ಅಯ್ಯೋ ಸಾಕಪ್ಪ ಸಾಕು ಸ್ವಲ್ಪ ರಿಲ್ಯಾಕ್ಸ್ ಆಗೋಣ, ಎಲ್ಲಾದ್ರೂ ಕೂಲ್ ಆಗಿರೋ ಜಾಗಕ್ಕೆ, ಒಳ್ಳೆಯ ಗಾಳಿ ಸಿಗೋ ಜಾಗಕ್ಕೆ ಹೋಗೋಣ ಅಂತಾ ಬೆಂಗಳೂರಿನಲ್ಲಿ ಕೆಲಸ ಮಾಡೋ ಪ್ರತಿಯೊಬ್ಬರಿಗೆ ಗ್ಯಾರೆಂಟಿ ಅನ್ನಿಸಿರುತ್ತೆ. ವೀಕೆಂಡ್ ಬಂದ್ರೆ ಸಾಕು, ಈ ವಿಚಾರ ಒಂದ್ಸಲ್ ತಲೇಲಿ ಸುಯ್ ಅಂತಾ ಹಾದು ಹೋಗಿರುತ್ತೆ. ಆದ್ರೆ, ಕೆಲವು ಟೈಂ ಅಯ್ಯೋ ನೂರಾರು ಕಿಮೀ ಎಲ್ಲಿ ಹೋಗೋದು ಬೀಡು ಅಂದುಕೊಂಡು ಸುಮ್ಮನಾಗಿರ್ತಾರೆ. ಅಂಥವರಿಗೆ ತುಮಕೂರು ಬಳಿ ಉತ್ತಮ ಸ್ಥಳವಿದೆ.
Advertisement
ಬಹಳ ದೂರ ಇಲ್ಲ, ಬೆಂಗಳೂರಿನಿಂದ ಜಸ್ಟ್ 70 ಕಿಮೀ, ತುಮಕೂರಿನಿಂದ 15 ಕಿಮೀ ದೂರ. ಇಲ್ಲಿ ನಿಮಗೆ ಶುದ್ಧ ಗಾಳಿ, ರಿಲ್ಯಾಕ್ಸ್ ಮಾಡುವ ವೆದರ್, ದಟ್ಟ ಕಾನನದ ನಡುವಿನ ನಿಶ್ಯಬ್ಧ ವಾತಾವರಣ, ಜಿಂಕೆ, ಕಡವೆ, ವಿವಿಧ ಜಾತಿಯ ಪಕ್ಷಿಗಳು, ಶುದ್ಧ ನೀರು, ಶುದ್ಧ ಜೇನುತುಪ್ಪ, ಧ್ಯಾನ ಕೇಂದ್ರ, ಪಕ್ಷಿ ಪ್ರೀಯ ಸಲೀಂ ಅಲಿಯ ಅಚ್ಚುಮೆಚ್ಚಿನ ತಾಣ, ಹೀಗೆ ಹತ್ತು ಹಲವು ವಿಶೇಷತೆಗಳು ನಿಮಗೆ ಸಿಗಬೇಕು ಅಂದ್ರೆ ನೀವು ನಾಮದ ಚಿಲುಮೆಗೆ ಹೋಗಲೇಬೇಕು.
Advertisement
Advertisement
ಪೌರಾಣಿಕ ಹಿನ್ನೆಲೆ ಏನು?
ಈಡೀ ವಾರ ದಣಿದ ದೆಹಕ್ಕೆ ರಿಲ್ಯಾಕ್ಸ್ ಕೊಡೋ ಈ ಜಾಗಕ್ಕೆ ಒಂದು ಪೌರಾಣಿಕ ಕಥೆ ಇದೆ. ರಾಮ ತನ್ನ ವನವಾಸದ ಸಂದರ್ಭದಲ್ಲಿ ಈ ಜಾಗದಲ್ಲಿ ಕೆಲವು ದಿನ ಉಳಿದುಕೊಂಡಿದ್ದನಂತೆ. ಈ ಸಂದರ್ಭದಲ್ಲಿ ಹಣೆಗೆ ನಾಮವನ್ನಿಟ್ಟುಕೊಳ್ಳಲು ನೀರನ್ನು ಹುಡುಕಿದನಂತೆ. ಎಲ್ಲೆಡೆ ಬರೀ ಕಲ್ಲು ಬಂಡೆಗಳೆ ಇದ್ದಿದ್ದರಿಂದ ಎಲ್ಲೂ ನೀರು ಸಿಗಲಿಲ್ಲವಂತೆ. ಆಗ ಈ ಕಲ್ಲುಬಂಡೆಗೆ ತನ್ನ ಬಾಣ ಬಿಟ್ಟಾಗ ನೀರಿನ ಚಿಲುಮೆ ಕಾಣಿಸಿಕೊಂಡಿದೆ. ಹಾಗಾಗಿ ಇದಕ್ಕೆ ನಾಮದ ಚಿಲುಮೆ ಅಂತಾನೆ ಕರೆಯುತ್ತಾರೆ. ಇದರ ವಿಶೇಷತೆ ಏನೂ ಅಂದ್ರೆ, ಈ ಚಿಲುಮೆ ಯಾವತ್ತು ಬತ್ತಿಲ್ಲ. ಬೇಸಿಗೆಯಲ್ಲೂ ಸದಾ ನೀರು ಇದ್ದೆ ಇರುತ್ತೆ.
