ನಾಗರಪಂಚಮಿ ಹಬ್ಬದ ದಿನ ಅರಿಶಿನ ಎಲೆಯ ವಿಶೇಷ ಸಿಹಿ ಕಡುಬನ್ನು ತಯಾರಿಸಲಾಗುತ್ತದೆ. ದಕ್ಷಿಣಕನ್ನಡ, ಉಡುಪಿ, ಶಿವಮೊಗ್ಗ, ಉತ್ತರ ಕನ್ನಡದ ಭಾಗಗಳಲ್ಲಿ ನಾಗರಪಂಚಮಿ ಹಬ್ಬಕ್ಕೆ ಸಾಂಪ್ರದಾಯಿಕ ಅರಿಶಿನ ಎಲೆಯ ಸಿಹಿ ಕಡುಬು ಮಾಡಲಾಗುತ್ತದೆ. ದೇವರಿಗೆ ಸಹ ಇದನ್ನು ಎಡೆಯಾಗಿ ಅರ್ಪಿಸಲಾಗುತ್ತದೆ. ರುಚಿಕರವಾದ, ಸಿಹಿಯಾದ ಈ ವಿಶೇಷ ಖಾದ್ಯವನ್ನು ತಯಾರಿಸೋ ರೆಸಿಪಿ ಇಲ್ಲಿದೆ.
ಬೇಕಾಗುವ ಪದಾರ್ಥಗಳು
ಅಕ್ಕಿ-1 ಕಪ್
ತೆಂಗಿನಕಾಯಿ ತುರಿ- 2 ಕಪ್
ತುರಿದ ಬೆಲ್ಲ- 1 ಕಪ್
ಏಲಕ್ಕಿ ಕಾಳು – 4
ಹಸಿ ಅಕ್ಕಿ – 2 ಕಪ್
ಒಂದು ಚಿಟಿಕೆ ಉಪ್ಪು
ಬಾಳೆ ಎಲೆಗಳು
ಮಾಡುವ ವಿಧಾನ
ಅರಿಶಿನ ಎಲೆ ಸಿಹಿ ಕಡುಬನ್ನು ಮಾಡುವ ಮೊದಲು ಅಕ್ಕಿಯನ್ನು (Rice) ಎರಡು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಬೇಕು. ಆ ನಂತರ ನೀರೆಲ್ಲಾ ಬಸಿದು ತೆಗೆದು ಬೆಲ್ಲ, ಉಪ್ಪು, ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ಈ ಹಿಟ್ಟನ್ನು ಒಂದು ಪಾತ್ರೆಗೆ ಹಾಕಿಟ್ಟುಕೊಳ್ಳಬೇಕು. ಇನ್ನೊಂದು ಪಾತ್ರೆಯಲ್ಲಿ ಬೆಲ್ಲವನ್ನು ತುರಿದು, ಇದಕ್ಕೆ ತುರಿದ ತೆಂಗಿನಕಾಯಿ (coconut), ಏಲಕ್ಕಿ ಕಾಳು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಬೇಕು. ಈಗ ಮೊದಲೇ ತಂದಿಟ್ಟ ಅರಿಶಿನ ಎಲೆಯನ್ನು ನೀಟಾಗಿ ಒರೆಸಿಕೊಂಡು ಇದರ ಮೇಲೆ ತೆಳುವಾಗಿ ಹಿಟ್ಟನ್ನು ಹರಡಿ. ಇದರ ಮಧ್ಯದಲ್ಲಿ ಬೆಲ್ಲ ಹಾಗೂ ತೆಂಗಿನತುರಿಯ ಮಿಶ್ರಣವನ್ನಿಟ್ಟು ಎಲೆಯನ್ನು ನೀಟಾಗಿ ಮಡಚಿಕೊಳ್ಳಬೇಕು. ಇದನ್ನು ಬಾಳೆ ಎಲೆಯಲ್ಲಿ ಇಟ್ಟು ಮಡಚಬೇಕು. ಬಳಿಕ ಇಡ್ಲಿ ಮಾಡುವ ಪಾತ್ರೆಯಲ್ಲಿ ಉಗಿಯಲ್ಲಿ ಈ ಕಡುಬನ್ನು ಬೇಯಿಸಬೇಕು. ಈ ಕಡುಬುಗಳನ್ನು ಸ್ಪಲ್ಪ ದೂರ ದೂರ ಇಡುವುದರಿಂದ ಬೆಲ್ಲ ಕರಗಿದಾಗ ಇದು ಪರಸ್ಪರ ಅಂಟಿಕೊಳ್ಳುವುದಿಲ್ಲ. 10-12 ನಿಮಿಷಗಳ ಕಾಲ ಸ್ಟೀಮ್ ಮಾಡಿದರೆ ಅರಿಶಿನ ಎಲೆಯ ಸಿಹಿ ಕಡುಬು ಸವಿಯಲು ಸಿದ್ಧವಾಗುತ್ತದೆ.