– ವಿಜಯಪುರ ಘಟನೆ ಜನಪ್ರತಿನಿಧಿಗಳೇ ತಲೆತಗ್ಗಿಸುವಂತಾಗಿದೆ
– ಶೀಘ್ರವೇ ಪ್ರತಿಭಟನಾಕಾರರ ಬೇಡಿಕೆ ಈಡೇರಿಸಲಿ
– ಬೆಟ್ಟಕ್ಕೆ ಹೋಗಿ ಆಣೆ ಪ್ರಮಾಣದ ಅವಶ್ಯಕತೆ ಇರಲಿಲ್ಲ
ಮೈಸೂರು: ನಮ್ಮ ತಂದೆ ಪ್ರಧಾನ ಮಂತ್ರಿ ಆಗಿದ್ದಾಗ ಯಾಕೆ ಈ ರೀತಿ ಉಗ್ರರು ದೇಶಕ್ಕೆ ನುಸುಳಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ರಾಜ್ಯಕ್ಕೆ ಉಗ್ರರು ನುಸುಳಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ತಂದೆ ಪಿಎಂ ಆಗಿದ್ದಾಗ ದೇಶದಲ್ಲಿ ಕೊಮು ಗಲಭೆಗಳು ಯಾಕೆ ನಡೆಯಲಿಲ್ಲ. ಇಡೀ ದೇಶದಲ್ಲಿ ಎಲ್ಲಿಯೂ ಯಾಕೆ ಸ್ಫೋಟಗಳು ಉಂಟಾಗಲಿಲ್ಲ ಎಂದು ಪ್ರಶ್ನಿಸಿದ ಅವರು, ಇದು ಇವತ್ತಿನ ಆಡಳಿತ ವ್ಯವಸ್ಥೆಯ ಸ್ಥಿತಿ ಎಂದು ಗರಂ ಆದರು.
Advertisement
Advertisement
370 ರದ್ಧತಿಗೂ ಕರ್ನಾಟಕದಲ್ಲಿ ಉಗ್ರರು ನುಸುಳಲು ಏನು ಸಂಬಂಧ..? ಆಡಳಿತ ನಡೆಸುವವರ ಮನಸ್ಥಿತಿಗಳು ಸರಿಯಿಲ್ಲದಾಗ ಈ ರೀತಿಯ ಭಯ ಸೃಷ್ಟಿಯಾಗುತ್ತದೆ. ಚೀನಾ, ಪಾಕಿಸ್ತಾನಕ್ಕಿಂತಲೂ ನಮ್ಮ ದೇಶದಲ್ಲಿ ಹೆಚ್ಚಿನ ಮಕ್ಕಳು ಹಸಿವಿನಿಂದ ಸಾಯುತ್ತಿದ್ದಾರೆ. ಈ ಬಗ್ಗೆ ಮೊದಲು ಗಮನ ಹರಿಸಲಿ. ಆಮೇಲೆ ಪ್ರಧಾನಿಗಳು ಕಾಂಗ್ರೆಸ್ 370ಯನ್ನ ಮತ್ತೆ ಜಾರಿ ಮಾಡಲಿ ಅನ್ನೋ ಸವಾಲು ಹಾಕಲಿ ಎಂದು ಕಿಡಿಕಾರಿದರು.
Advertisement
ವಿಜಯಪುರದಲ್ಲಿ ಆಸ್ಪತ್ರೆ ಹೊರಭಾಗದಲ್ಲಿ ಗರ್ಭಿಣಿ ಹೆರಿಗೆ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಅವರು, ಇದು ಬರೀ ಸರ್ಕಾರ ಮಾತ್ರವಲ್ಲ ಎಲ್ಲ ಜನಪ್ರತಿನಿಧಿಗಳು ತಲೆ ತಗ್ಗಿಸುವ ವಿಚಾರವಾಗಿದೆ. ಆರೋಗ್ಯ ಇಲಾಖೆ ಕಟ್ಟಡ ಕಟ್ಟಲು ಕೊಡುವ ಆಸಕ್ತಿಯನ್ನ ಸಿಬ್ಬಂದಿ ನೇಮಕಾತಿಗೆ ನೀಡುತ್ತಿಲ್ಲ. ಇದರಿಂದಾಗಿಯೇ ವ್ಯವಸ್ಥೆ ಹದಗೆಟ್ಟಿದೆ. ಸರ್ಕಾರ ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಲಿ. ಆರೋಗ್ಯ ಇಲಾಖೆ ವ್ಯವಸ್ಥೆ ಸರಿಪಡಿಸಲಿ ಎಂದರು.
