ಅಮೂಲ್ (Amul) ಮತ್ತು ನಂದಿನಿ (Nandini) ಹಾಲಿನ ಜಟಾಪಟಿ ತಾರಕಕ್ಕೇರಿದೆ. ಕರ್ನಾಟಕದಲ್ಲಿ ತನ್ನ ಉದ್ಯಮವನ್ನು ಮತ್ತಷ್ಟು ಬಲಪಡಿಸಿಕೊಳ್ಳಲು ಅಮೂಲ್ ಹಲವು ರೀತಿಯಲ್ಲಿ ಕಸರತ್ತು ಮಾಡುತ್ತಿದೆ. ಇದಕ್ಕೆ ತೀವ್ರ ವಿರೋಧವು ವ್ಯಕ್ತವಾಗಿದೆ. ವಿರೋಧದ ಕಾವು ಜೋರಾಗುತ್ತಿದ್ದಂತೆಯೇ ಅಮೂಲ್ ಕಂಪೆನಿಯ ಎಂ.ಡಿ ಸದ್ಯಕ್ಕೆ ಒಂದಷ್ಟು ಕೆಲಸವನ್ನು ಸ್ಥಗಿತಗೊಳಿಸಿದ್ದೇವೆ ಎಂದು ಹೇಳಿದರೂ, ಹೋರಾಟಗಾರರು ಮಾತ್ರ ಸುಮ್ಮನಾಗಿಲ್ಲ.
ನಂದಿನಿ ಉಳಿವಿಗಾಗಿ ಈಗಾಗಲೇ ಅನೇಕ ಸೆಲೆಬ್ರಿಟಿಗಳು ಮಾತನಾಡಿದ್ದು, ನಿರ್ದೇಶಕ ಮಂಸೋರೆ, ಚಿತ್ರಸಾಹಿತಿ ಕವಿರಾಜ್ ಸೇರಿದಂತೆ ಹಲವರು ಗಟ್ಟಿಯಾಗಿ ಧ್ವನಿ ಎತ್ತಿದ್ದಾರೆ. ಇನ್ನೂ ಹಲವರು ಡಾ.ರಾಜ್ ಕುಟುಂಬ ನಂದಿನಿ ಡೈರಿಗೆ ಸಪೋರ್ಟ್ ಮಾಡಿದ್ದನ್ನು ನೆನಪಿಸಿಕೊಂಡಿದ್ದಾರೆ. ಅಲ್ಲದೇ, ರೈತರ ಉಳಿವಿಗಾಗಿ ಎಂತಹ ಹೋರಾಟಕ್ಕೂ ಸಿದ್ಧ ಎಂದು ಕನ್ನಡಪರ ಹೋರಾಟಗಾರರು ಕರೆಕೊಟ್ಟಿದ್ದಾರೆ. ಈ ನಡುವೆ ನಾಗತಿಹಳ್ಳಿ ಚಂದ್ರಶೇಖರ್ (Nagatihalli Chandrasekhar) , ನಂದಿನಿ ಜೊತೆಗಿನ ಸಂಬಂಧವನ್ನು ಹೇಳಿಕೊಂಡಿದ್ದಾರೆ.
ನಂದಿನಿ ಕುರಿತಾಗಿ ಟ್ವೀಟ್ ಮಾಡಿರುವ ನಾಗತಿಹಳ್ಳಿ, ‘ನಂದಿನಿ ನಮ್ಮವಳು ಅಲ್ಲ, ನನ್ನವಳು. ಆರೋಗ್ಯದಾಯಿನಿ. ನಾನು ಕೆಎಂಎಫ್ ನ ಮೈಸೂರು ಡೈರಿಯಲ್ಲಿ ಆರು ವರ್ಷ ದಿನಗೂಲಿ ಜತೆ ವ್ಯಾಸಂಗ ಮಾಡಿ ಬದುಕು ಕಟ್ಟಿಕೊಂಡವನು. ನಾಗತಿಹಳ್ಳಿಯಲ್ಲಿ ಹೆಣ್ಣು ಮಕ್ಕಳಿಗಾಗಿ ಮಾಡಿಕೊಟ್ಟ ಅಭಿವ್ಯಕ್ತಿ ಹಾಲು ಉತ್ಪಾದಕರ ಸಂಘ ಯಶಸ್ವಿಯಾಗಿ ನಡೆಯುತ್ತಿದೆ. ನಂದಿನಿ ಇಲ್ಲದ ಗ್ರಾಮ್ಯ ಬದುಕನ್ನು ಕಲ್ಪಿಸಿಕೊಳ್ಳುವುದೂ ಕಷ್ಟ’ ಎಂದು ಬರೆದಿದ್ದಾರೆ. ಇದನ್ನೂ ಓದಿ: ಬೋಲ್ಡ್ ಅವತಾರ ತಾಳಿದ ‘ಕಬ್ಜ’ ಸುಂದರಿ ಶ್ರೀಯಾ
ನಾಗತಿಹಳ್ಳಿ ಮೇಷ್ಟ್ರು ಶಾಲಾ ದಿನಗಳಲ್ಲಿ ನಂದಿನಿ ಡೈರಿಯಲ್ಲಿ ಕೆಲಸ ಮಾಡಿದ್ದನ್ನು ನೆನಪಿಸಿಕೊಂಡಿದ್ದಾರೆ. ಆರು ವರ್ಷಗಳ ಕಾಲ ಡೈರಿಯಲ್ಲಿ ಅವರು ಕೆಲಸ ಮಾಡಿದ್ದಾರಂತೆ. ಹಾಗಾಗಿ ಅದರೊಂದಿಗೆ ತಮ್ಮದು ಭಾವನಾತ್ಮಕ ಸಂಬಂಧವಿದೆ ಎಂದು ಹೇಳಿಕೊಂಡಿದ್ದಾರೆ. ಅದು ಎಲ್ಲರ ಬದುಕನ್ನು ಕಟ್ಟಿಕೊಟ್ಟಿದೆ ಎಂದು ವಿವರಿಸಿದ್ದಾರೆ.