ಮೈಸೂರು: ಕನಕಪುರ ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ಸ್ಥಾಪನೆ ವಿಚಾರದಲ್ಲಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಮತ್ತು ಸಂಸದ ಪ್ರತಾಪ್ ಸಿಂಹ ನಡುವಿನ ಜಟಾಪಟಿ ಮುಂದುವರಿದಿದೆ. ಈ ಕುರಿತು ವ್ಯಂಗ್ಯವಾಡಿರುವ ಸಂಸದರು, ಡಿ.ಕೆ.ಶಿವಕುಮಾರ್ ಅವರೇ ನೀವೂ ಏಸುಕುಮಾರ್ ಆಗಬೇಡಿ ಎಂದಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಕಪಾಲ ಬೆಟ್ಟ ಶಿವನ ಬೆಟ್ಟ. ಆ ಬೆಟ್ಟವನ್ನು ಏಸು ಬೆಟ್ಟ ಮಾಡಿ ನೀವು ಏಸುಕುಮಾರ ಅನಿಸಿಕೊಳ್ಳಬೇಡಿ. ಶಿವ ಮತ್ತು ಭಕ್ತರ ನಡುವಿನ ಸಂಬಂಧ ಇದು. ಆ ಸಂಬಂಧವನ್ನು ನೀವು ಮುರಿಯಬೇಡಿ ಎಂದರು.
Advertisement
Advertisement
ಕೆಲ ದಿನಗಳ ಹಿಂದೆಯಷ್ಟೇ ಪ್ರತಾಪ್ ಸಿಂಹ ಅವರು ತಮ್ಮ ಫೇಸ್‍ಬುಕ್ ಖಾತೆಯಲ್ಲೂ ಡಿಕೆಶಿ ಅವರಿಗೆ ಈ ವಿಚಾರದಲ್ಲಿ 4 ಪ್ರಶ್ನೆ ಕೇಳಿದ್ದರು.
Advertisement
ಪ್ರತಾಪ್ ಸಿಂಹ ಪ್ರಶ್ನೆಗಳು:
1. ಏನು ಡಿ.ಕೆ. ಶಿವಕುಮಾರರೇ, ಸ್ವಂತ ಹಣದಲ್ಲಿ 114 ಅಡಿ ಎತ್ತರದ ಏಸು ಪ್ರತಿಮೆ ನಿರ್ಮಾಣದ ಹಿಂದಿರುವ ಉದ್ದೇಶವೇನು?
2. ಆಂಧ್ರದಲ್ಲಿ ಮತಾಂತರವನ್ನೇ ಅಧಿಕಾರದ ಮೆಟ್ಟಿಲಾಗಿಸಿಕೊಂಡ ಜಗನ್ ಮೋಹನ್ ರೆಡ್ಡಿಯವರಂತೆ, ಕನಕಪುರದ ಒಕ್ಕಲಿಗರನ್ನು ಕನ್ವರ್ಟ್ ಮಾಡುವ ಸ್ಕೀಮಾ ಇದು?
3. ಸಿದ್ದಗಂಗಾ, ಸುತ್ತೂರು, ಸಿರಿಗೆರೆಗಳಂತೆ ಆದಿಚುಂಚನಗಿರಿ ಸಂಸ್ಥೆಯನ್ನೂ ಉತ್ತುಂಗಕ್ಕೆ ತೆಗೆದುಕೊಂಡು ಹೋದ ಬಾಲಗಂಗಾಧರ ಶ್ರೀಗಳು ಮರೆತುಹೋದರಾ ನಿಮಗೆ?
4. ಸರ್ವ ಜಾತಿಜನಾಂಗದ ದೈವ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿಯವರ ಪ್ರತಿಮೆ ನಿರ್ಮಿಸಿದ್ದರೆ ಕಪಾಲಿ ಬೆಟ್ಟಕ್ಕೆ ಕಳಶಪ್ರಾಯವಾಗುತ್ತಿರಲಿಲ್ಲವೇ? ಎಂದು ಪ್ರಶ್ನಿಸಿದ್ದರು.
