– ಬಂಗಾರವೆಲ್ಲಾ ಬಿಚ್ಚಿಟ್ಟ ಸಾರಾ
ಕೆ.ಪಿ. ನಾಗರಾಜ್
ಮೈಸೂರು: ಮನೆಯಲ್ಲಿ ಸಾಕಿದ ಮುದ್ದು ಪ್ರಾಣಿಗಳು ಸತ್ತಾಗ ಮನೆಯವರಿಗೆ ನೋವು ಸಹಜ. ಆದರೆ ಆ ನೋವು ಬದುಕನ್ನು ವೈರಾಗ್ಯಕ್ಕೆ ನೂಕಿದ್ದು ಕಡಿಮೆ. ಆದರಲ್ಲೂ ರಾಜಕಾರಣಿಗಳಿಗೆ ವೈರಾಗ್ಯ ಕಾಡೋದು ಬಹಳ ಕಡಿಮೆ. ಆದರೆ ಈಗ ನಾವು ಈ ಸುದ್ದಿ ಓದಿದರೆ ಈ ವ್ಯಕ್ತಿಯೊಳಗೆ ಇಂಥಹದೊಂದು ಮಗುವಿನಂಥ ಮನಸ್ಸು ಇದೆಯಾ ಎಂದು ಅಚ್ಚರಿ ಪಡುತ್ತೀರಾ.
ಸಾರಾ ಮಹೇಶ್, ಮೈತ್ರಿ ಸರ್ಕಾರ ಇದ್ದಾಗ ಮತ್ತು ಉರುಳಿದ್ದಾಗ ಹೆಚ್ಚು ಚರ್ಚೆಯಲ್ಲಿದ್ದ ಹೆಸರು. ಎಚ್‍ಡಿ ಕುಮಾರಸ್ವಾಮಿ ಪಾಲಿನ ಕುಚುಕು ಗೆಳೆಯ. ಈ ಗೆಳೆತನ ಇವರ ಪಾಲಿಗೆ ವರವೂ ಆಯಿತು ಮತ್ತು ಈ ಗೆಳೆತನ ಇವರ ಪಾಲಿಗೆ ಹಲವು ಶತ್ರುಗಳ ಸೃಷ್ಟಿ ಮಾಡಿಕೊಟ್ಟಿತ್ತು. ಇಂತಹ ಸಾರಾ ಮಹೇಶ್‍ಗೆ ಈಗ ಒಂದು ಥರದ ವೈರಾಗ್ಯ ಶುರುವಾಗಿದೆ.
ಇದಕ್ಕೆ ಕಾರಣ ಅವರು ಪ್ರೀತಿಯಿಂದ ಸಾಕಿದ ಮುದ್ದು ಕೋತಿಯ ಸಾವು. ಸಾರಾ ಮಹೇಶ್ ಮೈಸೂರಿನ ದಟ್ಟಗಳ್ಳಿಯ ತೋಟದಲ್ಲಿ ಹೆಣ್ಣು ಕೋತಿ ಸಾಕಿದ್ದರು. ಅದಕ್ಕೆ ಚಿಂಟು ಎಂದು ಹೆಸರಿಟ್ಟಿದ್ದರು. ಈ ಚಿಂಟು ಇತ್ತೀಚೆಗೆ ತೋಟದಲ್ಲಿ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿತ್ತು. ಚಿಂಟು ಸಾವು ಕಂಡು ಸಾರಾ ಮಹೇಶ್ ಹಾಗೂ ಅವರ ಇಡೀ ಕುಟುಂಬ ಕಣ್ಣೀರಿಟ್ಟಿತ್ತು. ಧಾರ್ಮಿಕ ವಿಧಿ ವಿಧಾನದಂತೆ ಚಿಂಟುವಿನ ಅಂತ್ಯಕ್ರಿಯೆ ಅವರ ತೋಟದಲ್ಲಿ ನಡೆದಿದೆ. ಜೊತೆಗ ಚಿಂಟುನಾ ಈ ಸಾವು ಸಾರಾ ಮಹೇಶ್ ಅವರ ಒಳಗೆ ಒಂದು ವೈರಾಗ್ಯವನ್ನೆ ಸೃಷ್ಟಿಸಿದೆ.
ಅವರು ತಾವು ಸದಾ ಹಾಕಿಕೊಳ್ಳುತ್ತಿದ್ದ ಬಂಗಾರದ ಸರ, ಉಂಗುರ ತೆಗೆದಿಟ್ಟಿದ್ದಾರೆ. ವಾಚ್ ಕಟ್ಟುವುದನ್ನು ಬಿಟ್ಟಿದ್ದಾರೆ. ಮನಸ್ಸಿನಲ್ಲೆ ವೈರಾಗ್ಯದ ಗುಡಿ ಕಟ್ಟಿಕೊಂಡು ಕೂತಿದ್ದಾರೆ. ತೋಟದಲ್ಲಿ ಚಿಂಟುವಿನ ಗುಡಿ ಕಟ್ಟುತ್ತಿದ್ದಾರೆ. ಹನುಮಂತ ದೇವರ ಪ್ರತಿಷ್ಠಾಪನೆ ಮಾಡುತ್ತಿದ್ದಾರೆ. ಚಿಂಟುವಿನ ಕಲ್ಲಿನ ಮೂರ್ತಿ ಕೆತ್ತಿಸಿ ಅಲ್ಲಿ ಇಡುತ್ತಿದ್ದಾರೆ. ಮುಂದಿನ ತಿಂಗಳ ಎರಡನೇ ವಾರ ಈ ದೇವಸ್ಥಾನ ಉದ್ಘಾಟನೆಯಾಗಲಿದೆ. ಒಂದರ್ಥದಲ್ಲಿ ಮಗನನ್ನೆ ಕಳೆದುಕೊಂಡಷ್ಟು ದುಃಖದಲ್ಲಿ ಸಾರಾ ಮಹೇಶ್ ಇದ್ದಾರೆ. ಸದಾ ರಾಜಕಾರಣ, ಬ್ಯುಸಿನೆಸ್ ಎಂದು ಮಾತನಾಡುತ್ತಿದ್ದಾ ಸಾರಾ ಮಹೇಶ್ ಈಗ ವೈರಾಗ್ಯದ ಮಾತನಾಡುತ್ತಿದ್ದಾರೆ. ಪ್ರಾಣಿಗಳ ತೋರುವ ನಿಷ್ಕಲ್ಮಶ ಪ್ರೀತಿ ಬಗ್ಗೆ ಮಾತನಾಡುತ್ತಿದ್ದಾರೆ.