ಮಂಡ್ಯ: ಹಳೆ ಮೈಸೂರು ಭಾಗದ ಜೀವನಾಡಿಯಾಗಿರುವ ಕೆಆರ್ಎಸ್ ಡ್ಯಾಂ ಭರ್ತಿಗೆ ಇನ್ನೊಂದು ಅಡಿಯಷ್ಟೇ ಬಾಕಿ ಇದೆ. ಈ ಸುದ್ದಿ ಈ ಭಾಗದ ರೈತರಿಗೆ ಸಂತಸ ತಂದಿದ್ರೆ ಮತ್ತೊಂದೆಡೆ ಕಾವೇರಿ ಕೊಳ್ಳದ ಜನರಿಗೆ ಪ್ರವಾಹದ ಭೀತಿ ಎದುರಾಗಿದೆ.
Advertisement
ಕಾವೇರಿ ಜಲಾನಯನ ಪ್ರದೇಶದಲ್ಲಿ ಅಪಾರ ಪ್ರಮಾಣದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ ಅಣೆಕಟ್ಟಿಗೆ 30,216 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಇದರಿಂದ ಡ್ಯಾಂ ಸಂಪೂರ್ಣ ಭರ್ತಿಗೆ ಇನ್ನೊಂದು ಅಡಿಯಷ್ಟೇ ಬಾಕಿ ಇದೆ. 124.80 ಅಡಿಗಳಷ್ಟು ಇರುವ ಕೆಆರ್ಎಸ್ ಡ್ಯಾಂ ಸದ್ಯ 123.20 ಅಡಿಗಳಷ್ಟು ಭರ್ತಿಯಾಗಿದೆ. ಡ್ಯಾಂ ಭರ್ತಿಗೆ ಇನ್ನೂ ಕ್ಷಣಗಣನೆ ಇರುವ ಕಾರಣ ಡ್ಯಾಂನಿಂದ ನದಿಗೆ 106 ಅಡಿ ಮಟ್ಟದ 15 ಗೇಟ್ಗಳ ಮೂಲಕ 25,000 ಕ್ಯೂಸೆಕ್ ನೀರನ್ನು ಹರಿಬಿಡಲಾಗುತ್ತಿದೆ. 49.452 ಟಿಎಂಸಿ ಸಾಂದ್ರತೆ ಇರುವ ಕೆಆರ್ಎಸ್ ಡ್ಯಾಂನಲ್ಲಿ 47.800 ಟಿಎಂಸಿ ನೀರು ಇದೆ. ಇದನ್ನೂ ಓದಿ: ಕೊಡಗಿನ ಕೊಯಿನಾಡಿನಲ್ಲಿ ಕಣ್ಣೆದುರೇ ಕುಸಿದು ಬಿದ್ದ ಗುಡ್ಡ – ಅಪಾಯದ ಮಟ್ಟ ಮೀರಿ ಹರಿಯುತ್ತಿದೆ ಕಾವೇರಿ
Advertisement
Advertisement
ಒಂದು ಕಡೆ ಕೆಆರ್ಎಸ್ ಡ್ಯಾಂ 25,000 ಕ್ಯೂಸೆಕ್ ನೀರನ್ನು ಕಾವೇರಿ ನದಿಗೆ ಹರಿಬಿಟ್ಟಿದ್ರೆ, ಇನ್ನೊಂದೆಡೆ ಕೆಆರ್ಎಸ್ ಡ್ಯಾಂ ಸಮೀಪದಲ್ಲೇ ಇರುವ ರಂಗನತಿಟ್ಟು ಪಕ್ಷಿಧಾಮ ಮುಳುಗಡೆಯ ಭೀತಿಯಲ್ಲಿ ಇದೆ. ಹೀಗಾಗಿ ರಂಗನತಿಟ್ಟು ಪಕ್ಷಿಧಾಮದಲ್ಲಿ ಪ್ರವಾಸಿಗರಿಗೆ ಬೋಟಿಂಗ್ನ್ನು ಬಂದ್ ಮಾಡಲಾಗಿದೆ. ಕಳೆದ ಎರಡು ವರ್ಷಗಳ ಹಿಂದೆ ಕೆಆರ್ಎಸ್ ಡ್ಯಾಂನಿಂದ 1 ಲಕ್ಷ ಕ್ಯೂಸೆಕ್ ನೀರು ಹರಿಬಿಟ್ಟಿದ್ದ ಕಾರಣ ಇಲ್ಲಿನ 40ಕ್ಕೂ ಹೆಚ್ಚು ನಡುಗಡ್ಡೆಗಳು ಹಾನಿಯಾಗಿದ್ದವು. ಇದಾದ ನಂತರ ಅರಣ್ಯ ಇಲಾಖೆ ಇಲ್ಲಿನ ನಡುಗಡ್ಡೆಗಳನ್ನು ಮತ್ತೆ ನಿರ್ಮಾಣ ಮಾಡಿತ್ತು. ಇದೀಗ ಈ ಬಾರಿಯೂ ಹೆಚ್ಚಿನ ಪ್ರಮಾಣದಲ್ಲಿ ಕೆಆರ್ಎಸ್ ಡ್ಯಾಂನಿಂದ ನೀರು ಹರಿಬಿಟ್ಟರೆ ಮತ್ತೆ ಅದೇ ರೀತಿಯ ವಾತಾವರಣ ನಿರ್ಮಾಣವಾಗುತ್ತದೆ. ಅಲ್ಲದೇ ಕಾವೇರಿ ಕೊಳ್ಳದ ಜನರಿಗೂ ಸಹ ಪ್ರವಾಹದ ಭೀತಿ ಎದುರಾಗಿದ್ದು, ಈಗಾಗಲೇ ಕಾವೇರಿ ನೀರಾವರಿ ನಿಗಮ ಕಾವೇರಿ ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರಬೇಕೆಂದು ಸೂಚನೆಯನ್ನು ಸಹ ನೀಡಿದೆ. ಇದನ್ನೂ ಓದಿ: ಮೈದುಂಬಿ ಧುಮ್ಮುಕ್ಕುತ್ತಿರುವ ಗೋಕಾಕ್ ಫಾಲ್ಸ್ನಲ್ಲಿ ಪ್ರವಾಸಿಗರ ಹುಚ್ಚಾಟ