ಮೈಸೂರು: ಖಾಸಗಿ ಶಾಲೆಯ ಮುಖ್ಯಸ್ಥನ ಕೊಲೆ ರಹಸ್ಯ ಬಾರ್ ನಲ್ಲಿ ಬಯಲಾಗುವ ಮೂಲಕ ಮುಚ್ಚಿಹೋಗಿದ್ದ ಪ್ರಕರಣವೊಂದು ಮತ್ತೆ ಓಪನ್ ಆಗಿದೆ.
ಚಾಣಕ್ಯ ಶಾಲಾ ಮುಖ್ಯಸ್ಥ ಕೃಷ್ಣ (40) ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಒಬ್ಬನನ್ನು ಬಂಧಿಸಿ ನಾಪತ್ತೆಯಾಗಿರುವ ಪತ್ನಿ ಹಾಗೂ ಇಬ್ಬರಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
Advertisement
ಏನಿದು ಪ್ರಕರಣ?
ಮೈಸೂರಿನ ದಟ್ಟಗಳ್ಳಿಯಲ್ಲಿ ಚಾಣಕ್ಯ ಶಾಲೆಯ ಸಂಸ್ಥಾಪಕ ಕೃಷ್ಣ ಅವರು ವರ್ಷದ ಹಿಂದೆ ಮೃತಪಟ್ಟಿದ್ದರು. ಈ ವೇಳೆ ಪತ್ನಿ ರಾಧಾ ಪತಿ ಕೃಷ್ಣ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಹೇಳಿದ್ದರು. ಪೊಲೀಸರು ಸಹಜ ಸಾವು ಎಂದು ಪ್ರಕರಣ ದಾಖಲಿಸಿದ್ದರು. ಕೃಷ್ಣ ಮೃತದೇಹಕ್ಕೆ ಸಂಬಂಧಿಕರು ಅಗ್ನಿಸ್ಪರ್ಶ ನೆರವೇರಿಸುವ ಮೂಲಕ ಅಂತ್ಯಕ್ರಿಯೆ ನಡೆಸಿದ್ದರು. ಇದಾದ ಬಳಿಕ ಪ್ರತಿ ತಿಂಗಳು ಪತ್ನಿ ಮತ್ತು ಕುಟುಂಬದ ಸದಸ್ಯರು ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿಕೊಂಡು ಬರುತ್ತಿದ್ದರು. ಕೃಷ್ಣ ಮೃತಪಟ್ಟ ನಂತರ ರಾಧಾ ಅವರು ಚಾಣಕ್ಯ ಶಾಲೆಯನ್ನು ನಡೆಸಿಕೊಂಡು ಬರುತ್ತಿದ್ದರು.
Advertisement
ಬೆಳಕಿಗೆ ಬಂದಿದ್ದು ಹೇಗೆ?
ಕೆಲ ದಿನಗಳ ಹಿಂದೆ ಕುವೆಂಪು ನಗರದ ಬಾರ್ ನಲ್ಲಿ ರಾತ್ರಿ ವೇಳೆ ಕಂಠಪೂರ್ತಿ ಕುಡಿದಿದ್ದ ಮೂವರು ಯುವಕರು ಮಾತನಾಡಿಕೊಳ್ಳುತ್ತಿದ್ದರು. ಈ ವೇಳೆ ಒಬ್ಬಾತ, ಕೃಷ್ಣರ ಮುಖವನ್ನು ದಿಂಬಿನಿಂದ ಅದುಮಿ ಉಸಿರು ಕಟ್ಟಿಸಿ ಕೊಂದ್ರು ಯಾರಿಗೂ ಗೊತ್ತಾಗಿಲ್ಲ. ಘಟನೆ ಆಗಿ ಒಂದು ವರ್ಷ ಆದ್ರೂ ಇದೂವರೆಗೂ ಕೊಂದವರು ಯಾರು ಅನ್ನೋದೆ ಗೊತ್ತಾಗಿಲ್ಲ. ಇದಕ್ಕೆ ಧಮ್ ಬೇಕಲೆ ಧಮ್ ಬೇಕು. ನೋಡು ನಮ್ಮ ಹವಾ ಹೆಂಗೆ ಮೇಂಟೆನ್ ಮಾಡಿದ್ವಿ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದ. ಈತ ತನ್ನ ಕೃತ್ಯದ ಬಗ್ಗೆ ಓಪನ್ ಆಗಿ ಬಡಾಯಿ ಕೊಚ್ಚಿಕೊಳ್ಳುತ್ತಿರುವುದನ್ನು ಆತನ ಟೇಬಲ್ ಹಿಂಭಾಗದಲ್ಲಿ ಕುಳಿತುಕೊಂಡಿದ್ದ ಕೃಷ್ಣ ಅವರ ಸಂಬಂಧಿಯೊಬ್ಬರು ಕೇಳಿಸಿಕೊಂಡಿದ್ದಾರೆ.
Advertisement
ಬಾರ್ ನಲ್ಲಿ ಯುವಕ ಹೇಳಿದ ವಿಚಾರವನ್ನು ಸಂಬಂಧಿಗಳ ಬಳಿ ತಿಳಿಸಿ ಬಳಿಕ ಪತ್ನಿ ರಾಧಾ ಅವರಲ್ಲಿ ಚರ್ಚಿಸಿದ್ದಾರೆ. ಈ ವೇಳೆ ರಾಧಾ ಅವರು ಪತಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ವಾದ ಮಾಡಿದ್ದಾರೆ.
Advertisement
ಕೊನೆಗೆ ಕೃಷ್ಣ ಅವರ ಸಂಬಂಧಿಗಳು ಬಾರ್ ನಲ್ಲಿ ನಡೆದ ಯುವಕನ ಮಾತುಕತೆಯ ಆಧಾರದಲ್ಲಿ ಕುವೆಂಪುನಗರ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿದ್ದರು. ಪ್ರಕರಣದ ಗಂಭೀರತೆಯನ್ನು ಅರಿತ ನಗರ ಪೊಲೀಸ್ ಆಯುಕ್ತ ಡಾ.ಎ. ಸುಬ್ರಹ್ಮಣೇಶ್ವರರಾವ್ ಅವರು ತನಿಖೆ ನಡೆಸುವಂತೆ ಸಿಸಿಬಿಗೆ ಆದೇಶಿಸಿದರು.
ಸಿಸಿಬಿ ಪೊಲೀಸರು ಶಂಕಿತ ಮಂಜುನಾಥ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ. ಗಾಢ ನಿದ್ರೆಯಲ್ಲಿದ್ದ ಕೃಷ್ಣ ಅವರನ್ನು ಅವರ ಮನೆಯಲ್ಲೇ ಹತ್ಯೆಮಾಡಿದ್ದೇವೆ ಎಂದು ತಿಳಿಸಿದ್ದಾನೆ.
ಚಾಣಕ್ಯ ಶಾಲೆಗೆ ಮಂಜುನಾಥ್ ಕುಡಿಯುವ ನೀರಿನ ಕ್ಯಾನ್ ಪೂರೈಕೆ ಮಾಡುತ್ತಿದ್ದ. ಈ ವೇಳೆ ರಾಧಾ ಮತ್ತು ಮಂಜುನಾಥ್ ನಡುವೆ ಪರಿಚಯವಾಗಿತ್ತು. ಈಗ ನಾಪತ್ತೆಯಾಗಿರುವ ಪತ್ನಿ ರಾಧಾ ಮತ್ತು ಉಳಿದ ಇಬ್ಬರಿಗಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.