Advertisement
ಜಿಂಕೆ ವನವಿದೆ:
ಮಕ್ಕಳನ್ನ ಕರೆದುಕೊಂಡು ಹೋದ್ರಂತೂ ಮಕ್ಕಳು ಸಖತ್ ಆಗಿ ಎಂಜಾಯ್ ಮಾಡ್ತಾರೆ. ಕಾರಣ ಇಲ್ಲಿರೋ ಜಿಂಕೆಗಳು, ಕಡವೆಗಳು ನಿಮ್ಮನ್ನ ಆಕರ್ಷಿಸುತ್ವೆ. ಅವುಗಳಿಗೆ ತಿನ್ನಲು ಹುಲ್ಲನ್ನ ಸಹ ನೀವು ಕೊಡಬಹುದು. ಇಲ್ಲಿರೋ ಜಿಂಕೆಗಳಿಗೆ, ಕಡವೆಗಳಿಗೆ ಭಯ ಇಲ್ಲ. ನಿಮ್ಮ ಹತ್ತಿರ ಬರುತ್ವೆ. ಅವುಗಳಿಗೆ ಹುಲ್ಲನ್ನ ಕೊಟ್ಟು ನೀವು ಮುಟ್ಟಬಹುದು. ಈ ಜಿಂಕೆಗಳೊಂದಿಗೆ ಸ್ವಲ್ಪ ಟೈಂ ಸ್ಪೆಂಡ್ ಮಾಡಿದ್ರೆ ನಿಮ್ಮ ಮನಸ್ಸು ಹಗುರವಾಗೋದಂತೂ ಗ್ಯಾರಂಟಿ, ಟೆನ್ಷನ್ ಎಲ್ಲ ಮಂಗಮಾಯವಾಗೋಗುತ್ತೆ.
ಸಲೀಂ ಅಲಿ ಅಚ್ಚುಮೆಚ್ಚಿನ ಜಾಗ:
ಈ ಜಾಗ ಪಕ್ಷಿ ಪ್ರೇಮಿ ಸಲೀಂ ಅಲಿ ಅವರಿಗೆ ಅಚ್ಚುಮೆಚ್ಚಿನದ್ದಾಗಿತ್ತು. ಒಮ್ಮೆ ಈ ಜಾಗಕ್ಕೆ ಬಂದಾಗ ಇಲ್ಲಿನ ಪಕ್ಷಿಗಳನ್ನ, ಇಲ್ಲಿರುವ ಸಸ್ಯಸಂಕುಲಗಳನ್ನ ನೋಡಿ ಕಾಡಿನಲ್ಲೇ ಮೂರು ದಿನ ಉಳಿದುಕೊಂಡಿದ್ದರಂತೆ. ಇದಾದ ಬಳಿ ಮೂರು ಬಾರಿ ಇಲ್ಲಿಗೆ ಬಂದು ಹೋಗಿದ್ದರಂತೆ. ಅವರು ಉಳಿದುಕೊಳ್ತಿದ್ದ ಚಿಕ್ಕ ಕೊಠಡಿ ಕೂಡ ಇಲ್ಲೇ ಇದೆ. ಆದ್ರೆ ಸದ್ಯ ಅದು ಪಾಳು ಬಿದ್ದಿದೆ.
ರಾಮನ ಬಂಟನ ತುಂಟಾಟ.
ಈ ಜಾಗದಲ್ಲಿ ಸ್ವಲ್ಪ ಮಂಗಗಳಿಂದ ಎಚ್ಚರವಾಗಿರಿ. ನೀವೇನಾದ್ರು ಸೌತೆಕಾಯಿ, ಬ್ಯಾಗ್, ತಿಂಡಿ ಒಯ್ಯೋದಾದ್ರೆ, ಹೆಗಲಿಗೆ ಹಾಕಿಕೊಳ್ಳೊ ಬ್ಯಾಗ್‍ನಲ್ಲಿಟ್ಟುಕೊಂಡು ಹೋಗಿ. ಕೈಯಲ್ಲಿ ಹಿಡಿದುಕೊಂಡು ಹೋದ್ರೆ, ಅಷ್ಟೇ ಕಥೆ. ಎಗರಿಸಿಕೊಂಡು ಹೋಗೋದು ಪಕ್ಕ. ಸೋ ಮಂಗಗಳಿಂದ ನಿಮ್ಮ ಬ್ಯಾಗ್‍ಗಳ ಬಗ್ಗೆ ಎಚ್ಚರ.
ಶುದ್ಧ ಕಾಡು ಜೇನುತುಪ್ಪ.
