ಮಹಿಳೆಯರನ್ನು ಹೇಗೆ ಗೌರವಿಸಬೇಕೆಂಬುದನ್ನು ಮೋದಿ ನೋಡಿ ಕಲಿಯಿರಿ: ಹೇಮಾ ಮಾಲಿನಿ

Public TV
2 Min Read
HEMA MALINI

ನವದೆಹಲಿ: ತನ್ನ ಕುರಿತು ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೇವಾಲಾ (Randeep Surjewala) ಹೇಳಿಕೆಗೆ ಮಥುರಾ ಸಂಸದೆ ಹೇಮಾ ಮಾಲಿನಿ (Mathura MP Hema Malini) ಪ್ರತಿಕ್ರಿಯಿಸಿದ್ದಾರೆ. ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿರೋಧ ಪಕ್ಷದ ನಾಯಕರು ಪ್ರಧಾನಿ ನರೇಂದ್ರ ಮೋದಿಯಿಂದ ಮಹಿಳೆಯರಿಗೆ ಹೇಗೆ ಗೌರವ ನೀಡಬೇಕೆಂಬುದನ್ನು ಕಲಿಯಬೇಕು ಎಂದು ಹೇಳಿದರು.

ಪ್ರತಿಪಕ್ಷಗಳು ಕೇವಲ ಜನಪ್ರಿಯ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡಿವೆ. ಯಾಕೆಂದರೆ ಫೇಮಸ್‌ ಇಲ್ಲದವರನ್ನು ಗುರಿಯಾಗಿಸಿಕೊಂಡು ಹೇಳಿಕೆ ನೀಡಿದರೆ ಅವರಿಗೆ ಯಾವುದೇ ಪ್ರಯೋಜನ ಆಗಲ್ಲ. ಹೀಗಾಗಿ ಯಾರು ಸ್ವಲ್ಪ ಪ್ರಚಾರದಲ್ಲಿ ಇರುತ್ತಾರೋ ಅವರ ಬಗ್ಗೆಯೇ ಹೇಳಿಕೆಗಳನ್ನು ನೀಡುತ್ತಾರೆ. ಇಂಥವರು ಮಹಿಳೆಯರನ್ನು ಹೇಗೆ ಗೌರವಿಸಬೇಕು ಎಂಬುದನ್ನು ಮೋದಿ (Narendra Modi) ಅವರಿಂದ ಕಲಿಯಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.

ಮಥುರಾ ಕ್ಷೇತ್ರದಿಂದ (Mathura Constituency) ಮರು ನಾಮನಿರ್ದೇಶನಗೊಂಡಿರುವುದಕ್ಕೆ ತುಂಬಾ ಸಂತೋಷವಾಗಿದೆ. ಮೂರನೇ ಬಾರಿಗೆ ಮಥುರಾದ ಜನತೆಗೆ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿರುವುದಕ್ಕೆ ಅತೀವ ಸಂತಸವಾಗುತ್ತಿದೆ. ನನ್ನ ಎರಡು ಅವಧಿಯಲ್ಲಿ ಮಾಡಲಾಗದ ಕೆಲಸವನ್ನು ಮುಗಿಸುತ್ತೇನೆ. ಈ ಬಾರಿ ಮಥುರಾದ ಜನತೆಗಾಗಿ ಬೃಹತ್ ಅಭಿವೃದ್ಧಿ ಯೋಜನೆಗಳನ್ನು ಆರಂಭಿಸಲಾಗುವುದು. ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅವರು ಮಥುರಾಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುತ್ತಾರೆ ಎಂದು ಇದೇ ವೇಳೆ ಹೇಮಾ ಮಾಲಿನಿಯವರು ತಿಳಿಸಿದರು. ಇದನ್ನೂ ಓದಿ: ಮಾತೃಶಕ್ತಿಗೆ ಮಾಡಿದ ಅವಮಾನ- ಸುರ್ಜೇವಾಲಾ ವಿರುದ್ಧ ಯೋಗಿ ಕಿಡಿ

Randeep Singh Surjewala

 

