– ಮೈಸೂರು ದಸರಾ ಉತ್ಸವದಲ್ಲಿ ಕಣ್ಮನ ಸೆಳೆದ ಶ್ವಾನಗಳು
– 45 ತಳಿ, 480 ಅಧಿಕ ಶ್ವಾನಗಳ ಪ್ರದರ್ಶನ
– ತಾಯಿ ಬಿಟ್ಟರೆ ಅಷ್ಟೊಂದು ಮಮತೆ, ಪ್ರೀತಿ ತೋರಿಸೋದು ನಾಯಿ: ಸಂಸದೆ ಮಾತು
ಮೈಸೂರು: ದೇಶ-ವಿದೇಶದ ಶ್ವಾನಗಳು ತಮ್ಮ ತುಂಟಾಟ, ಓಡಾಟದ ಮೂಲಕ ನೂರಾರು ಮಂದಿಯನ್ನು ಆಕರ್ಷಿಸಿದವು. ಆಟ, ಬೆಡಗು ಬಿನ್ನಾಣದಲ್ಲಿ ಹೆಜ್ಜೆ ಹಾಕಿದ ಶ್ವಾನಗಳ ಬುದ್ಧಿವಂತಿಕೆ ಹಾಗೂ ಮಾಲೀಕರ ಮೇಲಿನ ಪ್ರೀತಿಯನ್ನು ಪ್ರವಾಸಿಗರು ಕಣ್ತುಂಬಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದರು.
Advertisement
ಇಂದು ನಾಡಹಬ್ಬ ಮೈಸೂರು ದಸರಾ ಅಂಗವಾಗಿ ಜೆ.ಕೆ ಮೈದಾನದಲ್ಲಿ ನಡೆದ ‘ಮುದ್ದು ಪ್ರಾಣಿಗಳ ಪ್ರದರ್ಶನ ಸ್ಪರ್ಧೆಯ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜರ್ಮನ್ ಶೆಫರ್ಡ್, ಟಿಬೆಟಿಯನ್ ಮಸ್ಟಿಫ್, ಇಂಡಿಯನ್ ಮಸ್ಟಿಫ್, ಡಾಬರ್ ಮ್ಯಾನ್, ಮುಧೋಳ್, ಸಿಬೇರಿಯನ್ ಹಸ್ಕಿ, ಐರಿಷ್ ಶೆಟ್ಟರ್, ಅಕಿಟಾ, ಲೆಬ್ರಡರ್ ಲ್ಯಾಬ್ರಡರ್, ಪೂಡ್ಲೆ, ಡಾಗೋ ಅರ್ಜೆಂಟೈನಾ, ಗ್ರೇಟ್ ಡೇನ್, ಪೋಮೋರಿಯನ್, ರಾಜ ಪಲ್ಯಮ್, ಪಿಟ್ ಬುಲ್ ಹಾಗೂ ಗೋಲ್ಡನ್ ರಿಟ್ರೀವರ್, ಕಾಕರ್ ಸ್ಫ್ಯಾನಿಯಲ್, ಅಮೆರಿಕನ್ ಬುಲ್ಲಿ, ಬಾಕ್ಸರ್, ಬೀಗಲ್, ಫ್ರೆಂಡ್ಸ್ ಬುಲ್ ಡಾಗ್, ಚೌಚೌ, ಪಗ್, ಡಚ್ ಶೆಫರ್ಡ್, ಟಿಬೇಟಿಯನ್ ಸ್ಫ್ಯಾನಿಯಲ್, ರಾಟ್ ವಿಲ್ಲರ್, ಸೈಂಟ್ ಬೆರ್ನಾರ್ಡ್, ಶ್ವಾನಗಳು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದವು.
