– ಸಿದ್ದರಾಮಯ್ಯಗೂ ಬಿಎಸ್‍ವೈಗೂ ವ್ಯತ್ಯಾಸವಿದೆ
ಮೈಸೂರು: ಕರ್ನಾಟಕದಲ್ಲಿ ಮೋದಿ ಆಟ ನಡೆಯುವುದಿಲ್ಲ. ಇಲ್ಲೇನಿದ್ದರೂ ಯಡಿಯೂರಪ್ಪ ಇದ್ದರೆ ಮಾತ್ರ ಬಿಜೆಪಿ ಎಂದು ಮಾಜಿ ಸಚಿವ ವರ್ತೂರ್ ಪ್ರಕಾಶ್ ಹೇಳಿದ್ದಾರೆ.
ಸಚಿವ ಸ್ಥಾನ ಕೈ ತಪ್ಪಿದ ಹಿನ್ನಲೆಯಲ್ಲಿ ಇಂದು ವಿಶ್ವನಾಥ್ ಅವರ ಮೈಸೂರು ನಿವಾಸಕ್ಕೆ ಭೇಟಿ ನೀಡಿದ್ದ ವರ್ತೂರ್ ಪ್ರಕಾಶ್ ಸಚಿವ ಸಂಪುಟ ವಿಸ್ತರಣೆ ಹಾಗೂ ಸಚಿವ ಸ್ಥಾನ ಕೈ ತಪ್ಪಿರುವ ಬಗ್ಗೆ ಚರ್ಚೆ ನಡೆಸಿದರು. ವಿಶ್ವನಾಥ್‍ಗೆ ಸಮಾಧಾನ ಮಾಡಿದ ವರ್ತೂರ್ ಪ್ರಕಾಶ್ ಗೌಪ್ಯ ಮಾತುಕತೆ ನಡೆಸಿದರು.
ಇದೇ ವೇಳೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಮೋದಿ ಆಟ ನಡೆಯುವುದಿಲ್ಲ. ಇಲ್ಲೇನಿದ್ದರೂ ಯಡಿಯೂರಪ್ಪ ಇದ್ದರೆ ಮಾತ್ರ ಬಿಜೆಪಿ ಎಂದು ಗುಡುಗಿದರು. ವಿಶ್ವನಾಥ್ ಎಂಟಿಬಿ ಅವರನ್ನು ಬಿಟ್ಟರೆ ಬಿಜೆಪಿ ಪ್ಲಾಪ್ ಆಗಲಿದೆ. ಜೂನ್ ಒಳಗೆ ಯಡಿಯೂರಪ್ಪ ವಿಶ್ವನಾಥ್, ಎಂಟಿಬಿಯನ್ನು ಸಚಿವರನ್ನಾಗಿ ಮಾಡಬೇಕು ಇಲ್ಲವಾದಲ್ಲಿ ಕುಮಾರಸ್ವಾಮಿ ಗತಿಯೇ ಯಡಿಯೂರಪ್ಪನವರಿಗೆ ಬರುತ್ತದೆ ಎಂದು ಹೇಳಿದರು.
ವಚನ ಭ್ರಷ್ಟತೆ ಆರೋಪ ಮತ್ತೆ ಯಡಿಯೂರಪ್ಪ ಅವರು ಮೇಲೆ ಬರುತ್ತದೆ. 105 ಸೀಟು ಗೆದ್ದರೂ ಯಡಿಯೂರಪ್ಪ ಒಂದೇ ದಿನಕ್ಕೆ ಸಿಎಂ ಸ್ಥಾನದಿಂದ ಹೊರಬಂದರು. ಆದರೆ ನಾಲ್ಕು ಜನ ಕುರುಬರು ಯಡಿಯೂರಪ್ಪನವರ ಜೊತೆ ಹೋಗಿದ್ದಕ್ಕೆ ಈಗ ಮತ್ತೆ ಸಿಎಂ ಆಗಿದ್ದಾರೆ. ಅವರ ಋಣ ತೀರಿಸುವ ಕೆಲಸವನ್ನು ಬಿಎಸ್‍ವೈ ಮಾಡಬೇಕು ಎಂದು ತಿಳಿಸಿದರು.
ಸಿದ್ದರಾಮಯ್ಯಗೂ ಯಡಿಯೂರಪ್ಪನವರಿಗೂ ವ್ಯತ್ಯಾಸ ಇದೆ. ಸಿದ್ದರಾಮಯ್ಯ ತಾವು ನಾಯಕರಾದರೂ ಕುರುಬ ಸಮಾಜದವರನ್ನು ಮಂತ್ರಿ ಮಾಡಲಿಲ್ಲ. ಆದರೆ ಯಡಿಯೂರಪ್ಪ ನಮ್ಮ ಸಮಾಜದವರಲ್ಲ ಆದರೆ ಕುರುಬರನ್ನು ಮಂತ್ರಿ ಮಾಡಿದರು. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಬೇಕು ಅಂದರೆ ವಿಶ್ವನಾಥ್ ಎಂಟಿಬಿ ಮಂತ್ರಿಯಾಗಬೇಕು ಇಲ್ಲವಾದಲ್ಲಿ ರಾಜ್ಯದಲ್ಲಿ ಬಿಜೆಪಿ ಧೂಳೀಪಟ ಆಗಲಿದೆ ಎಂದು ಎಚ್ಚರಿಕೆ ನೀಡಿದರು.