ಸುರ್ಜೇವಾಲಾ ಹೇಳಿದ್ದೇನು..?: ಕೈತಾಲ್‌ನ ಫರಾಲ್ ಗ್ರಾಮದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಸುರ್ಜೇವಾಲಾ ಅವರು, ಮಥುರಾದ ಬಿಜೆಪಿ ಸಂಸದೆ ಹಾಗೂ ಹಿರಿಯ ನಟಿ ಹೇಮಾ ಮಾಲಿನಿ ಕುರಿತಾಗಿ ಕೆಟ್ಟ ಹಾಗೂ ಅಶ್ಲೀಲ ಹೇಳಿಕೆ ನೀಡಿದ್ದರು. ನಾವು ಶಾಸಕರು/ಸಂಸದರನ್ನು ಯಾಕೆ ಆಯ್ಕೆ ಮಾಡುತ್ತೇವೆ? ಅವರು ನಮ್ಮ ದನಿಯನ್ನು ಅಲ್ಲಿ ಕೇಳಬೇಕು ಎನ್ನುವುದು ಇದರ ಹಿಂದಿನ ಉದ್ದೇಶ. ನಮ್ಮ ಮನವಿಗಳು ಅಲ್ಲಿ ಸಲ್ಲಿಕೆಯಾಗಬೇಕು. ಆದರೆ ಇವರು ಹೇಮಾ ಮಾಲಿನಿ ರೀತಿಯಲ್ಲ. ಹೇಮಾ ಮಾಲಿನಿ ಅವರನ್ನು ನೆಕ್ಕೋಕೆ ಸಂಸದರನ್ನಾಗಿ ಮಾಡಿದ್ದಾರೆ ಎಂದಿದ್ದರು.

ಸುರ್ಜೇವಾಲಾ ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಯಿತು. ಈ ಬೆನ್ನಲ್ಲೇ ಸುರ್ಜೆವಾಲಾ ಅವರ ಸ್ತ್ರೀ ದ್ವೇಷಿ ಹೇಳಿಕೆಯ ವಿರುದ್ಧ ಬಿಜೆಪಿ ಕಿಡಿಕಾರಿದೆ. ಬಳಿಕ ಈ ವಿಚಾರದಲ್ಲಿ ಸ್ಪಷ್ಟನೆ ನೀಡಿದ ಸುರ್ಜೇವಾಲಾ ಅವರು ಬಿಜೆಪಿ (BJP) ಮೇಲೆ ದೊಡ್ಡ ಆರೋಪ ಮಾಡಿದ್ದರು. ಬಿಜೆಪಿಯ ಐಟಿ ಸೆಲ್ ಸತ್ಯವನ್ನು ತಿರುಚುವ ಮತ್ತು ಸುಳ್ಳನ್ನು ಹರಡುವ ಅಭ್ಯಾಸವನ್ನು ಬೆಳೆಸಿಕೊಂಡಿದೆ ಎಂದು ಕಿಡಿಕಾರಿದ್ದರು. ಅಲ್ಲದೇ ಅದೇ ಕಾರ್ಯಕ್ರಮದ ಮತ್ತೊಂದು ವೀಡಿಯೊವನ್ನು ಹಂಚಿಕೊಂಡಿದ್ದು, ಅದರಲ್ಲಿ ಅವರು ಹೇಮಾ ಮಾಲಿನಿ ಅವರನ್ನು ನಾವು ಗೌರವಿಸುತ್ತೇವೆ ಏಕೆಂದರೆ ಅವರು ಧರ್ಮೇಂದ್ರ ಜಿ ಅವರನ್ನು ವಿವಾಹವಾಗಿದ್ದಾರೆ, ಅವರು ನಮ್ಮ ಅತ್ತಿಗೆ ಎಂದು ಹೇಳಿದ್ದಾರೆ.

ನನ್ನ ಉದ್ದೇಶ ಹೇಮಾ ಮಾಲಿನಿ ಅವರನ್ನು ಅವಮಾನಿಸುವುದು ಅಥವಾ ಯಾರನ್ನೂ ನೋಯಿಸುವುದು ಅಲ್ಲ. ಅದಕ್ಕಾಗಿಯೇ ನಾವು ಹೇಮಾ ಮಾಲಿನಿ ಅವರನ್ನು ಗೌರವಿಸುತ್ತೇವೆ ಮತ್ತು ಅವರು ನಮ್ಮ ಅತ್ತಿಗೆ ಎಂದು ನಾನು ಸ್ಪಷ್ಟವಾಗಿ ಹೇಳಿದ್ದೇನೆ. ಬಿಜೆಪಿ ಮಹಿಳಾ ವಿರೋಧಿಯಾಗಿದೆ. ಆದ್ದರಿಂದ ಅದು ತನ್ನ ಸ್ತ್ರೀದ್ವೇಷ-ಬಣ್ಣದ ಕನ್ನಡಕದಿಂದ ಎಲ್ಲವನ್ನೂ ನೋಡುತ್ತದೆ. ಸುಳ್ಳನ್ನು ಹಬ್ಬಿಸುತ್ತಾರೆ ಎಂದು ತಮ್ಮ ಎಕ್ಸ್‌ ಪೋಸ್ಟ್‌ನಲ್ಲಿ ಹೇಳಿದ್ದಾರೆ.

Share This Article