– ಪ್ರತಾಪ್ ಸಿಂಹ ಸವಾಲು ಸ್ವೀಕರಿಸ್ತಾರಾ ಹೆಚ್.ವಿಶ್ವನಾಥ್?
ಮೈಸೂರು: ದಶಪಥ ರಸ್ತೆ ಕಾಮಗಾರಿ ವೀಡಿಯೋ ಮಾಡಿದ್ದು ಇಷ್ಟು ಜನರ ಹೊಟ್ಟೆಗೆ ಬೆಂಕಿ ಬೀಳಿಸುತ್ತೆ ಅಂತ ಗೊತ್ತಿರಲಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಎಂಎಲ್‍ಸಿ ಹೆಚ್.ವಿಶ್ವನಾಥ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ವಿಶ್ವನಾಥ್ ಅವರ ಹೇಳಿಕೆಗೆ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಸಂಸದರು, ಮೋದಿ ಸರ್ಕಾರ ಈ ಯೋಜನೆಗೆ ಹಣ ಬಿಡುಗಡೆ ಮಾಡಿ ಕಾಮಗಾರಿ ಚಾಲನೆ ನೀಡಲಾಗಿದೆ. 8,666 ಕೋಟಿ ರೂ. ಪ್ರಾಜೆಕ್ಟ್ ನಲ್ಲಿ 8 ಪೈಸೆನಾದರೂ ವಿಶ್ವನಾಥ್ ಅವರು ಬಿಡುಗಡೆ ಮಾಡಿಸಿದ್ರಾ? ಅಥವಾ ಸಿದ್ದರಾಮಯ್ಯ ಅವರು ಬಿಡುಗಡೆ ಮಾಡಿದ್ರಾ? ಒಂದು ವೇಳೆ ಈ ಯೋಜನೆ ನೀವೇ ತಂದಿದ್ರೆ ಚುನಾವಣೆ ವೇಳೆ ಯಾಕೆ ಹೇಳಿಕೊಳ್ಳಲಿಲ್ಲ ಎಂದು ಪ್ರಶ್ನೆ ಮಾಡಿದರು.
ವಿಶ್ವನಾಥ್ ಅವರು ಟೀಕೆ ಮಾಡದ ವ್ಯಕ್ತಿಯೇ ಇಲ್ಲ. ಟ್ರಂಪ್, ಬೈಡೆನ್ ಅವರನ್ನೇ ಅವರು ಬಿಟ್ಟಿಲ್ಲ. ದೇವೇಗೌಡರು, ಯಡಿಯೂರಪ್ಪ, ವಿಜಯೇಂದ್ರ, ಎಸ್.ಟಿ.ಸೋಮಶೇಖರ್ ಎಲ್ಲರನ್ನೂ ವಿಶ್ವನಾಥ್ ಬೈಯ್ದಿದ್ದು ಆಯ್ತು. ಸಿಎಂ ಬಸವರಾಜ ಬೊಮ್ಮಾಯಿ ಅವರನ್ನ ಟೀಕೆ ಮಾಡುವ ಗ್ಯಾಪ್ ನಲ್ಲಿ ನನ್ನ ಬಗ್ಗೆ ಮಾತನಾಡಿದ್ದಾರೆ. ಈ ಯೋಜನೆಗೆ ಡೇ ಟು ಡೇ ಬಗ್ಗೆ ಮಾಧ್ಯಮಗಳ ಮುಂದೆ ಚರ್ಚೆ ಮಾಡೋಣ ಬನ್ನಿ ಎಂದು ಪ್ರತಾಪ್ ಸಿಂಹ ಸವಾಲು ಹಾಕಿದರು.