Advertisement
ಡಿಕೆಶಿ ಸಮರ್ಥನೆ: ಏಸು ಪ್ರತಿಮೆ ನಿರ್ಮಾಣಕ್ಕೆ ಜಮೀನು ಮಂಜೂರು ಮಾಡಿರುವುದನ್ನು ಸಮರ್ಥನೆ ಮಾಡಿಕೊಂಡಿದ್ದ ಡಿಕೆಶಿ ಅವರು, ಎಲ್ಲಾ ಸಮುದಾಯಗಳಿಗೂ ನಾನು ನೆರವಾಗಿದ್ದು, ಅಂಬೇಡ್ಕರ್ ಅವರು ರಚಿಸಿದ್ದ ಸಂವಿಧಾನವನ್ನು ಬದಲಾಯಿಸಲು ಹೊರಟಿರುವ ಅವರಿಂದ ನೀತಿಪಾಠ ನನಗೆ ಬೇಕಿಲ್ಲ. ಬಿಜೆಪಿ ನಾಯಕರು ಯಾವಾಗಲೂ ಬೇರೊಬ್ಬರ ವಿಚಾರದಲ್ಲಿ ತಪ್ಪು ಕಂಡು ಹಿಡಿರುವ ಕೆಲಸವನ್ನಷ್ಟೇ ಮಾಡುತ್ತಾರೆ. ಈಗಲೂ ಅವರು ತಮ್ಮ ಕೆಲಸವನ್ನು ಮಾಡುತ್ತಿದ್ದಾರೆ. ಆದರೆ ಕಪಾಲ ಬೆಟ್ಟ ತನ್ನದೇ ಆದ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದ್ದು, ಅಲ್ಲಿನ ಜನರು ನನ್ನ ಪರವಾಗಿ ನಿಂತು ಬೆಳೆಸಿದ್ದಾರೆ. ಇಡೀ ಗ್ರಾಮದ ಜನರು ನನ್ನ ಪರ ಪ್ರಾರ್ಥನೆ ಮಾಡಿದ್ದಾರೆ. ಕಳೆದ 2 ವರ್ಷಗಳ ಹಿಂದೆ ಗ್ರಾಮಸ್ಥರು ಮೂರ್ತಿ ನಿರ್ಮಾಣ ಮಾಡುವ ಪ್ರಸ್ತಾಪ ಮಾಡಿದ್ದರು. ಆದರೆ ಈ ಜಾಗ ಸರ್ಕಾರಿ ಸ್ಥಳವಾಗಿದೆ. ಆದ್ದರಿಂದ ಬೇಡ ಎಂದು ಹೇಳಿ ಯಾವುದೇ ತೊಂದರೆ ಇಲ್ಲದೇ ಜಮೀನು ನೀಡುವ ಭರವಸೆ ನೀಡಿದ್ದೆ.
ಕುಮಾರಸ್ವಾಮಿ ಅವರ ಸರ್ಕಾರದಲ್ಲಿ ಈ ಸ್ಥಳವನ್ನು ಮಂಜೂರು ಮಾಡಿಸಿ ಸ್ವತಃ ಹಣವನ್ನೂ ನೀಡಿ ಅವರಿಗೆ ಹಕ್ಕು ಪತ್ರವನ್ನು ನೀಡಿದ್ದೇನೆ. ಬೆಟ್ಟ 16 ಎಕರೆ ಇದ್ದು, 10 ಎಕರೆ ಜಮೀನು ಮಾತ್ರ ಅವರಿಗೆ ಕಾನೂನಾತ್ಮಕವಾಗಿ ನೀಡಿದ್ದೇನೆ. ಈ ಒಂದು ಸ್ಥಳ ಮಾತ್ರವಲ್ಲ, ನನ್ನದೇ ಸ್ವತಃ ಜಮೀನನ್ನು ಕೂಡ ಕರ್ನಾಟಕ ಸರ್ಕಾರದ ಶಿಕ್ಷಣ ಸಂಸ್ಥೆ ನಿರ್ಮಾಣ ಮಾಡಲು ನೀಡಿದ್ದೇನೆ. ಅಲ್ಲದೇ ನೂರಾರು ದೇವಾಲಯಗಳನ್ನು ನಿರ್ಮಾಣ ಮಾಡಲು ನೆರವು ನೀಡಿದ್ದೇವೆ ಎಂದು ಹೇಳಿದ್ದರು.