ಇಲ್ಲಿ ನಿಮಗೆ ಶುದ್ಧವಾದ ಕಾಡುಜೇನುತುಪ್ಪ ಸಿಗುತ್ತೆ. ಜೇನುತುಪ್ಪ ಇಷ್ಟಪಡೋರು ಮಿಸ್ ಮಾಡ್ದೆ ತಗೊಳ್ಳಿ. ನಾಮದ ಚಿಲುಮೆಯ ಎದುರುಗಡೆ ಸಿದ್ಧ ಸಜೀವಿನಿ ಔಷಧಿ ಸಸ್ಯ ವನವಿದೆ. ಇಲ್ಲಿ ನಿಮಗೆ ಈ ಜೇನುತುಪ್ಪ ಲಭ್ಯವಿರುತ್ತೆ. ಅಷ್ಟೇ ಅಲ್ಲ ಇಲ್ಲಿ ಕಾಡಿನಲ್ಲಿ ಸಿಗುವ ನೈಸರ್ಗಿಕ ಔಷಧಿಗಳು ಲಭ್ಯವಿದೆ. ಇದಲ್ಲದೆ, ಇಲ್ಲೊಂದು ಪಿರಾಮಿಡ್ ಧ್ಯಾನಮಂದಿರ ಕೂಡ ಇದೆ. ಆದ್ರೆ, ಸದ್ಯ ಇದರ ಬಳಕೆ ಯಾರು ಮಾಡದೇ ಇರೋದ್ರಿಂದ, ಅದಕ್ಕೆ ಬೀಗ ಹಾಕಿರುತ್ತಾರೆ.
ದೇವರಾಯನದುರ್ಗ:
ನಾಮದ ಚಿಲುಮೆ ಬರೋದೆ ಈ ದೇವರಾಯನದುರ್ಗ ಅರಣ್ಯ ಪ್ರದೇಶದಲ್ಲಿ. ನಾಮದ ಚಿಲುಮೆಯಿಂದ 3 ಕಿಮೀ ದೂರದಲ್ಲಿ ಈ ದೇವರಾಯನದುರ್ಗ ಬರುತ್ತೆ. ತುಮಕೂರಿನಿಂದ 10 ಕಿ.ಮೀ. ದಾಟಿದರೆ ಸಾಕು ದೇವರಾಯನದುರ್ಗ ಅರಣ್ಯಪ್ರದೇಶ ಆರಂಭವಾಗುತ್ತದೆ. ಒಂದು ದಿನದ ಪ್ರವಾಸಕ್ಕೆ ಅತ್ಯಂತ ಯೋಗ್ಯವಾದ ಸ್ಥಳ ಇದಾಗಿದೆ. ಹತ್ತಿರದಲ್ಲೆ ದುರ್ಗದಹಳ್ಳಿ ಎಂಬ ಹಳ್ಳಿಯಲ್ಲಿ 8ನೇ ಶತಮಾನದ ಶಂಕರಾಚಾರ್ಯರು ಕಟ್ಟಿರುವ ಸುಂದರವಾದ ದೇವಾಲಯವಿದೆ. ಸಮೀಪದಲ್ಲಿ ‘ನಾಯಕನ ಕೆರೆ’ ಎಂಬ ಮನೋಹರವಾದ ಕೆರೆ ಇದೆ. ಇಲ್ಲಿನ ಬೆಟ್ಟದ ಮೇಲೆ ಯೋಗ ನರಸಿಂಹ ಮತ್ತು ಭೋಗ ನರಸಿಂಹರ ದೇವಾಲಯಗಳಿವೆ, ಹಳೆಯ ಕೋಟೆ, ಸೂರ್ಯಾಸ್ತ ನೋಡಲು ಅತ್ಯಂತ ಸುಂದರಾವಾದ ಜಾಗ ಇದು.
ದೇವರಾಯನ ದುರ್ಗದ ಕಾಡಿನಲ್ಲಿ ಚಿರತೆ, ಕಾಡು ಹಂದಿ, ಮುಳ್ಳು ಹಂದಿ, ಜಿಂಕೆ ಮುಂತಾದ ಪ್ರಾಣಿಗಳು ಕಂಡು ಬರುತ್ತವೆ. ಆದರೆ ಇದು ಅಭಯಾರಣ್ಯವಲ್ಲದಿದ್ದರಿಂದ ಕಾಣಲು ಸಿಗುವುದು ಅಪರೂಪ. ಇತ್ತೀಚಿನ ವರದಿ ಪ್ರಕಾರ ದೇವರಾಯನದುರ್ಗದಲ್ಲಿ ಹುಲಿ ಕೂಡ ಪತ್ತೆಯಾಗಿದೆ. ಉಳಿದುಕೊಳ್ಳೋಕೆ ಸರ್ಕಾರಿ ಗೆಸ್ಟ್ ಹೌಸ್ ಬಿಟ್ಟರೇ ಬೇರೆ ಹೋಟೆಲ್‍ಗಳಿಲ್ಲ. ಹಾಗಾಗಿ ಏನಾದ್ರು ತಿನ್ನಲು, ಕುಡಿಯಲು ನೀರನ್ನ ತುಮಕೂರಿನಿಂದಲೇ ತೆಗೆದುಕೊಂಡು ಹೋದರೆ ಒಳ್ಳೆಯದು.
– ಅರುಣ್ ಬಡಿಗೇರ್