ಬೆಂಗಳೂರು: ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಕ್ಷೇತ್ರಗಳಲ್ಲಿ ಯಾರು ಅಭ್ಯರ್ಥಿ ಅನ್ನೋ ಫೈಟ್ ಆರಂಭವಾಗಿದೆ. ಚಾಮರಾಜನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಆರ್.ಧೃವನಾರಯಣ್ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದ್ದು, ಇದೀಗ ಮಾಜಿ ಸಿಎಂ ಅವರನ್ನು ಎರಡು ಕ್ಷೇತ್ರದಲ್ಲಿ ಕಟ್ಟಿಹಾಕಲು ಬಿಜೆಪಿ ಮಾಸ್ಟರ್ ಪ್ಲಾನ್ ಮಾಡುತ್ತಿದೆ.
ಚಾಮರಾಜನಗರದಿಂದ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಸ್ಪರ್ಧೆ ಮಾಡುತ್ತಾರೆ ಅನ್ನೋ ಮಾಹಿತಿ ಇದೆ. ಈ ಮೂಲಕ ನಂಜನಗೂಡಿನ ಉಪಚುನಾವಣೆ ಸೋಲಿಗೆ ಲೋಕಸಭಾ ಚುನಾವಣೆಯಲ್ಲಿ ತೀರಿಸಿಕೊಳ್ಳುವ ಪ್ಲಾನ್ ಮಾಡಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.
ಚಾಮರಾಜನಗರದಿಂದ ಶ್ರೀನಿವಾಸ್ ಸ್ಪರ್ಧೆ ಮಾಡಿದ್ರೆ ಎರಡು ಕ್ಷೇತ್ರಗಳಲ್ಲಿ ಲಾಭವಾಗಬಹುದು. ಈ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ರೆ ಮಾತ್ರ ಕಾಂಗ್ರೆಸ್ ವಿರುದ್ಧ ಟಫ್ ಫೈಟ್ ಅನ್ನೋದು ಬಿಜೆಪಿ ನಾಯಕರ ಲೆಕ್ಕಚಾರವಾಗಿದೆ. ಇದರ ಜೊತೆಗೆ ಮೈಸೂರು ಲೋಕಸಭಾ ಕ್ಷೇತ್ರದಲ್ಲೂ ಹೆಚ್ಚಿನ ಲಾಭವಾಗುತ್ತೆ ಅನ್ನೋ ವಾದವಿದೆ. ಹಾಗಾಗಿಯೇ ಚಾಮರಾಜನಗರದಿಂದ ಸ್ಪರ್ಧಿಸುವಂತೆ ಶ್ರೀನಿವಾಸ್ ಪ್ರಸಾದ್ ಮೇಲೆ ಬಿಜೆಪಿ ಒತ್ತಡ ಹೇರುತ್ತಿದೆ ಎನ್ನಲಾಗಿದೆ.
ಈ ಬೆನ್ನಲ್ಲೇ ಮೈಸೂರಿನಿಂದ ಬೆಂಗಳೂರಿಗೆ ದೌಡಾಯಿಸಿರುವ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್, ಇಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರನ್ನ ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ಯಡಿಯೂರಪ್ಪ ಜತೆ ಮಾತುಕತೆ ನಡೆಸಿದ ಬಳಿಕ ಶ್ರೀನಿವಾಸ್ ಪ್ರಸಾದ್ ನಿರ್ಧಾರ ಪ್ರಕಟ ಮಾಡುವ ಸಾಧ್ಯತೆಗಳಿವೆ. ಆದ್ರೆ ನಿನ್ನೆಯಷ್ಟೇ ಶ್ರೀನಿವಾಸ ಪ್ರಸಾದ್ ಅವರು, ಇದೂವರೆಗೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಹೇಳಿದ್ದರು. ಇದನ್ನೂ ಓದಿ: ಚಾಮರಾಜನಗರದಲ್ಲಿ ಶಿಷ್ಯನ ವಿರುದ್ಧ ಬಿಜೆಪಿ ಗುರು ಅಸ್ತ್ರ
ಶ್ರೀನಿವಾಸ್ ಪ್ರಸಾದ್ ಅಖಾಡಕ್ಕೆ ಎಂಟ್ರಿ ಆಗುವ ಸುದ್ದಿ ಹಬ್ತಿದ್ದಾಗೆ ಚಾಮರಾಜನಗರ ಜಿಲ್ಲಾ ಕಾಂಗ್ರೆಸ್ ನಾಯಕರಲ್ಲಿ ನಡುಕ ಶುರುವಾಗಿದೆ. ಹೀಗಾಗಿ ಇವತ್ತು ಜಿಲ್ಲೆಯಲ್ಲಿ ಬೃಹತ್ ಶಕ್ತಿ ಪ್ರದರ್ಶನಕ್ಕೆ ವೇದಿಕೆ ಸಜ್ಜಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಪರಿವರ್ತನಾ ಯಾತ್ರೆ ನಡೆಯಲಿದೆ. ಲೋಕಸಭಾ ಚುನಾವಣೆ ಘೋಷಣೆಯಾದ ಬಳಿಕ ಚಾಮರಾಜನಗರದಲ್ಲಿ ಇದೇ ಮೊದಲ ಬಾರಿಗೆ ಕಾಂಗ್ರೆಸ್ ಸಮಾವೇಶ ನಡೆಸುತ್ತಿದೆ.
ಮಾಜಿ ಸಿಎಂ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಪರಮೇಶ್ವರ್, ಲೋಕಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಚಿವರಾದ ಡಿ.ಕೆ.ಶಿವಕುಮಾರ್, ಸತೀಶ್ ಜಾರಕಿಹೊಳಿ, ಪುಟ್ಟರಂಗಶೆಟ್ಟಿ ಸೇರಿದಂತೆ ಮೊದಲಾದ ನಾಯಕರು ಭಾಗಿಯಾಗಿ ಆರ್.ಧೃವನಾರಯಣ್ ಪರ ಬ್ಯಾಟಿಂಗ್ ಮಾಡಲಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv