಡಿಯೂರಪ್ಪ ಅವರನ್ನು ನಂಬಿ ಬಂದಿರುವವನು. ಹೀಗಾಗಿ ಮಂಡ್ಯ ಜಿಲ್ಲೆಯನ್ನು ಅಭಿವೃದ್ಧಿಪಡಿಸುತ್ತೇವೆ. ಮಂಡ್ಯದಲ್ಲಿಯೂ 3-4 ಶಾಸಕ ಸ್ಥಾನ ಗೆಲ್ಲಿಸಲು ಯೋಚನೆ ಮಾಡುತ್ತಿದ್ದೇವೆ. ಯಡಿಯೂರಪ್ಪ ಅವರ ನೇತೃತ್ವದಲ್ಲಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಹಕಾರದೊಂದಿಗೆ ಖಂಡಿತಾ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ನಮಗೆ ಗೌರವ ಕೊಟ್ಟಿದ್ದಕ್ಕೆ ಜಾರಕಿಹೊಳಿಗೆ ಅಭಿನಂದನೆ: ಎಚ್‍ಡಿಕೆ
ಡಿಕೆಶಿ ಹಾಗೂ ಸಿದ್ದರಾಮಯ್ಯ ಅವರು ಬಿಜೆಪಿ ಶಾಸಕರು ನಮ್ಮ ಸಂಪರ್ಕದಲ್ಲಿ ಇದ್ದಾರೆ ಎಂಬ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಡಿಕೆಶಿ ಹಾಗೂ ಸಿದ್ದರಾಮಯ್ಯ ಅವರಿಗೆ ಮಾಡಲು ಕೆಲಸ ಇಲ್ಲ. ಹೀಗಾಗಿ ಏನೇನೋ ಹೇಳುತ್ತಿರುತ್ತಾರೆ. ನಮಗೆ ಮಾಡಲು ತುಂಬಾ ಕೆಲಸ ಇದ್ದು, ಸರ್ಕಾರ ನಮಗೆ ಜವಾಬ್ದಾರಿ ಕೊಟ್ಟಿದೆ. ನಾವು ಪುನಃ ಹೋಗುವುದಾದರೆ ಕಾಂಗ್ರೆಸ್‍ನಿಂದ ಬಿಟ್ಟು ಏಕೆ ಬರುತ್ತಿದ್ದೆವು. ನಾವು ಯಡಿಯೂರಪ್ಪ ಅವರ ಮೇಲೆ ನಂಬಿಕೆ ಇಟ್ಟು ಬಿಜೆಪಿಗೆ ಬಂದಿದ್ದೇವೆ. ಯಡಿಯೂರಪ್ಪ ಕೊಟ್ಟಂತಹ ಅಭಿವೃದ್ಧಿ ಕರ್ನಾಟಕ ರಾಜ್ಯದಲ್ಲಿ ಹೆಚ್ಚಿನ ರೀತಿ ಇದೆ. ಕಾಂಗ್ರೆಸ್‍ನಿಂದ ಬಂದಿರುವಂತಹ 17 ಜನರಲ್ಲಿ ಯಾರೊಬ್ಬರೂ ಹೋಗುವುದಿಲ್ಲ ಎಂದರು.
ನಾವು ಮತ್ತೆ ಕಾಂಗ್ರೆಸ್‍ಗೆ ಹೋಗುತ್ತೇವೆ ಎನ್ನುವುದು ಅವರ ಭ್ರಮೆಯಾಗಿದೆ. ನಮ್ಮನ್ನೆಲ್ಲಾ ದಾರಿ ತಪ್ಪಿಸುವ ಸಲುವಾಗಿ, ಅವರು ಆ ರೀತಿ ಮಾತನಾಡುತ್ತಿದ್ದಾರೆ. ನಾವು ಯಾರೂ ಅವರ ಸಂಪರ್ಕದಲ್ಲಿ ಇಲ್ಲ. ಮುಂದಿನ ಬಾರಿಯೂ ಬಿಜೆಪಿಯೇ ಅಧಿಕಾರಕ್ಕೆ ಬರಲಿದೆ. ಯಡಿಯೂರಪ್ಪ ಅವರು ಇಡೀ ರಾಜ್ಯ ಸುತ್ತಿ 130 ರಿಂದ 140 ಸ್ಥಾನ ಗೆಲ್ಲಿಸಿಕೊಂಡು ಬರುತ್ತೇನೆ ಅನ್ನುತ್ತಿದ್ದಾರೆ. ಯಡಿಯೂರಪ್ಪ ಅವರು ಸರ್ಕಾರವನ್ನು ಬಿಟ್ಟು ಕೊಟ್ಟಿಲ್ಲ. ಈಗಲೂ ನಮ್ಮ ಸಚಿವರು ಏನು ಮಾಡುತ್ತಿದ್ದಾರೆ. ಸರ್ಕಾರ ಏನು ಮಾಡುತ್ತಿದೆ ಎಂಬುದನ್ನು ಗಮನಿಸಿ ನಮಗೆ ಮಾರ್ಗದರ್ಶನ ನೀಡುತ್ತಿದ್ದಾರೆ.