ಮೈಸೂರು: ಜಿಲ್ಲೆಯ ಎಚ್.ಡಿ.ಕೋಟೆ ಪಟ್ಟಣದ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಹುಳು ಮಿಶ್ರಿತ ಆಹಾರ ಸೇವಿಸಿ 30ಕ್ಕೂ ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದ ಹಿನ್ನೆಲೆಯಲ್ಲಿ ಆದರ್ಶ ವಿದ್ಯಾಲಯಕ್ಕೆ ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಭೇಟಿ ನೀಡಿ ಪರಿಶೀಲಿಸಿದರು.
ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿಗಳು, ನಿನ್ನೆ ಸಂಭವಿಸಿದ ಘಟನೆಯ ಕುರಿತು ಆದರ್ಶ ಶಾಲೆಯ ವಿದ್ಯಾರ್ಥಿಗಳು ಹಾಗೂ ಅಡುಗೆ ತಯಾರಿಸುವ ಸಿಬ್ಬಂದಿಗಳಿಂದ ಮಾಹಿತಿ ಪಡೆದುಕೊಂಡರು. ವಿದ್ಯಾರ್ಥಿಗಳು ಅಸ್ವಸ್ಥರಾಗಲು ಕಳಪೆ ಗುಣಮಟ್ಟದ ಆಹಾರ ಪದಾರ್ಥಗಳನ್ನು ಅಡುಗೆಗೆ ಬಳಕೆ ಮಾಡಿರುವುದೇ ಕಾರಣ ಎಂಬುದು ಭೇಟಿ ವೇಳೆ ಮೇಲ್ನೋಟಕ್ಕೆ ಸ್ಪಷ್ಟವಾಗಿದೆ.
ಆದರ್ಶ ವಿದ್ಯಾಲಯದ ಅವ್ಯವಸ್ಥೆಗಳ ಬಗ್ಗೆ ವಿದ್ಯಾರ್ಥಿಗಳ ಪೋಷಕರು ಜಿಲ್ಲಾಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟು ತನಿಖೆಗೆ ಆದೇಶಿಸುವಂತೆಯೂ ಮನವಿ ಮಾಡಿದರು. ಇದೇ ವೇಳೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಪರಿಶೀಲಿಸಿದ ಅಕ್ಕಿ, ಬೇಳೆ, ಗೋಧಿ ಉತ್ಪನ್ನಗಳಲ್ಲಿ ಹುಳುಗಳು ಇರುವುದು ಪತ್ತೆಯಾಯಿತು. ಅವಧಿ ಮುಗಿದಿರುವ ಹಾಲಿನ ಪುಡಿಯ ಪೊಟ್ಟಣಗಳನ್ನು ಬಳಕೆ ಮಾಡುತ್ತಿರುವ ವಿಷಯವೂ ಬೆಳಕಿಗೆ ಬಂದಿದೆ.
ನವೆಂಬರ್ ಅಂತ್ಯಕ್ಕೆ ಅವಧಿ ಮುಗಿದಿರುವ ಹಾಲಿನ ಪುಡಿಯ ಪೊಟ್ಟಣ ಬಳಕೆ ಮಾಡುತ್ತಿರುವ ಬಗ್ಗೆ ಆದರ್ಶ ವಿದ್ಯಾಲಯದ ಸಿಬ್ಬಂದಿಗಳನ್ನು ಅಭಿರಾಮ್ ಜಿ ಶಂಕರ್ ಪ್ರಶ್ನಿಸಿ, ಅವಧಿ ಮೀರಿದ ಆಹಾರ ಪದಾರ್ಥಗಳನ್ನು ವಿದ್ಯಾರ್ಥಿಗಳಿಗೆ ನೀಡುತ್ತಿರುವುದಕ್ಕೆ ಶಾಲಾ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡರು.