– ರಾಜವಂಶಸ್ಥನ ವಿರುದ್ಧ ಕಣಕ್ಕಿಳಿಯೋ ‘ಕೈ’ ಅಭ್ಯರ್ಥಿ ಯಾರು?
ಸಾಂಸ್ಕೃತಿಕ ನಗರಿ ಮೈಸೂರು (Mysuru). ಕಲೆ, ಸಾಹಿತ್ಯ ಹಿನ್ನೆಲೆಯಲ್ಲಿ ವಿಶ್ವಮಟ್ಟದಲ್ಲಿ ಹೆಸರು ಮಾಡಿದ ಜಿಲ್ಲೆ. ಮಂಜಿನ ನಗರಿ ಮಡಿಕೇರಿ. ಭೌಗೋಳಿಕವಾಗಿ ಎರಡೂ ನಗರಗಳೂ ಒಂದಕ್ಕೊಂದು ಸಂಬಂಧ ಹೊಂದಿವೆ. ಅಂತೆಯೇ ರಾಷ್ಟ್ರ ರಾಜಕಾರಣ ವಿಚಾರದಲ್ಲೂ ಕೂಡ. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ (Mysuru-Kodagu Lok Sabha 2024) ಈಗ ರಾಜಕೀಯ ದೃಷ್ಟಿಯಿಂದ ದೇಶದ ಗಮನ ಸೆಳೆದಿದೆ. ‘ಲೋಕ’ಸಮರಕ್ಕೆ ಅಖಾಡ ಸಜ್ಜಾಗಿದ್ದು, ರಾಷ್ಟ್ರೀಯ ಪಕ್ಷಗಳು ಮೈಸೂರು ಲೋಕಸಭಾ ಕ್ಷೇತ್ರವನ್ನು ಪ್ರತಿಷ್ಠೆಯ ಕಣವಾಗಿ ಪರಿಗಣಿಸಿವೆ. ಎರಡು ಕಾರಣಕ್ಕೆ ಮೈಸೂರು ಕ್ಷೇತ್ರ ರಾಷ್ಟ್ರಮಟ್ಟದಲ್ಲಿ ಪ್ರಮುಖ ಕಣವಾಗಿ ಬಿಂಬಿತವಾಗಿದೆ. ಒಂದು, ಕರ್ನಾಟದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರವನ್ನು ಮುನ್ನಡೆಸುತ್ತಿರುವ ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆ. ಎರಡು, ಮೈಸೂರು ಒಡೆಯರ್ ಸಂಸ್ಥಾನದ ಕುಡಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿರುವುದು.
Advertisement
ಮೇಲ್ನೋಟಕ್ಕೆ ಕಾಂಗ್ರೆಸ್‌ನ (Congress) ಭದ್ರಕೋಟೆ ಎನಿಸಿಕೊಂಡಿರುವ ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಈವರೆಗೆ ಬಿಜೆಪಿ ನಾಲ್ಕು ಬಾರಿ ಗೆದ್ದಿದೆ. 1998, 2004, 2014 ಮತ್ತು 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ತನ್ನ ಅಧಿಪತ್ಯ ಸಾಧಿಸಿದೆ. ಬಿಜೆಪಿಯಿಂದ ಸಿ.ಹೆಚ್.ವಿಜಯಶಂಕರ್ (C.H.Vijayashankar) ಎರಡು ಬಾರಿ ಸಂಸದರಾಗಿದ್ದರು. ನಂತರ ಈಗ ಪ್ರತಾಪ್‌ಸಿಂಹ (Pratap Simha) ಎರಡು ಬಾರಿ ಸಂಸದರಾಗಿದ್ದಾರೆ. 1962 ರಿಂದ 2019 ರವರೆಗೆ ಒಟ್ಟು 15 ಲೋಕಸಭಾ ಚುನಾವಣೆ ನಡೆದಿವೆ. ಇದರಲ್ಲಿ 11 ಬಾರಿ ಕಾಂಗ್ರೆಸ್ ಗೆದ್ದಿದ್ದು, ನಾಲ್ಕು ಬಾರಿ ಬಿಜೆಪಿ ಗೆದ್ದಿದೆ. ಇದನ್ನೂ ಓದಿ: Mandya Lok Sabha 2024: ಸಕ್ಕರೆ ನಾಡಿನ ಜನ ಸಿಹಿ ತಿನ್ನಿಸೋದು ಯಾರಿಗೆ?
Advertisement
Advertisement
ಕ್ಷೇತ್ರ ಪರಿಚಯ
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ಒಂದು ಕಾಲದಲ್ಲಿ ಕಾಂಗ್ರೆಸ್ ಭದ್ರಕೋಟೆಯಾಗಿತ್ತು. 1952 ರಿಂದ 1996 ರ ವರೆಗೆ ‘ಕೈ’ ಹಿಡಿತದಲ್ಲಿತ್ತು. 1998 ರಲ್ಲಿ ಬಿಜೆಪಿ ಅಭ್ಯರ್ಥಿ ಸಿ.ಹೆಚ್.ವಿಜಯಶಂಕರ್ ಜಯಗಳಿಸಿ ಮೊದಲ ಬಾರಿಗೆ ಕಮಲ ಅರಳಿಸಿದರು. ಅದಾದ ಬಳಿಕ 2009 ರ ವರೆಗೂ ಒಮ್ಮೆ ಕಾಂಗ್ರೆಸ್, ಒಮ್ಮೆ ಬಿಜೆಪಿ ಎಂಬಂತೆ ಸೋಲು-ಗೆಲುವಿನ ಆಟ ನಡೆದಿತ್ತು. ನಂತರ ದೇಶದಲ್ಲಿ ನರೇಂದ್ರ ಮೋದಿ ಅಲೆ ಇದ್ದ ಸಂದರ್ಭದಲ್ಲಿ ಎರಡು ಅವಧಿಗೆ (2014, 2019) ಬಿಜೆಪಿಯ ಪ್ರತಾಪ್ ಸಿಂಹ ಕ್ಷೇತ್ರವನ್ನು ಪ್ರತಿನಿಧಿಸಿದರು. ಈ ಹಿಂದೆ ಮಡಿಕೇರಿ ಮತ್ತು ವಿರಾಜಪೇಟೆ ಕ್ಷೇತ್ರಗಳು ದಕ್ಷಿಣ ಕನ್ನಡ ಲೋಕಸಭೆಗೆ ಸೇರಿದ್ದವು. 2009 ಕ್ಕೆ ಅವುಗಳನ್ನು ಮೈಸೂರು ಲೋಕಸಭಾ ಕ್ಷೇತ್ರಕ್ಕೆ ಸೇರಿಸಲಾಯಿತು.
Advertisement
ವಿಧಾನಸಭಾ ಕ್ಷೇತ್ರಗಳೆಷ್ಟು?
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಗಳು ಒಟ್ಟು ಎಂಟು ವಿಧಾನಸಭೆಗಳನ್ನು ಒಳಗೊಂಡಿವೆ. ಮಡಿಕೇರಿ, ವಿರಾಜಪೇಟೆ (ಕೊಡಗು ಜಿಲ್ಲೆ) ಹಾಗೂ ಪಿರಿಯಾಪಟ್ಟಣ, ಹುಣಸೂರು, ಚಾಮುಂಡೇಶ್ವರಿ, ಕೃಷ್ಣರಾಜ, ಚಾಮರಾಜ, ನರಸಿಂಹರಾಜ. ಇದನ್ನೂ ಓದಿ: Koppal Lok Sabha 2024: ಹನುಮನ ಕೃಪ ಕಟಾಕ್ಷ ಯಾರ ಮೇಲೆ?
ಮತದಾರರು ಎಷ್ಟು?
ಈ ಕ್ಷೇತ್ರದಲ್ಲಿ ಒಟ್ಟು 20,72,337 ಮತದಾರರಿದ್ದಾರೆ. ಅವರ ಪೈಕಿ 10,17,120 ಪುರುಷ ಮತದಾರರು ಹಾಗೂ 10,55,035 ಮಹಿಳಾ ಮತದಾರರಿದ್ದಾರೆ. 182 ತೃತೀಯಲಿಂಗಿ ಮತದಾರರಿದ್ದಾರೆ.
ಕಳೆದ ಚುನಾವಣೆಯಲ್ಲಿ ಏನಾಗಿತ್ತು?
2019 ರ ಚುನಾವಣೆಯಲ್ಲಿ ಪ್ರತಾಪ್ ಸಿಂಹ 6,88,974 ಮತ ಪಡೆದು ಕಾಂಗ್ರೆಸ್ ಅಭ್ಯರ್ಥಿ ಸಿ.ಹೆಚ್.ವಿಜಯಶಂಕರ್‌ರನ್ನು ಸೋಲಿಸಿದ್ದರು. ವಿಜಯಶಂಕರ್‌ಗೆ 5,50,327 ಮತ ಬಂದಿದ್ದವು. ಬಿಜೆಪಿಯ ಗೆಲುವಿನ ಅಂತರ 1,38,647 ಮತಗಳು. ಸತತ ಎರಡನೇ ಬಾರಿಗೆ ಪ್ರತಾಪ್ ಸಿಂಹ ಕ್ಷೇತ್ರದಿಂದ ಗೆದ್ದು ಬೀಗಿದ್ದರು. ಇದನ್ನೂ ಓದಿ: Kalaburagi Lok Sabha 2024: ಖರ್ಗೆ ತವರಲ್ಲಿ ಮತ್ತೆ ಮೋಡಿ ಮಾಡುತ್ತಾ ಬಿಜೆಪಿ?
ಸಿಎಂಗೆ ಪ್ರತಿಷ್ಠೆ
ಮೈಸೂರು ಲೋಕಸಭಾ ಕ್ಷೇತ್ರ ಸಿಎಂ ಸಿದ್ದರಾಮಯ್ಯ ಪಾಲಿಗೆ ಅತ್ಯಂತ ಪ್ರತಿಷ್ಠೆ ಕ್ಷೇತ್ರ. ಮೊದಲ ಬಾರಿಗೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೇ ಈ ಕ್ಷೇತ್ರ ಕಾಂಗ್ರೆಸ್‌ನಿಂದ ಕೈ ಜಾರಿ ಬಿಜೆಪಿ ಮಡಿಲಿಗೆ ಬಿದ್ದಿತ್ತು. ನಂತರ 2019 ರಲ್ಲೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಇದ್ದಗಲೂ ಬಿಜೆಪಿ ಈ ಕ್ಷೇತ್ರ ಉಳಿಸಿ ಕೊಂಡಿತು. ಹೀಗಾಗಿ ಈ ಬಾರಿಯೂ ಸಿದ್ದರಾಮಯ್ಯ (Siddaramaiah) ಸಿಎಂ ಆಗಿರೋ ಕಾರಣ ತವರು ಕ್ಷೇತ್ರವನ್ನು ಮರಳಿ ಪಡೆಯಲೇ ಬೇಕಾದ ಪ್ರತಿಷ್ಠೆಗೆ ಬಿದ್ದಿದ್ದಾರೆ.