ಹಳೆ ಉಂಡುವಾಡಿ ಕುಡಿಯುವ ನೀರು ಯೋಜನೆಗೂ ವಿಶ್ವನಾಥ್ ಐದು ಪೈಸೆ ಕೊಡಿಸಿಲ್ಲ. ನೀವು ಸತ್ಯಸಂಧರ ರೀತಿ ಮಾತಾಡಬೇಡಿ ವಿಶ್ವನಾಥ್ ಅವರೇ. ಮಾಜಿ ಸಚಿವ ಮಹದೇವಪ್ಪ ಅವರೇ ನೀವು ನಿಮ್ಮ ಅವಧಿಯಲ್ಲಿ ಮಾಡಿದ ಒಂದು ರಸ್ತೆ ನೆಟ್ಟಗಿದ್ದಿಯಾ ಸರ್? ನಿಮಗೆ ದಶಪಥ ರಸ್ತೆಯ ಕ್ರೆಡಿಟ್ ಬೇಕಾ? ನೀವು ಹಿರಿಯರು. ನೀವು ಮಾರ್ಗದರ್ಶನ ಮಾಡಿ ಸರ್. ಬೀದಿ ಜಗಳಕ್ಕೆ ಇಳಿಯಬೇಡಿ ಎಂದು ಟಾಂಗ್ ಕೊಟ್ಟರು.
ಹೆಚ್.ವಿಶ್ವನಾಥ್ ಹೇಳಿದ್ದೇನು?:
ಈ ಹಿಂದೆ ಆಸ್ಕರ್ ಫರ್ನಾಂಡೀಸ್ ಕೇಂದ್ರ ಸಚಿವರಾಗಿದ್ದಾಗ ಸುಮಾರು ಸಭೆಗಳನ್ನು ನಡೆಸಿ 1,882 ಕಿಲೋ ಮೀಟರ್ ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಗಳನ್ನಾಗಿ ಪರಿವರ್ತಿಸುವ ಬಗ್ಗೆ ತೀರ್ಮಾನವಾಯ್ತು. ಧೃವ ನಾರಾಯಣ್, ರಮ್ಯಾ, ಡಿ.ಕೆ.ಸುರೇಶ್ ಸೇರಿದಂತೆ ನಾವೆಲ್ಲರೂ ಸುಮಾರು ಸಭೆಗಳಲ್ಲಿ ಭಾಗಿಯಾಗಿದ್ದೇವೆ. ಆನಂತರ ಕೇಂದ್ರದಲ್ಲಿ ಯುಪಿಎ ಸರ್ಕಾರ ಹೋಗಿ ಎನ್‍ಡಿಎ ಅಧಿಕಾರಕ್ಕೆ ಬಂತು. ಆದ್ರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದ್ದಾಗ ಅಂದಿನ ಸಿಎಂ ಸಿದ್ದರಾಮಯ್ಯ, ಸಚಿವರಾಗಿದ್ದ ಮಹದೇವ ಪ್ರಸಾದ್ ಹೆದ್ದಾರಿ ನಿರ್ಮಾಣದ ಕೆಲಸ ಆರಂಭಿಸಿದ್ದರು. ಇದನ್ನೂ ಓದಿ: ದಶಪಥದ ರಸ್ತೆ ಇರೋದು ಮೈಸೂರಿಗಾಗಿ, ಇದಕ್ಕಾಗಿ ಹೆಚ್ಚು ಆಸಕ್ತಿವಹಿಸಿದ್ದೇನೆ: ಪ್ರತಾಪ್ ಸಿಂಹ
ಹೊಸದಾಗಿ ಬಂದವರು ನಾನು ಈ ಯೋಜನೆ ತಂದೆ ಅಂತ ಹೇಳೋದು ಸರಿಯಲ್ಲ. ನೀವು ಸಂಸದರಾಗಿ ಏನು ಮಾಡಿದ್ದೀರಿ ಅದನ್ನ ಜನರ ಮುಂದೆ ಹೇಳಿ. ಅದನ್ನು ಬಿಟ್ಟು, ನಾನೇ ಎಲ್ಲ ಮಾಡಿದೆ ಅಂತ ಹೇಳುವುದು ತಪ್ಪು ಎಂದು ಹೇಳಿದ್ದರು. ಇದನ್ನೂ ಓದಿ: ಇದನ್ನೂ ಓದಿ: ನನ್ನ ಆತ್ಮಸ್ಥೈರ್ಯ ಕುಗ್ಗಿಸಲು 10 ಜನ್ಮ ಎತ್ತಿ ಬಂದ್ರೂ ಆಗಲ್ಲ: ಪ್ರತಾಪ್ ಸಿಂಹ ವಿರುದ್ಧ ಸುಮಲತಾ ವಾಗ್ದಾಳಿ