ಶಬರಿಯಂತೆ 11 ವರ್ಷದಿಂದ ಸಿಎಂಗಾಗಿ ಕಾಯುತ್ತಿದ್ದಾರೆ ಮೈಸೂರಿನ ಮಹಿಳೆ

Public TV
1 Min Read
MYS CM

ಮೈಸೂರು: ಕುಮಾರಣ್ಣ ಬರುತ್ತಾರೆ, ನಮಗೆ ಮನೆ ಕೊಡುತ್ತಾರೆ ಅಂತಾ ಮೈಸೂರಿನಲ್ಲಿ ಮಹಿಳೆಯೊಬ್ಬರು 11 ವರ್ಷದಿಂದ ಕಾಯುತ್ತಿದ್ದಾರೆ.

ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ 2007 ರಲ್ಲಿ ಸಿಎಂ ಆಗಿದ್ದ ವೇಳೆ ಮೈಸೂರಿನ ಮೇದರ್ ಬ್ಲಾಕ್ ನಲ್ಲಿರುವ ಲಕ್ಷ್ಮಮ್ಮ ಅವರ ಗುಡಿಸಲಿನಲ್ಲಿ ವಾಸ್ತವ್ಯ ಹೂಡಿದ್ದರು. ಈ ವೇಳೆ ಸೊಪ್ಪಿನ ಸಾರು, ಮುದ್ದೆ ಸವಿದ್ದಿದ್ದ ಸಿಎಂ ಕುಮಾರಸ್ವಾಮಿ, ಗುಡಿಸಲನ್ನು ಮನೆಯಾಗಿ ಪರಿವರ್ತಿಸುತ್ತೇನೆ ಎಂದು ಹೇಳಿದ್ದರು.

ಒಂದು ದಿನದ ವಾಸ್ತವ್ಯದ ನಂತರ ಬೆಂಗಳೂರಿಗೆ ತೆರಳಿದ್ದ ಕುಮಾರಸ್ವಾಮಿ, ತಿಂಗಳ ನಂತರ ಸಿಎಂ ಸ್ಥಾನದಿಂದ ಕೆಳಗೆ ಇಳಿದಿದ್ದರು. ಅಂದಿನಿಂದ ಇಂದಿನವರೆಗೆ ಕುಮಾರಸ್ವಾಮಿ ಅವರಿಗಾಗಿ ಕಾಯುತ್ತ ಕುಳಿತ ಲಕ್ಷ್ಮಮ್ಮ, ಇವತ್ತಲ್ಲ ನಾಳೆ ಕುಮಾರಸ್ವಾಮಿ ತಮಗೆ ಮನೆ ಕಟ್ಟಿಸಿ ಕೊಡುತ್ತಾರೆ ಅಂತ ನಿರೀಕ್ಷೆಯಲ್ಲಿದ್ದಾರೆ.

MYS

ಲಕ್ಷ್ಮಮ್ಮ ಅವರಿಗೆ ಮಾತ್ರವಲ್ಲ ಅಲ್ಲಿನ 140 ಗುಡಿಸಲು ವಾಸಿಗಳಿಗೂ ಮನೆ ಕಟ್ಟಿಸಿ ಕೊಡಿಸುತ್ತೀನಿ ಎಂದು ಕುಮಾರಸ್ವಾಮಿ ಭರವಸೆ ನೀಡಿದ್ದರು. ಈಗ ಕುಮಾರಸ್ವಾಮಿ ಮತ್ತೆ ಸಿಎಂ ಆಗಿದ್ದಾರೆ. ಅವತ್ತು ಅವರ ಜೊತೆ ಬಂದಿದ್ದ ಜಿಟಿ ದೇವೇಗೌಡ ಕೂಡ ಸಚಿವರಾಗಿದ್ದಾರೆ. ಹೀಗಾಗಿ ಇವರ ಕಣ್ಣಲ್ಲಿ ಮತ್ತೆ ಮನೆಯ ಆಸೆ ಚಿಗುರಿದೆ. ಸಿಎಂ ಮೈಸೂರಿಗೆ ಬಂದರು ಸರಿಯೇ. ಇಲ್ಲವಾದರೆ ನಾವೇ ಬೆಂಗಳೂರಿಗೆ ತೆರಳಿ ಮನವಿ ಮಾಡುತ್ತೀವಿ ಸಿಎಂ ನಮಗೆ ಮೋಸ ಮಾಡಲ್ಲ ಎಂದು ಲಕ್ಷ್ಮಮ್ಮ ಹೇಳಿದ್ದಾರೆ.

ಇವತ್ತಿಗೂ ಕುಮಾರಸ್ವಾಮಿ ಮಲಗಿದ್ದ ಮಂಚ, ಬೆಡ್ ಶೀಟ್ ಅನ್ನು ಹಾಗೇ ಜೋಪಾನ ಮಾಡಿರುವ ಲಕ್ಷ್ಮಮ್ಮ, ಕುಮಾರಸ್ವಾಮಿ ಅವರಿಗಾಗಿ ತಂದಿದ್ದ ಬೆಡ್‍ಶೀಟ್ ಇಟ್ಟುಕೊಂಡು ಇವತ್ತಿಗೂ ಖುಷಿ ಪಡುತ್ತಿದ್ದಾರೆ. ಅಷ್ಟೇ ಅಲ್ಲದೇ ಅಂದು ಪತ್ರಿಕೆಯಲ್ಲಿ ಬಂದಿದ್ದ ವರದಿಗಳನ್ನು ಕೂಡ ಇಟ್ಟು ಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *