ಮೈಸೂರು: ಬರೋಬ್ಬರಿ 64 ವರ್ಷಗಳ ಬಳಿಕ ಮೈಸೂರಿನ ಯದುವಂಶಕ್ಕೆ ಸಂತಾನ ಪ್ರಾಪ್ತಿಯಾಗಿದೆ. ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ರಾಣಿ ತ್ರಿಷಿಕಾ ಕುಮಾರಿಗೆ ಪುತ್ರ ಸಂತಾನ ಪ್ರಾಪ್ತಿಯಾಗಿದೆ.
ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ರಾಣಿ ತ್ರಿಷಿಕಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಹೀಗಾಗಿ ಅರಮನೆಯಲ್ಲಿ ಎಲ್ಲಿಲ್ಲದ ಸಂಭ್ರಮ ಮನೆಮಾಡಿದೆ. ಮೈಸೂರು ಯದುವಂಶಕ್ಕೆ 1953ರಲ್ಲಿ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಜನನವಾದ ನಂತರ ಇಲ್ಲಿಯವರೆಗೆ ಯಾವುದೇ ಗಂಡು ಮಕ್ಕಳು ಜನಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಯದುವೀರ್ ಅವರನ್ನು 2013ರಲ್ಲಿ ಸಂಬಂಧಿಕರಲ್ಲೇ ದತ್ತು ತೆಗೆದುಕೊಳ್ಳಲಾಗಿತ್ತು. 2016 ಜೂನ್ 27ರಂದು ತ್ರಿಷಿಕಾ ಕುಮಾರಿ ಜೊತೆ ಮದುವೆ ಮಾಡಲಾಗಿತ್ತು.
Advertisement
Advertisement
ಬುಧವಾರ ರಾತ್ರಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ತ್ರಿಷಿಕಾ ಗಂಡು ಮಗುವಿಗೆ ಜನ್ಮ ನೀಡಿದ್ದು, ಈ ಮಗು ಸುಮಾರು 9.50ರ ಸಮಯದಲ್ಲಿ ಪುನರ್ವಸು ನಕ್ಷತ್ರ ಹಾಗೂ ಮಿಥುನ ರಾಶಿಯಲ್ಲಿ ಜನಿಸಿದೆ. ಇದು ಶ್ರೀರಾಮ ಚಂದ್ರ ಜನಿಸಿದ ನಕ್ಷತ್ರವಾಗಿದೆ ಎನ್ನುವುದು ವಿಶೇಷ.
Advertisement
ದೇವಸ್ಥಾನದಲ್ಲಿ ವಿಶೇಷ ಪೂಜೆ:
ಯದುವಂಶಕ್ಕೆ ನೂತನ ವಾರುಸುದಾರ ಜನನವಾದ ಹಿನ್ನೆಲೆಯಲ್ಲಿ ಶೃಂಗೇರಿಯ ಶಾರದಾ ಪೀಠದಲ್ಲಿ ಹಾಗೂ ಮನೆದೇವರಾದ ಪರಕಾಲ ಸ್ವತಂತ್ರ ಮಠದಲ್ಲಿ ವಿಶೇಷ ಪೂಜೆ ನೇರವೇರಿಸಲಾಗಿದೆ. ಅರಮನೆಯೊಳಗಿನ ದೇವಾಲಯಗಳಿಗೆ ವಿಶೇಷ ಪೂಜೆ ಸಲ್ಲಿಸಲಾಗಿದ್ದು, ಮನೆದೇವರಾದ ಚಾಮುಂಡಿ ಬೆಟ್ಟದಲ್ಲೂ ವಿಶಿಷ್ಟ ಪೂಜೆ ನಡೆಯುತ್ತಿದೆ. ನೂತನ ಅತಿಥಿಯ ಆಗಮನದಿಂದ ಅರಮನೆಯಲ್ಲಿ ಸಂಭ್ರಮ ಮನೆ ಮಾಡಿದ್ದು, ಅರಸು ಮನೆತನದವರು ಅರಮನೆಗೆ ಆಗಮಿಸುವ ಜನರಿಗೆ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.
Advertisement
ದಸರಾ ಸಂದರ್ಭದಲ್ಲಿ ತ್ರಿಷಿಕಾ ಗರ್ಭ ಧರಿಸಿದ ವಿಚಾರ ತಿಳಿದು ಯದುವಂಶಕ್ಕೆ ತಟ್ಟಿದ್ದ ಅಲಮೇಲಮ್ಮ ಶಾಪ ವಿಮೋಚನೆಯಾಗಿದೆ ಎನ್ನುವ ಸುದ್ದಿಗಳು ಕೇಳಿ ಬಂದಿತ್ತು. ಆದರೆ ಈ ಶಾಪಕ್ಕೂ ಗರ್ಭ ಧರಿಸಿದ್ದಕ್ಕೆ ಯಾವುದೇ ಸಂಬಂಧವಿಲ್ಲ ಎಂದು ಇತಿಹಾಸಕಾರರು ಹೇಳುತ್ತಾರೆ. ಶಾಪದ ಪ್ರಕಾರ ದತ್ತು ಮಕ್ಕಳಿಗೆ ಮಕ್ಕಳಾಗುತ್ತದೆ. ಆದರೆ ದತ್ತು ಪುತ್ರರಿಗೆ ಆದ ಮಕ್ಕಳಿಗೆ ಸಂತಾನ ಯೋಗ ಇಲ್ಲದೇ ಇರುವ ವಿಚಾರ ಇತಿಹಾಸ ಪುಟದಲ್ಲಿ ಸಿಗುತ್ತದೆ.