Advertisement
ಬೆಂಗಳೂರಿನಲ್ಲಿ ರೈತರ ಪ್ರತಿಭಟನೆ ವಿಚಾರದ ಕುರಿತು ಪ್ರತಿಕ್ರಿಯಿಸಿ, ಪ್ರತಿಭಟನಾಕಾರರನ್ನ ಭೇಟಿ ಮಾಡುವ ಸೌಜನ್ಯ ಸರ್ಕಾರಕ್ಕೆ ಇಲ್ಲ. ಆದರೆ ನಾನು ರಾತ್ರಿ ಕೋನರೆಡ್ಡಿಗೆ ಕರೆ ಮಾಡಿ ಅವರಿಗೆ ಸಹಾಯ ಬೇಕಾ ಅಂತ ಕೇಳಿದೆ. ಸಹಾಯ ಮಾಡುವ ನನ್ನಂತವರನ್ನು ಅಲ್ಲಿಯ ಜನ ಸ್ವೀಕರಿಸಲಿಲ್ಲ. ನೀನಾದ್ರೂ ಹೋಗಿ ಸಹಾಯ ಮಾಡಪ್ಪ ಹೇಳಿದೆ. ಚಳಿ ಮಳೆಯಲ್ಲಿ ಕುಳಿತ ಪ್ರತಿಭಟನಾಕಾರರನನ್ನ ಮಾತನಾಡಿಸದೆ ಇರೋದು ಸರ್ಕಾರಕ್ಕೆ ಗೌರವ ತರಲ್ಲ. ಶೀಘ್ರದಲ್ಲೇ ಪ್ರತಿಭಟನಾಕಾರರ ಬೇಡಿಕೆ ಈಡೇರಿಸಲಿ ಎಂದು ಒತ್ತಾಯಿಸಿದರು.
ಮಹಾರಾಷ್ಟ್ರಕ್ಕೆ ನೀರು ಬಿಡುವ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಅವರು ನಮಗೆ ಎಲ್ಲಿ ನೀರು ಕೊಟ್ಟರು ಎಂದು ಪ್ರಶ್ನಿಸಿದರು. ಕಳೆದ ವರ್ಷ ಎಷ್ಟೇ ಮನವಿ ಮಾಡಿದರು ನೀರು ಕೊಡಲಿಲ್ಲ. ಮುಖ್ಯ ಕಾರ್ಯದರ್ಶಿ ಮನವಿ ಮಾಡಿದ್ದರು. ಮಂತ್ರಿಗಳೇ ನಿಯೋಗ ಹೋದರೂ ನೀರು ಬಿಡಲಿಲ್ಲ. ಇದು ಎಷ್ಟರ ಮಟ್ಟಿಗೆ ಸಮಂಜಸ. ಗೃಹ ಸಚಿವರ ಸಮರ್ಥನೆ ಸಿಎಂ ನಡವಳಿಕೆ ಎಲ್ಲವನ್ನೂ ಜನ ನೋಡುತ್ತಿದ್ದಾರೆ ಎಂದರು.
ಸಾರಾ ಮಹೇಶ್ ಹಾಗೂ ವಿಶ್ವನಾಥ್ ಆಣೆ ಪ್ರಮಾಣ ವಿಚಾರದ ಕುರಿತು ಪ್ರತಿಕ್ರಿಯಿಸಿ, ಗೊತ್ತಿರೋ ಸತ್ಯಕ್ಕೆ ಆಣೆ ಪ್ರಮಾಣ ಬೇಕಿತ್ತಾ, ದುಡ್ಡು ಕೊಟ್ಟವನು ಯಾರಾದ್ರು ಬಂದು ಹೇಳ್ತಾನಾ ಎಂದು ಪ್ರಶ್ನಿಸಿದರು. ವಿಶ್ವನಾಥ್ ಬುದ್ಧಿ ಗೊತ್ತಿದ್ದೂ ಯಾಕಪ್ಪ ಹೋಗ್ತೀಯಾ ಎಂದು ಸಾರಾ ಮಹೇಶ್ ಗೆ ಮೊದಲೇ ಹೇಳಿದ್ದೆ. ವಿಶ್ವನಾಥ್ ಏನೂ ಅವರ ಮುಖವಾಡ ಏನೂ ಅನ್ನೋದು ಎಲ್ಲರಿಗೂ ಗೊತ್ತಿದೆ. ಅದಕ್ಕೆ ಜನರೇ ಅವರಿಗೆ ಉತ್ತರ ಕೊಡುತ್ತಾರೆ. ಬಿಜೆಪಿಯವರು 2008ರಲ್ಲಿ ಯಾವ ರೀತಿ ಆಪರೇಷನ್ ಮಾಡಿದರು. ಈಗ ಸರ್ಕಾರ ಬೀಳಿಸೋಕೆ ಯಾವ ರೀತಿ ಆಪರೇಷನ್ ಮಾಡಿದರು ಅನ್ನೋದು ಎಲ್ಲರಿಗೂ ತಿಳಿದಿದೆ. ಇದಕ್ಕೆ ಬೆಟ್ಟಕ್ಕೆ ಹೋಗಿ ಆಣೆ ಪ್ರಮಾಣ ಮಾಡುವ ಅವಶ್ಯಕತೆ ಇರಲಿಲ್ಲ ಎಂದು ತಿಳಿಸಿದರು.