ಬೆಂಗಳೂರು: ರಾಜ್ಯದ ಹೆಮ್ಮೆಯ ಉತ್ಪನ್ನ ನಂದಿನಿ (Nandini Milk) ಇದೀಗ ರಾಷ್ಟ್ರ ರಾಜಧಾನಿ ದೆಹಲಿಗೆ ಮತ್ತೊಮ್ಮೆ ಎಂಟ್ರಿ ಕೊಡಲು ತಯಾರಿ ನಡೆಸಿದೆ. ನವೆಂಬರ್ 21ರಿಂದ ದೆಹಲಿಯಲ್ಲಿ (Delhi) ನಂದಿನ ಹಾಲಿನ ಉತ್ಪನ್ನಗಳು ಲಭ್ಯ ಆಗಲಿವೆ.
ದೆಹಲಿಯಲ್ಲಿ ಕೆಎಂಎಫ್ ಔಟ್‍ಲೆಟ್‍ಗೆ ಸಿಎಂ ಸಿದ್ದರಾಮಯ್ಯ (Siddaramaiah) ಚಾಲನೆ ಕೊಡಲಿದ್ದಾರೆ. ಆರಂಭಿಕ ಹಂತದಲ್ಲಿ ನಿತ್ಯ 1 ಲಕ್ಷ ಲೀಟರ್ ಹಾಲನ್ನು ದೆಹಲಿಗೆ ಪೂರೈಸಲು ಕೆಎಂಎಫ್ ಮುಂದಾಗಿದೆ. ಹಸುವಿನ ಹಾಲು ಪೂರೈಸುವಂತೆ ಕೆಎಂಎಫ್‍ಗೆ ದೆಹಲಿ ಸರ್ಕಾರ ಮನವಿ ಮಾಡಿತ್ತು. ಈ ಸಂಬಂಧ ಕಳೆದ ನಾಲ್ಕೈದು ತಿಂಗಳಿಂದ ದೆಹಲಿ ಸರ್ಕಾರದ ಜೊತೆ ಕೆಎಂಎಫ್ ಮಾತುಕತೆ ನಡೆಸುತ್ತಿತ್ತು.
29 ವರ್ಷದ ಹಿಂದೆಯೇ ದೆಹಲಿಗೆ ಕೆಎಂಎಫ್ ಹಾಲನ್ನು ಪೂರೈಸುತ್ತಿತ್ತು. ಇದು ಕಾರಣಾಂತರಗಳಿಂದ ನಂತರದ ದಿನಗಳಲ್ಲಿ ಸ್ಥಗಿತಗೊಂಡಿತ್ತು.
ಇದೀಗ ದೆಹಲಿಯಲ್ಲಿ ಚಾಲ್ತಿಯಲ್ಲಿರುವ ಅಮೂಲ್, ಮದರ್ ಡೈರಿಗೆ ಕೆಎಂಎಫ್ ಪೈಪೋಟಿ ನೀಡಲಿದೆ. ಈಗಾಗಲೇ ತಮಿಳುನಾಡು, ಆಂಧ್ರ ಪ್ರದೇಶ, ಮಹಾರಾಷ್ಟ್ರ ಮತ್ತು ಕೇರಳಕ್ಕೆ ಕೆಎಂಎಫ್ ಉತ್ಪನ್ನಗಳನ್ನು ಪೂರೈಸುತ್ತಿದೆ.