ಬೆಂಗಳೂರು: ಬಿಟ್‌ಕಾಯಿನ್ ಕೇಸ್‌ನಲ್ಲಿ ನಲಪಾಡ್ ವಿಚಾರಣೆ ಆಗುತ್ತಿದೆ. ಅದರ ಬಗ್ಗೆ ಸರ್ಕಾರ ಪ್ರತಿಕ್ರಿಯೆ ಕೊಡುವ ಅವಶ್ಯಕತೆ ಇಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ (G Parameshwar) ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಬಿಟ್‌ಕಾಯಿನ್ ಕೇಸ್‌ನಲ್ಲಿ ನಲಪಾಡ್‌ಗೆ ಪೊಲೀಸರರು ವಿಚಾರಣೆಗೆ ನೋಟಿಸ್ ಕೊಟ್ಟಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ವಿಚಾರಣೆಗೆ ನೋಟಿಸ್ ಕೊಟ್ಟಿದ್ದರೆ ಅದಕ್ಕೆ ನಾನೇನು ಹೇಳಬೇಕು. ಬಿಟ್‌ಕಾಯಿನ್ ತನಿಖೆ ನಡೆಯುತ್ತಿದೆ. ತನಿಖಾಧಿಕಾರಿಗಳಿಗೆ ಯಾರನ್ನು ವಿಚಾರಣೆ ಮಾಡಬೇಕು ಅಂತ ಅನ್ನಿಸುತ್ತದೆ ಅವರನ್ನು ವಿಚಾರಣೆ ಮಾಡ್ತಾರೆ. ಅದರಲ್ಲಿ ನಲಪಾಡ್ ಕೂಡಾ ಒಬ್ಬರು. ಅವರನ್ನು ವಿಚಾರಣೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.ಇದನ್ನೂ ಓದಿ: ಪೊಲೀಸ್ ಅಧಿಕಾರಿಯಾಗಿ ಅಚ್ಚರಿ ಮೂಡಿಸಲಿದ್ದಾರೆ ಬಿಗ್ ಬಾಸ್ ರೂಪೇಶ್ ಶೆಟ್ಟಿ!
ನಲಪಾಡ್ ಮತ್ತು ಶ್ರೀಕಿ ನಡುವೆ ಸಂಬಂಧ ಇದೆಯಾ ಇಲ್ಲವಾ? ಎನ್ನುವುದನ್ನು ತನಿಖೆ ಮಾಡುತ್ತಾರೆ. ಇನ್ವೆಸ್ಟಿಗೇಷನ್ ಅಂದರೆ ಅದೇ ತಾನೆ. ಯಾರಿಗೆ ಸಂಬಂಧ ಇದೆ, ಇಲ್ಲವಾ? ಹಣಕಾಸು ವ್ಯವಹಾರ ಇದೆಯಾ, ಇಲ್ಲವಾ? ಎಲ್ಲವನ್ನು ತನಿಖೆ ಮಾಡುತ್ತಾರೆ. ತನಿಖೆ ನಡೆಯುತ್ತಿರುವಾಗ, ಒಬ್ಬರನ್ನು ವಿಚಾರಣೆಗೆ ಕರೆದಾಗ ಸರ್ಕಾರ ಉತ್ತರ ಕೊಡಲು ಆಗುವುದಿಲ್ಲ. ಸಂಪೂರ್ಣವಾಗಿ ತನಿಖೆ ಆಗಲಿ. ಬಳಿಕ ಎಲ್ಲಾ ಮಾಹಿತಿ ಕೊಡುತ್ತೇವೆ ಎಂದು ಸ್ಪಷ್ಟಪಡಿಸಿದರು.
2ನೇ ಏರ್ಪೋರ್ಟ್ ಜಾಗದ ಬಗ್ಗೆ ಚರ್ಚೆ ಅವಶ್ಯಕತೆ ಇಲ್ಲ:
ಇದೇ ವೇಳೆ ಬೆಂಗಳೂರಿನಲ್ಲಿ 2ನೇ ಏರ್ಪೋರ್ಟ್ ಜಾಗದ ಬಗ್ಗೆ ಮಾತನಾಡಿ, ಎರಡನೇ ಏರ್ಪೋರ್ಟ್ ತುಮಕೂರಾ? ಅಥವಾ ಬಿಡದಿಯಲ್ಲಾ? ಎಂಬ ಚರ್ಚೆ ಅವಶ್ಯಕತೆ ಇಲ್ಲ. ಎಲ್ಲಿ ಏರ್ಪೋರ್ಟ್ ಮಾಡಬೇಕು ಎಂಬ ಚರ್ಚೆ ಯಾಕೆ ಮಾಡಬೇಕು. ಸರ್ಕಾರ ಅಂತಿಮವಾಗಿ ಒಂದು ನಿರ್ಧಾರ ತೆಗೆದುಕೊಳ್ಳುತ್ತದೆ. ಅದು ಒಂದು ಟೆಕ್ನಿಕಲ್ ವಿಷಯ. ಅದನ್ನ ಚರ್ಚೆ ಮಾಡಿ ಅದರ ಸಾಧಕ-ಬಾಧಕಗಳನ್ನ ನೋಡಿ ನಿರ್ಧರಿಸುತ್ತಾರೆ. ಅದಕ್ಕೆ ಇಷ್ಟೊಂದು ಚರ್ಚೆ ಅಗತ್ಯ ಇಲ್ಲ ಎಂದರು.
ಮೂಲಸೌಕರ್ಯ ಪ್ರಾಜೆಕ್ಟ್, ಜನ ಸಮುದಾಯಕ್ಕೆ, ರಾಜ್ಯಕ್ಕೆ ಅನುಕೂಲ ಆಗಬೇಕು ಅಂತ ಎರಡನೇ ಏರ್ಪೋರ್ಟ್ ಮಾಡ್ತಿರೋದು. ಬಿಡದಿಯಲ್ಲಿ ಮಾಡಿದರೆ ಎಷ್ಟು ಪ್ರಮಾಣದಲ್ಲಿ ಅನುಕೂಲ ಆಗುತ್ತದೆಯೋ, ತುಮಕೂರಿನಲ್ಲಿ ಆದರೂ ಅಷ್ಟೇ ಅನುಕೂಲ ಆಗುತ್ತೆ. ನಮ್ಮ ಬೇಡಿಕೆ ತುಮಕೂರಿನಲ್ಲಿ ಆಗಬೇಕು ಎಂದು ಇಟ್ಟಿದ್ದೇವೆ ಅಷ್ಟೆ. ಅದಕ್ಕೆ ಚರ್ಚೆ ಮಾಡಿ, ಗೊಂದಲ ಸೃಷ್ಟಿ ಮಾಡುವ ಅಗತ್ಯ ಇಲ್ಲ ಎಂದು ತಿಳಿಸಿದರು.ಇದನ್ನೂ ಓದಿ: ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿಗೆ ಜೈಲು – ಬ್ಯಾಂಕ್ ವಂಚನೆ ಕೇಸ್‌ನಲ್ಲಿ ದೋಷಿ ಎಂದು ಕೋರ್ಟ್ ತೀರ್ಪು