ಮೈಸೂರು: ಎರಡು ದಿನಗಳ ಹಿಂದಷ್ಟೇ ನಿರ್ಮಾಣ ಮಾಡಲಾಗಿದ್ದ ಕೆಮಿಕಲ್ ಟನಲ್ ಪ್ರಯೋಜನಕ್ಕೆ ಬಾರದಂತಾಗಿದೆ.
ನಗರದ ಎಂಜಿ ರಸ್ತೆಯ ತರಕಾರಿ ಮಾರುಕಟ್ಟೆಯ ಪ್ರವೇಶ ದ್ವಾರದಲ್ಲಿ ಈ ಟನಲ್ ನಿರ್ಮಾಣ ಮಾಡಲಾಗಿತ್ತು. ಜನರಿಗೆ ಈ ಟನಲ್ ಬಳಸಲು ಅಸಡ್ಡೆಯಾದರೆ, ಪಾಲಿಕೆ ಅಧಿಕಾರಿಗಳಿಗೂ ಈ ಬಗ್ಗೆ ಅಸಡ್ಡೆ. ಹೀಗಾಗಿ ಜನರು ಟನಲ್ ಒಳಗೆ ಹೋಗದೆ ಎಂದಿನಂತೆ ನೇರವಾಗಿ ಮಾರುಕಟ್ಟೆ ಪ್ರವೇಶಿಸುತ್ತಿದ್ದಾರೆ. ಜನರು ಟನಲ್ ಒಳಗೆ ಹೋದರೆ ಅವರ ಮೈ ಮೇಲೆ ಸ್ಯಾನಿಟೈಸರ್ ಮಾದರಿಯ ನೀರು ಸಿಂಪಡಣೆ ಆಗುತ್ತೆ. ಆಗ ಸಾಮೂಹಿಕವಾಗಿ ಜನರ ಮೇಲಿನ ವೈರಾಣು ನಾಶಕ್ಕೆ ಅನುಕೂಲವಾಗುತ್ತದೆ. ಈ ಉದ್ದೇಶದಿಂದ ಟನಲ್ ಮಾಡಲಾಗಿತ್ತು. ಆದರೆ ಜನರ ಅಸಡ್ಡೆಯಿಂದ, ಅಧಿಕಾರಿಗಳ ಕಾಟಾಚಾರದ ಮನಃಸ್ಥಿತಿಯಿಂದ ಟನಲ್ ಪ್ರಯೋಗ ಎರಡೇ ದಿನಕ್ಕೆ ನಿರುಪಯುಕ್ತವಾಗಿದೆ.
ವೈದ್ಯರಿಗಾಗಿ ವಿಶೇಷ ರಕ್ಷಾ ಕವಚ
ಮೈಸೂರಿನಲ್ಲಿ ಕೊರೊನಾ ಸೋಂಕು ಪ್ರಕರಣಗಳು ದಿನೇ ದಿನೆ ಹೆಚ್ಚಳವಾಗುತ್ತಿದ್ದು, ವೈದ್ಯಕೀಯ ಸಿಬ್ಬಂದಿ ಆತಂಕದಲ್ಲಿದೆ. ಜ್ವರ, ಕೆಮ್ಮು, ನೆಗಡಿಗೆ ಚಿಕಿತ್ಸೆ ಪಡೆಯುತ್ತಿದ್ದು, ವೈದ್ಯರು ಕೂಡ ಆತಂಕಕ್ಕೆ ಒಳಗಾಗಿದ್ದಾರೆ. ಈ ಆತಂಕ ದೂರು ಮಾಡಲು ಮೈಸೂರಿನ ಅನಘ ಆಸ್ಪತ್ರೆ ವಿಶೇಷ ರಕ್ಷಾ ಕವಚಗಳನ್ನು ರೂಪಿಸಿದೆ. ವೈದ್ಯರು, ನರ್ಸ್, ಸಿಬ್ಬಂದಿ ಮಾಸ್ಕ್ ಮೇಲೆ ರಕ್ಷಾ ಕವಚಗಳನ್ನು ಬಳಸುತ್ತಿದ್ದಾರೆ. ಈ ಮೂಲಕ ವೈದ್ಯಕೀಯ ಸಿಬ್ಬಂದಿಗೆ ಸೋಂಕು ಹರಡಂತೆ ಎಚ್ಚರವಹಿಸಲಾಗುತ್ತಿದೆ. ಈ ರಕ್ಷಾ ಕವಚಗಳನ್ನು ಆಸ್ಪತ್ರೆಯಲ್ಲೇ ತಯಾರಿಸಲಾಗುತ್ತಿದೆ.
ಮಾಂಸದೂಟ ಮಾಡಬೇಕಷ್ಟೆ
ಭಾನುವಾರ ನಾವು ಮಾಂಸದೂಟ ಮಾಡಬೇಕು ಅಷ್ಟೆ, ನಮಗೆ ಸಾಮಾಜಿಕ ಅಂತರ, ಕೊರೊನಾ ವೈರಸ್ ವಿರುದ್ಧ ಹೋರಾಟ, ಆರೋಗ್ಯ, ಸಮಾಜದ ಆರೋಗ್ಯ ಯಾವುದು ಮುಖ್ಯ ಅಲ್ಲ ಎನ್ನುವಂತೆ ಜನ ವರ್ತಿಸುತ್ತಿದ್ದಾರೆ. ಈ ಮೂಲಕ ಮಾಂಸದೂಟ ಮಾತ್ರ ಮುಖ್ಯ ಎಂಬ ಮನಃಸ್ಥಿತಿಗೆ ಮೈಸೂರಿನ ಜನ ತಲುಪಿದದ್ದು, ಮಾಂಸದ ಮಾರುಕಟ್ಟೆಯಲ್ಲಿ ಸಾಲುಗಟ್ಟಿ ಖರೀದಿ ಮಾಡಿದ್ದಾರೆ. ಕೊರೊನಾ ಪಾಸಿಟಿವ್ ಸಂಖ್ಯೆ ಮೈಸೂರಲ್ಲಿ ದಿನ ದಿನಕ್ಕೂ ಏರುತ್ತಿದೆ. ಜನ ಮಾತ್ರ ಇದನ್ನು ಲೆಕ್ಕಿಸುತ್ತಿಲ್ಲ.