Advertisement
Advertisement
ಕಳೆದ ಬಾರಿ ದಸರಾದಲ್ಲಿ ಸುಮಾರು 20 ರಿಂದ 25 ತಳಿಗಳ ಶ್ವಾನಗಳು ಮಾತ್ರ ನೋಂದಣಿಯಾಗಿದ್ದವು. ಆದರೆ, ಈ ಬಾರಿ 45 ತಳಿ ಶ್ವಾನಗಳು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದವು. ಅದರಲ್ಲಿ ಪ್ರಮುಖವಾಗಿ 12 ತಳಿಗಳು ದೇಶಿಯದ್ದಾಗಿದ್ದು, ಉಳಿದ ಎಲ್ಲಾ ತಳಿಗಳು ಸ್ವದೇಶಿಯದ್ದಾಗಿದ್ದವು.
Advertisement
ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ ರಾಜ್ಯಸಭೆಯ ಸದಸ್ಯೆ ಸುಧಾಮೂರ್ತಿ ಅವರು ಮಾತನಾಡಿ, ಮುದ್ದು ಪ್ರಾಣಿಗಳು ನಮ್ಮ ಮಕ್ಕಳಿದ್ದಂತೆ. ಅವುಗಳನ್ನು ನಾವು ಪ್ರೀತಿಯಿಂದ ನೋಡಿಕೊಳ್ಳಬೇಕು. ಅನಾರೋಗ್ಯಕ್ಕೆ ತುತ್ತಾಗಿರುವ ಹಾಗೂ ಗಾಯಗೊಂಡ ಎಷ್ಟೋ ಬೀದಿ ಶ್ವಾನಗಳಿದ್ದಾವೆ. ನಮ್ಮ ಮಕ್ಕಳೊಂದಿಗೆ ಅವುಗಳ ಆರೈಕೆಗೆ ಮುಂದಾಗಬೇಕು. ಇಂತಹ ಶ್ವಾನಗಳ ಪ್ರದರ್ಶನದಿಂದ ಮಕ್ಕಳಲ್ಲಿ ಪ್ರಾಣಿಗಳ ಪ್ರೀತಿ ಹೆಚ್ಚಾಗುತ್ತದೆ ಎಂದು ಕಿವಿಮಾತು ಹೇಳಿದರು.
ನನಗೆ ನಾಯಿ ಅಂದ್ರೆ ತುಂಬಾ ಇಷ್ಟ. ತಾಯಿ ಬಿಟ್ಟರೆ ಅಷ್ಟೊಂದು ಮಮತೆ, ಪ್ರೀತಿ ತೋರಿಸೋದು ನಾಯಿ. ನಾಯಿ ಅಂದ್ರೆ ಮಗು ಇದ್ದಂತೆ, ನಾಯಿ ಸಾಕಲು ಆಗೋದಕ್ಕೆ ಸಾಧ್ಯವಿಲ್ಲದಿದ್ದರೂ ಪರವಾಗಿಲ್ಲ. ನಿಮ್ಮ ಮಕ್ಕಳ ಜೊತೆಗೆ ಹೋಗಿ ಬೀದಿ ನಾಯಿಗಳಿಗೆ ಸಹಾಯ ಮಾಡಿ, ಗಾಯಗೊಂಡಿರೋ ನಾಯಿಗಳಿಗೆ ಚಿಕಿತ್ಸೆ ಕೊಡಿಸಿ ಜನರಲ್ಲಿ ಮನವಿ ಮಾಡಿದರು. ಈ ಸಂದರ್ಭದಲ್ಲಿ ಸುಧಾಮೂರ್ತಿ ಅವರ ಮುದ್ದಾದ ಶ್ವಾನ ‘ಗೋಪಿ’ ಕೂಡ ಪ್ರದರ್ಶನದಲ್ಲಿ ಪಾಲ್ಗೊಂಡಿತ್ತು. ಗೋಪಿಗೂ ಕೂಡ ಬಹುಮಾನ ನೀಡಲಾಯಿತು.
ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಉತ್ತಮ ಹಾಗೂ ಮೂಲ ತಳಿಗಳ ಶ್ವಾನಗಳಿಗೆ ಶ್ವಾನ ವೈದ್ಯಾಧಿಕಾರಿಗಳು ಹಾಗೂ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನುಭವ ಹೊಂದಿದಂತಹ ತೀರ್ಪುಗಾರರಿಂದ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ನೀಡಿದರು.