ಧಾರವಾಡ: ಕಾಂಗ್ರೆಸ್ಸಿನಲ್ಲಿರುವವರನ್ನು ಕಾಯಲು ಇಬ್ಬರು ಕಾವಲುಗಾರರಿದ್ದಾರೆ. ಅದು ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಧಾರವಾಡದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‍ನಲ್ಲಿರುವ ಎಲ್ಲರೂ ಪಂಜರದ ಗಿಣಿಗಳು. ಕಾಂಗ್ರೆಸ್‍ನಲ್ಲಿರುವ ನಾಯಕರನ್ನು ಕಾಯಲು ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಕಾವಲುಗಾರರಾಗಿದ್ದಾರೆ. ಕೆಲವು ಗಿಣಿಗಳು ಡಿಕೆಶಿ ಬಳಿ ಇದ್ದರೆ, ಇನ್ನೂ ಕೆಲವು ಸಿದ್ದರಾಮಯ್ಯನವರ ಬಳಿ ಇವೆ. ಮೊದಲು ಅವರೆಲ್ಲರೂ ಅದರಿಂದ ಹೊರ ಬರಲಿ ಎಂದು ವ್ಯಂಗ್ಯವಾಡಿದ್ದಾರೆ.
ಬಸವರಾಜ್ ಬೊಮ್ಮಾಯಿಯವರು ಸಿಎಂ ಆದ ಬಳಿಕ ಸ್ವತಂತ್ರವಾಗಿ ಎಲ್ಲ ನಿರ್ಧಾರ ತೆಗೆದುಕೊಂಡು ಉತ್ತಮವಾಗಿ ಆಡಳಿತ ನಡೆಸುತ್ತಿದ್ದಾರೆ. ಸಿಎಂ ಬಿಎಸ್‍ವೈ ಸರ್ಕಾರದ ಎಲ್ಲ ಯೋಜನೆಗಳನ್ನು ಅನುಷ್ಟಾನ ಗೊಳಿಸುತ್ತಿದ್ದಾರೆ. ಸಿದ್ದರಾಮಣ್ಣ ಕಾಲದಲ್ಲಿ ಧರ್ಮ ವಿರೋಧಿ ನೀತಿಯಿಂದ ಬಿಜೆಪಿಗೆ ಅಧಿಕಾರ ಸಿಕ್ಕಿದೆ. ಮುಖ ಉಳಿಸಿಕೊಳ್ಳಲು ಸಿದ್ದರಾಮಯ್ಯ, ಡಿಕೆಶಿ ಹಾಗೂ ರಾಯರೆಡ್ಡಿ ಮಾತನಾಡುತ್ತಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ:ದೇಶವನ್ನೇ ತೊರೆದ ತಾಲಿಬಾನ್ ನಾಯಕನನ್ನು ಸಂದರ್ಶಿಸಿದ ಪತ್ರಕರ್ತೆ
ಇದೇ ವೇಳೆ ಕಾಂಗ್ರೆಸ್‍ನಲ್ಲಿ ಒಳಜಗಳ ಜಾಸ್ತಿಯಾಗಿದೆ, ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗಿ ಇಷ್ಟು ದಿನ ಆದರೂ ಪದಾಧಿಕಾರಿಗಳ ನೇಮಕ ಆಗಿಲ್ಲ. ಒಂದು ಪಕ್ಷದಲ್ಲಿ ಸಲೀಂ, ರಾಮಲಿಂಗಾರೆಡ್ಡಿ, ಧ್ರುವನಾರಾಯಣ, ಖಂಡ್ರೆ ಹೀಗೆ ಎಷ್ಟು ಜನ ಅಧ್ಯಕ್ಷರಿದ್ದಾರೆ ಎಂದು ವ್ಯಂಗ್ಯವಾಡಿದರು. ಅಲ್ಲದೇ ಯುವ ಕಾಂಗ್ರೆಸ್‍ಗೆ ನಲಪಾಡ್ ಹಾಗೂ ರಕ್ಷಾ ಎಂಬ ಇಬ್ಬರು ಅಧ್ಯಕ್ಷರಿದ್ದಾರೆ. ಈಗ ಒಬ್ಬರಿಗೆ ಅಧಿಕಾರ ಕೊಟ್ಟಿದ್ದಾರೆ. ಮೂರು ತಿಂಗಳ ನಂತರ ಮತ್ತೊಬ್ಬರಿಗೆ ಅಧಿಕಾರ ಅಂತೆ ಎಂದು ಅಣುಕಿಸಿದ್ದಾರೆ.
ಡಿಕೆಶಿ ನಲಪಾಡ್ ಅಧ್ಯಕ್ಷ ಅಂತಾರೆ, ಸಿದ್ದರಾಮಯ್ಯ ರಕ್ಷಾ ಅಧ್ಯಕ್ಷ ಅಂತಾರೆ, ಕಾಂಗ್ರೆಸ್ ಪಕ್ಷವನ್ನು ನಡೆಸುವುದಕ್ಕೆ ಆಗದ ಇವರು ರಾಜ್ಯ ಏನು ನಡೆಸುತ್ತಾರೆ? ಕೇಂದ್ರದಲ್ಲಿ ಕಾಂಗ್ರೆಸ್‍ಗೆ ಅಧ್ಯಕ್ಷರೇ ಇಲ್ಲ. ಇವರು ಇನ್ನೊಂದು ಪಕ್ಷಕ್ಕೆ ಏನು ಪಾಠ ಮಾಡುತ್ತಾರೆ. ಕಾಂಗ್ರೆಸ್ ನಶಿಸಿ ಹೋಗುವ ಪಕ್ಷವಾಗಿದ್ದು, ಅದು ಇತಿಹಾಸ ಸೇರುವ ಪಕ್ಷವಾಗಿದೆ ಎಂದು ಹೇಳಿದ್ದಾರೆ.ಇದನ್ನೂ ಓದಿ:ಕಾರಿನ ಮುಂಭಾಗದ ಗ್ಲಾಸಿಗೆ ಬಡಿದು ಸಿಕ್ಕಿಕೊಂಡಿತ್ತು ಯುವತಿಯ ತಲೆ