ಬಿಜೆಪಿ+ಜೆಡಿಎಸ್
ಕಳೆದ ಎರಡು ಚುನಾವಣೆಯಲ್ಲಿ ಬಿಜೆಪಿ ಏಕಾಂಗಿಯಾಗಿ ಸ್ಪರ್ಧಿಸಿತ್ತು. ಆದರೂ ಕೂಡ ಜೆಡಿಎಸ್ ಮತದಾರರ ಒಲವು ಹಲವು ಕಾರಣದಿಂದ ಬಿಜೆಪಿ ಪರವಾಗಿಯೆ ಇತ್ತು. ಒಂದು ರೀತಿ ಅನಧಿಕೃತ ಮೈತ್ರಿ ರೀತಿ ಜೆಡಿಎಸ್ ಮತದಾರರು ಬಿಜೆಪಿ ಅಭ್ಯರ್ಥಿ ಕೈ ಹಿಡಿದು ಗೆಲುವಿನ ದಡ ಮುಟ್ಟಿಸಿದ್ದರು. ಈ ಬಾರಿ ಎರಡು ಪಕ್ಷಗಳು ಅಧಿಕೃತವಾಗಿಯೆ ಮೈತ್ರಿ ಆಗಿರೋ ಕಾರಣ ಮೈತ್ರಿ ಅಭ್ಯರ್ಥಿಯನ್ನು ಮಣಿಸುವುದು ಕಾಂಗ್ರೆಸ್‌ಗೆ ಅಷ್ಟು ಸುಲಭದ ಕೆಲಸವಲ್ಲ. ಸ್ಥಳೀಯವಾಗಿ ಜೆಡಿಎಸ್-ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರ ನಡುವೆ ಹೊಂದಾಣಿಕೆ ಬಹಳ ಚೆನ್ನಾಗಿ ಇರುವ ಕಾರಣ ಮೈತ್ರಿ ಅಭ್ಯರ್ಥಿಗೆ ಇದರ ಲಾಭವಾಗಬಹುದು. ಇದನ್ನೂ ಓದಿ: Kolar Lok Sabha 2024: ಚಿನ್ನದ ನಾಡನ್ನು ಮತ್ತೆ ವಶಕ್ಕೆ ಪಡೆಯುತ್ತಾ ಕಾಂಗ್ರೆಸ್? – ಕ್ಷೇತ್ರ ಗೆಲ್ಲಲು ಮೈತ್ರಿ ನಡೆ ಏನು?
ರಾಜವಂಶಸ್ಥ ಚುನಾವಣಾ ಅಖಾಡಕ್ಕೆ
ಸಿಂಹಾಸನದಿಂದ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ (Yaduveer Krishnadatta Chamaraja Wadiyar) ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ. ಎರಡು ದಶಕಗಳ ನಂತರ ರಾಜಪರಿವಾರದವರು ಮತ್ತೆ ಚುನಾವಣಾ ರಾಜಕಾರಣಕ್ಕೆ ಕಾಲಿಟ್ಟಿರುವುದು ಕ್ಷೇತ್ರದ ವಿಶೇಷ. ಯದುವೀರ್ ಅವರ ತಂದೆ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಲ್ಕು ಬಾರಿ (1984, 1989, 1996 ಹಾಗೂ 1999) ಗೆದ್ದು ಪಾರ್ಲಿಮೆಂಟ್ ಪ್ರವೇಶಿಸಿದ್ದರು. ಈಗ ಅವರ ಪುತ್ರ ಯದುವೀರ್ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಸತತ ಮೂರನೇ ಬಾರಿಗೆ ಕ್ಷೇತ್ರವನ್ನು ಜಯಿಸಬೇಕು ಎಂದು ಬಿಜೆಪಿ ಗುರಿ ಹೊಂದಿದೆ. ಆದರೆ ಕ್ಷೇತ್ರವನ್ನು ಹೇಗಾದರೂ ಮಾಡಿ ಮತ್ತೆ ತನ್ನ ಕೈವಶ ಮಾಡಿಕೊಳ್ಳಬೇಕು ಎಂಬ ತಂತ್ರವನ್ನು ಕಾಂಗ್ರೆಸ್ ರೂಪಿಸುತ್ತಿದೆ.
‘ಕೈ’ ಅಭ್ಯರ್ಥಿ ಯಾರು?
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರತಿಷ್ಠೆಯ ಕಣವಾಗಿದೆ. ಹೀಗಾಗಿ ಬಿಜೆಪಿ ಅಭ್ಯರ್ಥಿ ಯದುವೀರ್ ವಿರುದ್ಧ ಯಾರನ್ನು ಕಣಕ್ಕಿಳಿಸಬೇಕು ಎಂಬುದು ಕಗ್ಗಂಟಾಗಿದೆ. ತಮ್ಮ ಪುತ್ರ ಯತೀಂದ್ರ ಅವರನ್ನೇ ಕಣಕ್ಕಿಳಿಸಿ ಎಂದು ಸಿದ್ದರಾಮಯ್ಯಗೆ ಸ್ಥಳೀಯ ನಾಯಕರು ಒತ್ತಾಯಿಸಿದ್ದರು. ಆದರೆ ಪುತ್ರನ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಸಿದ್ದರಾಮಯ್ಯ ಅದಕ್ಕೆ ಒಪ್ಪಿಗೆ ಸೂಚಿಸಿಲ್ಲ. ಒಕ್ಕಲಿಗ ಪ್ರಾಬಲ್ಯವಿರುವ ಕ್ಷೇತ್ರದಲ್ಲಿ ಅದೇ ಸಮುದಾಯದ ನಾಯಕನನ್ನು ಅಖಾಡಕ್ಕೆ ಇಳಿಸಲು ಕಾಂಗ್ರೆಸ್ ತಂತ್ರಗಾರಿಕೆ ರೂಪಿಸಿದೆ. ಬಿಜೆಪಿಗೆ ಚುನಾವಣೆಯಲ್ಲಿ ಪ್ರಬಲ ಪೈಪೋಟಿ ನೀಡಬೇಕು ಎಂಬುದು ಪಕ್ಷದ ಲೆಕ್ಕಾಚಾರ. ಹೀಗಾಗಿ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಅವರ ಹೆಸರು ಕಾಂಗ್ರೆಸ್ ಪಾಳಯದಲ್ಲಿ ಕೇಳಿಬರುತ್ತಿದೆ. ಒಟ್ಟಾರೆ ‘ಕೈ’ ಅಭ್ಯರ್ಥಿ ಯಾರಾಗುತ್ತಾರೆ ಎಂಬುದು ಸದ್ಯದ ಕುತೂಹಲವಾಗಿದೆ.
‘ಪಬ್ಲಿಕ್ ಟಿವಿ’ಯಿಂದ ನಿಖರ ವರದಿ
2014 ರಲ್ಲಿ ಬಿಜೆಪಿ ಹೊಸ ಮುಖಕ್ಕೆ ಅವಕಾಶ ನೀಡಿತ್ತು. ಪತ್ರಕರ್ತರಾಗಿದ್ದ ಪ್ರತಾಪ್ ಸಿಂಹ ರಾಜಕೀಯಕ್ಕೆ ಬಂದು ಬಿಜೆಪಿ ಅಭ್ಯರ್ಥಿಯಾಗಿದ್ದರು. ಕಾಂಗ್ರೆಸ್ ವಿರುದ್ಧ ಗೆದ್ದು ಮೊದಲ ಬಾರಿಗೆ ಪಾರ್ಲಿಮೆಂಟ್ ಪ್ರವೇಶಿಸಿದ್ದರು. ಮತ್ತೆ 2019 ರಲ್ಲೂ ಪಕ್ಷದಿಂದ ಟಿಕೆಟ್ ಪಡೆದು ಕಣಕ್ಕಿಳಿದಿದ್ದ ಪ್ರತಾಪ್ ಸಿಂಹ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯನ್ನು ಮಣಿಸಿದ್ದರು. ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿ ಈ ಬಾರಿಯೂ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಹೈಕಮಾಂಡ್‌ನಿಂದ ಅಚ್ಚರಿಯ ಘೋಷಣೆ ಹೊರಬಿತ್ತು. ಈ ಸಲ ಪ್ರತಾಪ್ ಸಿಂಹ ಬದಲು ಯದುವೀರ್‌ಗೆ ಟಿಕೆಟ್ ನೀಡಬೇಕು ಎಂದು ಬಿಜೆಪಿ ತೀರ್ಮಾನಿಸಿರುವ ವಿಚಾರವನ್ನು ಮೊಟ್ಟ ಮೊದಲು ಸುದ್ದಿಯಾಗಿ ಬಿತ್ತರಿಸಿದ್ದು ‘ಪಬ್ಲಿಕ್ ಟಿವಿ’ ಎಂಬುದು ಗಮನಾರ್ಹ. ಪಬ್ಲಿಕ್ ಟಿವಿಯಿಂದ ನಿಖರ ಮಾಹಿತಿ ಹೊರಬೀಳುತ್ತಿದ್ದಂತೆ ಮೈಸೂರು ಹಾಗೂ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆದವು. ಪ್ರತಾಪ್ ಸಿಂಹ ಅವರು ರಾಷ್ಟ್ರಮಟ್ಟದಲ್ಲಿ ಟ್ರೆಂಡಿಂಗ್ ವಿಷಯವಾದರು. ಸಂಸದ ತನ್ನ ಅವಧಿಯಲ್ಲಾದ ಅಭಿವೃದ್ಧಿ ಕೆಲಸಗಳ ಬಗ್ಗೆ ಮಾತನಾಡುತ್ತಾ, ಟಿಕೆಟ್ ತಪ್ಪಿದ್ದಕ್ಕೆ ಕಣ್ಣೀರಿಟ್ಟರು. ಹಾಲಿ ಸಂಸದನಿಗೆ ಟಿಕೆಟ್ ನೀಡಬೇಕು ಎಂದು ಅಭಿಮಾನಿಗಳು ಅಭಿಯಾನ ನಡೆಸಿದ್ದರು. ಮತ್ತೊಂದೆಡೆ ರಾಜವಂಶಸ್ಥ ಯದುವೀರ್ ರಾಜಕೀಯಕ್ಕೆ ಎಂಟ್ರಿ ಕೊಡುತ್ತಿರುವುದಕ್ಕೆ ಅನೇಕರಿಂದ ಬೆಂಬಲ ಕೂಡ ವ್ಯಕ್ತವಾಯಿತು. ಅಭ್ಯರ್ಥಿ ವಿಚಾರವಾಗಿ ‘ಪಬ್ಲಿಕ್ ಟಿವಿ’ ಬಿತ್ತರಿಸಿದ ವರದಿ ಸದ್ದು ಮಾಡಿತ್ತೆಂದರೆ ಅತಿಶಯೋಕ್ತಿ ಅಲ್ಲ. ಇದನ್ನೂ ಓದಿ: Uttara Kannada Lok Sabha 2024: ಬಿಜೆಪಿ ನಾಗಾಲೋಟಕ್ಕೆ ಕಾಂಗ್ರೆಸ್ ಹಾಕುತ್ತಾ ಬ್ರೇಕ್?
ಜಾತಿವಾರು ಲೆಕ್ಕಾಚಾರ
ಒಕ್ಕಲಿಗರು: 4 ಲಕ್ಷ
ಮುಸ್ಲಿಂ: 2.80 ಲಕ್ಷ
ಕುರುಬರು: 1.50 ಲಕ್ಷ
ಎಸ್ಸಿ (ಎಡ): 2 ಲಕ್ಷ
ಎಸ್ಸಿ (ಬಲ): 1 ಲಕ್ಷ
ಲಿಂಗಾಯತ: 1.35 ಲಕ್ಷ
ಎಸ್ಟಿ: 1.40
ಕೊಡವ: 1 ಲಕ್ಷ
ಬ್ರಾಹ್ಮಣರು: 1.10 ಲಕ್ಷ
ಬುಡಕಟ್ಟು: 45 ಸಾವಿರ
ಇತರೆ: 1.50 ಲಕ್ಷ