– ಕಾಮಾಲೆ ರೋಗದವರಿಗೆ ಕಾಣೋದೆಲ್ಲಾ ಹಳದಿ
ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಹೆಚ್‍ಡಿ ಕುಮಾರಸ್ವಾಮಿ ಶಾಖೆಗೆ ಬಂದು ಸಂಘದ ಶಿಕ್ಷಣ ಪಡೆಯಿರಿ, ನಿಮಗೂ ಒಳ್ಳೆಯದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಲಹೆ ನೀಡಿದರು.
ಆರ್‌ಎಸ್‌ಎಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ ನೀಡಿರುವ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಮಾಲೆ ರೋಗದವರಿಗೆ ಕಾಣೋದೆಲ್ಲಾ ಹಳದಿ. ಕುಮಾರಸ್ವಾಮಿ ಅವರು ಸಂಘದ ವಿರುದ್ಧ ಆರೋಪ ಮಾಡಿದ್ದಾರೆ. ಅವರಿಗೆ ಸಂಘದ ವಿಚಾರಧಾರೆ ಸರಿಯಾಗಿ ತಿಳಿದಿಲ್ಲ. ಅವರು ಶಾಖೆಗೆ ಭೇಟಿ ನೀಡಿ ಸಂಘದ ಚಟುವಟಿಕೆ ತಿಳಿದುಕೊಳ್ಳುವುದು ಒಳ್ಳೆಯದು. ಕುಮಾರಸ್ವಾಮಿ ಅವರೇ ಶಾಖೆಗೆ ಬಂದು ಸಂಘದ ಶಿಕ್ಷಣ ಪಡೆಯಿರಿ ನಿಮಗೂ ಒಳ್ಳೆಯದು ಆಗುತ್ತದೆ ಎಂದು ಸಲಹೆ ನೀಡಿದರು. ಇದನ್ನೂ ಓದಿ: ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು ಭಾರೀ ಮಳೆ ಸಾಧ್ಯತೆ- ಹವಾಮಾನ ಇಲಾಖೆ ಮುನ್ಸೂಚನೆ
Advertisement
ಕುಟುಂಬದವರಿಗೆ ಎಲ್ಲ ಅಧಿಕಾರ ಕೊಟ್ಟವರು!
ಸಂಘ ಈ ದೇಶದಲ್ಲಿ ರಾಷ್ಟ್ರಭಕ್ತಿ ಉದ್ದೀಪನ ಮಾಡಿದೆ. ಪ್ರತಿಯೊಬ್ಬ ವ್ಯಕ್ತಿಯನ್ನು ರಾಷ್ಟ್ರದೃಷ್ಟಾನ ಮಾಡಬೇಕು ಎಂಬ ಚಿಂತನೆಯಿಂದ ಅವರಿಗೆ ಆರ್‌ಎಸ್‌ಎಸ್ ಶಿಕ್ಷಣ ಕೊಡುತ್ತೆ. ಅವರು ಅಧಿಕಾರದಲ್ಲಿ ಇದ್ದಾಗ ಜಾತಿವಾದದಲ್ಲಿ ಎಲ್ಲರನ್ನು ತೆಗೆದುಕೊಳ್ಳುತ್ತಿದ್ದರು. ಕುಟುಂಬ ರಾಜಕಾರಣ ಮಾಡಿದರು. ಕುಟುಂಬದವರಿಗೆ ಎಲ್ಲ ಅಧಿಕಾರ ಕೊಟ್ಟವರು. ಇಂತಹವರಿಂದ ಇದನ್ನು ಬಿಟ್ಟು ಬೇರೆ ನಿರೀಕ್ಷೆ ಮಾಡಲು ಸಾಧ್ಯವಾ? ಸಂಘದ ಶಿಕ್ಷಣ ಪಡೆದವರು ಐಎಎಸ್, ಐಪಿಎಸ್ ಅಧಿಕಾರಿ ಆದರೆ ನಾವು ಸಂತೋಷ ಪಡುತ್ತೇವೆ. ಅವರಿಂದಾಗಿ ದೇಶಕ್ಕೆ ಇನ್ನಷ್ಟು ಒಳ್ಳೆಯದು ಆಗುತ್ತದೆ ಎಂದರು.
Advertisement
Advertisement
ಸಂಘದ ಶಿಕ್ಷಣ ಪಡೆದವರು ಸರ್ಕಾರದ ಯಾವ ಹುದ್ದೆಯಲ್ಲಿ ಇರಬಾರದು ಎಂದು ಹೇಗೆ ಹೇಳ್ತಾರೆ? ಈ ದೇಶದ ರಾಷ್ಟ್ರಪತಿ, ಈ ದೇಶದ ಪ್ರಧಾನ ಮಂತ್ರಿ ಸಂಘದ ಸ್ವಯಂ ಸೇವಕರು. ಸಂಘದ ಶಾಖೆಯಲ್ಲಿ ಸಂಸ್ಕಾರ ಕೊಡುವ ಕೆಲಸ ಮಾಡುತ್ತದೆ ಎಂದು ತಿಳಿಸಿದರು.
Advertisement
ಮತಗಟ್ಟೆ ಕಾರ್ಯಕ್ರಮ ಮುಗಿಸಿದೆ!
ಇದೇ ವೇಳೆ ಉಪ ಚುನಾವಣೆ ವಿಚಾರವಾಗಿ ಮಾತನಾಡಿದ ಕಟೀಲ್, ಸಿಂದಗಿ ಹಾಗೂ ಹಾನಗಲ್ ಕ್ಷೇತ್ರದಲ್ಲಿ ಉಪ ಚುನಾವಣೆ ಘೋಷಣೆ ಆಗಿದೆ. ಬಿಜೆಪಿ ಈಗಾಗಲೇ ಮತಗಟ್ಟೆ ಕಾರ್ಯಕ್ರಮ ಮುಗಿಸಿದೆ. ಎಲ್ಲ ಕಾರ್ಯಕರ್ತರು ಮನೆ ಮನೆ ಸಂಪರ್ಕ ಕಾರ್ಯಕ್ರಮ ಆರಂಭಿಸಿದ್ದಾರೆ. ಎರಡು ಕಡೆಯಲ್ಲಿ ಬಿಜೆಪಿ ಪರವಾದ ಅಲೆ ಇದೆ. ಎರಡು ಕಡೆ ಬಿಜೆಪಿ ಅಭೂತಪೂರ್ವವಾದ ಗೆಲುವು ಸಾಧಿಸುತ್ತದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯಗಳು, ಯೋಜನೆಗಳು ಹಾಗೂ ಸರ್ಕಾರದ ಸಾಧನೆ ಮುಂದಿಟ್ಟುಕೊಂಡು ಜನರ ಬಳಿ ಮತಯಾಚನೆ ಮಾಡುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ‘ಟೇಕ್ ಕೇರ್ ಕಿಂಗ್’ ಎಂದ ಶಾರೂಖ್ ಅಭಿಮಾನಿಗಳು
ಕೋರ್ ಕಮಿಟಿ ಸಭೆಯಲ್ಲಿ ಅಭ್ಯರ್ಥಿಗಳ ಹೆಸರು ಸಿದ್ಧಪಡಿಸಿ ಕೇಂದ್ರಕ್ಕೆ ಕಳುಹಿಸಿದ್ದೇವೆ. ಇಂದು ಅಥವಾ ನಾಳೆ ಅಭ್ಯರ್ಥಿಗಳ ಹೆಸರನ್ನು ಕೇಂದ್ರದ ನಾಯಕರು ಅಂತಿಮಗೊಳಿಸಲಿದ್ದಾರೆ ಎಂದರು.
ಕಠಿಣವಾದ ಶಿಕ್ಷೆ ಆಗಬೇಕು!
ಮತಾಂತರ ವಿಚಾರವಾಗಿ ಮಾತನಾಡಿದ ಅವರು, ರಾಜ್ಯದಲ್ಲಿ ಮತಾಂತರ ಜಾಸ್ತಿ ಆಗುತ್ತಿದೆ ಎಂಬ ಚರ್ಚೆ ನಡೆಯುತ್ತಿದೆ. ಖಂಡಿತವಾಗಿ ಇದಕ್ಕೆ ಕಠಿಣವಾದ ಕಾನೂನು ತರಬೇಕು. ಮತಾಂತರ ತಡೆಯ ಕಾಯ್ದೆ ಆಗಲೇಬೇಕು. ಯಾರು ಯಾರು ಮತಾಂತರ ಮಾಡ್ತಾರೆ ಅವರಿಗೆ ಕಠಿಣವಾದ ಶಿಕ್ಷೆ ಆಗಬೇಕು. ಇದರ ಬಗ್ಗೆ ಅವಕಾಶ ಸಿಕ್ಕಿದಾಗ ಸಿಎಂ ಬೊಮ್ಮಾಯಿ ಅವರ ಜೊತೆ ಮಾತನಾಡುತ್ತೇನೆ. ಈ ಕುರಿತು ಪೂರ್ಣವಾದ ತನಿಖೆ ಆಗಬೇಕು. ಎಲ್ಲೆಲ್ಲಿ ಮತಾಂತರ ಚಟುವಟಿಕೆ ಕೇಂದ್ರ ಇದ್ದಾವೆ, ಆ ಕೇಂದ್ರಗಳ ಬಗ್ಗೆ ತಕ್ಷಣವಾದ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು. ಇದನ್ನೂ ಓದಿ: 5ನೇ ತರಗತಿ ವಿದ್ಯಾರ್ಥಿನಿಗೆ ಕಿರುಕುಳ- ಶಿಕ್ಷಕ ಅರೆಸ್ಟ್