ಅಲಮೇಲಮ್ಮ ಶಾಪ ಏನು?
ಹಿಂದೆ ಶ್ರೀರಂಗಪಟ್ಟಣವನ್ನು ವಿಜಯನಗರದ ಪ್ರತಿನಿಧಿಯಾಗಿ ಶ್ರೀರಂಗರಾಯ ರಾಜ್ಯಭಾರ ಮಾಡುತ್ತಿದ್ದ ವೇಳೆ ಆತನಿಗೆ ಬೆನ್ನುಪಣಿ ಎಂಬ ಕಾಯಿಲೆ ಬಂದಿತ್ತು. ಶ್ರೀರಂಗರಾಯ ತನ್ನ ಕಾಯಿಲೆ ನಿವಾರಣೆ ಮಾಡಿಕೊಳ್ಳಲು ತನ್ನ ಮಡದಿಯಾಗಿದ್ದ ಅಲಮೇಲಮ್ಮ ಜೊತೆ ತಲಕಾಡಿನ ವೈದ್ಯನಾಥೇಶ್ವರ ದೇವಾಲಯಕ್ಕೆ ತೆರಳಿದ್ದ. ರಾಜ ಶ್ರೀರಂಗರಾಯ ಪ್ರಾಂತ್ಯ ಬಿಟ್ಟು ಹೋಗಿರುವ ವಿಚಾರ ತಿಳಿದ ಮೈಸೂರು ಒಡೆಯರು, ಈ ಸಂದರ್ಭದಲ್ಲಿ ಶ್ರೀರಂಗಪಟ್ಟಣವನ್ನು ಗೆಲ್ಲಲು ಸುವರ್ಣ ಸಮಯ ಎಂದು ತಿಳಿದು ರಾಜನಿಲ್ಲದ ವೇಳೆಯಲ್ಲಿ ಏಕಾಏಕಿ ಆಕ್ರಮಣ ಮಾಡಿ ಕೊನೆಗೆ ಶ್ರೀರಂಗಪಟ್ಟಣವನ್ನು ವಶಪಡಿಸಿಕೊಂಡಿದ್ದರು.
ತಲಕಾಡಿನಲ್ಲಿದ್ದ ರಾಜ ಶ್ರಿರಂಗರಾಯ ಈ ವಿಚಾರ ತಿಳಿದು ಅಲ್ಲಿಯೇ ಮೃತಪಡುತ್ತಾನೆ. ಇನ್ನು ಮಡದಿ ಅಲಮೇಲಮ್ಮ ರಾಜ್ಯ, ಪತಿ ಇಬ್ಬರನ್ನು ಕಳೆದುಕೊಂಡು ಮಾಲಂಗಿಯಲ್ಲಿಯೇ ಉಳಿದುಕೊಂಡಿರುತ್ತಾಳೆ. ಆದರೆ ರಾಜ ಮನೆತನದವರು ಅವರ ಮೇಲೂ ದಾಳಿ ಮಾಡಲು ನಿರ್ಧರಿಸುತ್ತಾರೆ. ಒಡೆಯರು ತನ್ನ ಮೇಲು ಆಕ್ರಮಣ ಮಾಡಲು ನಿರ್ಧಾರ ಮಾಡಿದ ವಿಚಾರವನ್ನು ತಿಳಿದ ಅಲಮೇಲಮ್ಮ “ತಲಕಾಡು ಮರಳಾಗಿ, ಮಾಲಂಗಿ ಮಡುವಾಗಿ, ಮೈಸೂರು ರಾಜರಿಗೆ ಮಕ್ಕಳಾಗದಿರಲಿ” ಎಂದು ಶಾಪ ಹಾಕಿ ತಲಕಾಡಿನಲ್ಲಿ ಹರಿಯುತ್ತಿದ್ದ ಕಾವೇರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ.
ದಸಾರೆಯಲ್ಲಿ ಪೂಜೆ:
ಅಲಮೇಲಮ್ಮ ನೀಡಿದ ಶಾಪದ ವಿಮೋಚನೆಗೆ ಮೈಸೂರು ಅರಸರು ಅಂದಿನಿಂದ ಇಲ್ಲಿಯವರೆಗೂ ದಸರಾ ಉತ್ಸವದಲ್ಲಿ ಅಲಮೇಲಮ್ಮ ಮೂರ್ತಿಗೆ ಪೂಜೆ ಸಲ್ಲಿಸುತ್ತಾ ಬರುತ್ತಿದ್ದಾರೆ. ಆದರೆ ಸುಮಾರು ಯುಗಗಳೇ ಕಳೆದರೂ ಶಾಪದಿಂದ ಮಾತ್ರ ಮುಕ್ತಿ ಪಡೆಯಲು ಸಾಧ್ಯವಾಗಿಲ್ಲ. ಸಂತಾನ ಭಾಗ್ಯ ಇಲ್ಲದ ಕಾರಣ ರಾಜರು ದತ್ತು ಮಗುವನ್ನು ಪಡೆದುಕೊಂಡು ವಂಶವನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ.