ಮೈಸೂರು: ಆಸ್ತಿ ವಿಚಾರವಾಗಿ ಒಡಹುಟ್ಟಿದ ತಮ್ಮನನ್ನೇ ಅಣ್ಣ ಕೊಲೆ ಮಾಡಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಮೆಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗೋವಿಂದ ನಾಯ್ಕ(35) ಕೊಲೆಯಾದ ದುರ್ದೈವಿ. ಹತ್ಯೆ ಮಾಡಿದ ಅಣ್ಣ ರಂಗಸ್ವಾಮಿ ನಾಪತ್ತೆಯಾಗಿದ್ದಾನೆ. ನಂಜನಗೂಡು ತಾಲ್ಲೂಕಿನ ದೊಡ್ಡಕೌಲಂದೆ ಪೋಲಿಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಇದನ್ನೂ ಓದಿ: ಕಲಬುರಗಿ ವಿವಿ ಆವರಣದಲ್ಲಿ ರಾಮನವಮಿ ಆಚರಿಸ್ತಿದ್ದ ಎಬಿವಿಪಿ ವಿದ್ಯಾರ್ಥಿಗಳ ಮೇಲೆ ಹಲ್ಲೆ
ಕೊಲೆಯಾದ ಗೋವಿಂದ ನಾಯ್ಕ ಮತ್ತು ಕೊಲೆ ಆರೋಪಿ ಅಣ್ಣ ರಂಗಸ್ವಾಮಿ ನಡುವೆ ಪದೇ ಪದೆ ಜಾಗದ ವಿಚಾರಕ್ಕೆ ಘರ್ಷಣೆ ನಡೆಯುತ್ತಿತ್ತು. ಮೊನ್ನೆ ರಾತ್ರಿ ಮನೆಯ ಮುಂಭಾಗದಲ್ಲಿದ್ದ ಶೌಚಾಲಯದ ಕೊಠಡಿಯ ಬೀಗ ಒಡೆದ ಎಂದು ಆರೋಪಿ ಅಣ್ಣ ಖ್ಯಾತೆ ತೆಗೆದು ಜಗಳಕ್ಕೆ ಮುಂದಾಗಿದ್ದಾನೆ. ಗೋವಿಂದ ನಾಯ್ಕ ಮತ್ತು ಆರೋಪಿ ಅಣ್ಣನ ನಡುವೆ ಮಾತಿನ ಚಕಮಕಿ ನಡೆಯುತ್ತಿರುವುದನ್ನು ಗಮನಿಸಿದ ಗ್ರಾಮಸ್ಥರು ಜಗಳ ಬಿಡಿಸಿದ್ದರು. ಇದನ್ನೂ ಓದಿ: ಮುಸ್ಕಾನ್‍ರನ್ನು ತನಿಖೆ ನಡೆಸುವಂತೆ ಸಿಎಂಗೆ ಅನಂತ್‍ಕುಮಾರ್ ಹೆಗ್ಡೆ ಪತ್ರ
ಮತ್ತೆ ರಾತ್ರಿ ಹನ್ನೊಂದು ಗಂಟೆಯ ಸಮಯದಲ್ಲಿ ಮನೆಯಲ್ಲಿ ಗೋವಿಂದನಾಯ್ಕ ಮಲಗಿರುವ ಸಂದರ್ಭದಲ್ಲಿ ಏಕಾಏಕಿ ಮಚ್ಚಿನಿಂದ ಅಣ್ಣ ರಂಗಸ್ವಾಮಿ ಹಲ್ಲೆ ಮಾಡಿದ್ದಾನೆ. ತಲೆಯ ಭಾಗಕ್ಕೆ ಮತ್ತು ಕುತ್ತಿಗೆಯ ಭಾಗಕ್ಕೆ ಮಚ್ಚಿನಿಂದ ಬರ್ಬರವಾಗಿ ಹಲ್ಲೆ ಮಾಡಿದ ಪರಿಣಾಮ ಗಂಭೀರ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದು ಗೋವಿಂದ ನರಳಾಡುತ್ತಿದ್ದನು. ಗ್ರಾಮಸ್ಥರು ದೊಡ್ಡಕವಲಂದೆ ಪೊಲೀಸ್ ಠಾಣೆಗೆ ದೂರವಾಣಿ ಕರೆ ಮಾಡಿ ವಿಚಾರ ಮುಟ್ಟಿಸಿದ್ದಾರೆ.
ಕೂಡಲೇ ಪಿಎಸ್‍ಐ ಮಹೇಂದ್ರ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದು ನರಳಾಡುತ್ತಿದ್ದ ಗೋವಿಂದನನ್ನು ಮೈಸೂರಿನ ಕೆಆರ್ ಆಸ್ಪತ್ರೆಗೆ ಸಾಗಿಸಿದ್ದಾರೆ. ಗಂಭೀರ ಗಾಯಗೊಂಡಿದ್ದ ಗೋವಿಂದ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.