`ಬೆಳಗಿಕೊಂಡಿರೆಂದು ಕಿಡಿ ತಾಕಿಸಿ ಹೊರಟಿತು ಹೆಣ್ಣು’ – ಪ್ರೀತಿಯ ಮಡದಿ ನೆನೆದು ಪತಿ ಬರೆದ ಕವನವಿದು..!

Public TV
1 Min Read
aparna 1

ಬೆಂಗಳೂರು: ಅಚ್ಚಕನ್ನಡದ ನಿರೂಪಕಿ ಅಪರ್ಣಾ (Kannada Anchor Aparna) ಅವರಿಂದು ಕೊನೆಯುಸಿರೆಳೆದಿದ್ದಾರೆ. ಇತ್ತ ಪ್ರೀತಿಯ ಮಡದಿ ಕಳೆದುಕೊಂಡು ಭಾವುಕರಾಗಿರುವ ಪತಿ ನಾಗರಾಜ್ ವಸ್ತಾರೆ (Nagaraj Ramaswamy Vastarey) ಭಾವುಕರಾಗಿದ್ದಾರೆ. ಮಡದಿಗಾಗಿ ಕವನವೊಂದನ್ನು ಬರೆದು ಪೃಥ್ವಿಯಿಂದ ಬೀಳ್ಕೊಟ್ಟಿದ್ದಾರೆ. ಪತ್ನಿಯೊಂದಿಗಿನ ಕೊನೇ ಕ್ಷಣಗಳನ್ನು ನೆನೆದು ಬರೆದ ಸಾಲುಗಳು ಹೀಗಿವೆ….

ಬೆಳಗಿಕೊಂಡಿರೆಂದು
ಕಿಡಿ ತಾಕಿಸಿ ಹೊರಟಿತು
ಹೆಣ್ಣು

ಚಿತ್ತು ತೆಗೆದು
ಬತ್ತಿಯ ನೆತ್ತಿ ಚೆನ್ನಾಗಿಸಿ
ತಿರುಪಿ ತಿದ್ದಿ
ಇರು

ತುಸುವಿರೆಂದು ಕರೆದರೂ
ನಿಲ್ಲದೆಯೇ
ಬೇರಾವುದೋ ಕರೆಗೆ
ತಣ್ಣಗೆ ಓಗೊಟ್ಟ ಮೇರೆ
ಯಲ್ಲಿ

ಒಂದೇ ಒಂದು
ನಿಮಿಷ
ಬಂದೇನೆಂದು ಕಡೆಗಳಿಗೆ
ಯ ಸೆರಗಿನ ಬೆನ್ನಿನಲ್ಲಿ
ಅಂದು.

ಕಾದಿದ್ದೇನೆ
ಈಗ ಬಂದಾಳೆಂದು
ಆಗ ಬಂದಾಳೆಂದು
ಮರಳಿ
ಜೀವ ತಂದಾಳೆಂದು
ಇದು

ಮೂರನೇ ದಿವಸ
ಇಷ್ಟಾಗಿ
ಬೆಳಗಲಿಟ್ಟ ಕಿರಿಸೊಡರ
ಬೆಳಕು ನಾನು
ಉರಿವುದಷ್ಟೇ ಕೆಲಸ
ಇರುವ ತನಕ.

Share This Article