ಬಾಗಲಕೋಟೆ: ದೈಹಿಕ ಸಮಸ್ಯೆ ನೀಗಿಸಿಕೊಳ್ಳಲು ಆರಂಭಿಸಿದ ಯೋಗವೇ ಈಗ ಹದಿನಾರರ ಹರೆಯದ ಮುಸ್ಲಿಂ ಬಾಲಕಿಯನ್ನು ಇಡೀ ಊರೇ ಪ್ರಶಂಸಿಸುವಂತೆ ಮಾಡಿದೆ. ರಾಷ್ಟ್ರಮಟ್ಟದ ಯೋಗ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ಯೋಗ ಸಾಧನೆಗೆ ರಾಷ್ಟ್ರ ಮಟ್ಟದ ಚಿನ್ನದ ಪದಕ ಪಡೆದು ಕೊಂಡಿದ್ದಾಳೆ.
ಜಿಲ್ಲೆಯ ಹುನಗುಂದ ಪಟ್ಟಣದ ವಿಜಯ ಮಹಾಂತೇಶ್ ಪ್ರೌಢಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿ ಖುಷ್ಬು ಮುರ್ತಿಸಾಬ್ ಹವಾಲ್ದಾರ್ ಯೋಗ ಸಾಧಕಿ. ಗ್ರಾಮೀಣ ಭಾಗದ ಬಾಲಕಿ ಹುಟ್ಟಿದ್ದು ಮುಸ್ಲಿಂ ಕುಟುಂಬದಲ್ಲಾದರೂ ಯೋಗದಲ್ಲಿ ಸಾಧನೆ ಮಾಡಿದ್ದಾಳೆ.
ಬೆಳಗಾವಿ ವಿಭಾಗದಿಂದ ಕರ್ನಾಟಕವನ್ನು ಪ್ರತಿನಿಧಿಸಿ ರಾಷ್ಟ್ರಮಟ್ಟದ ಯೋಗಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ಯೋಗ ಸಾಧನೆಗೆ ರಾಷ್ಟ್ರ ಮಟ್ಟದಲ್ಲಿ ಚಿನ್ನದ ಪದಕ ಪಡೆದುಕೊಂಡಿದ್ದಾಳೆ. ಹದಿನಾರರ ಬಾಲಕಿಯ ಸಾಧನೆಗೆ ತಂದೆ ತಾಯಿ ಹಾಗೂ ಇಡೀ ಶಾಲಾ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ. ಖುಷ್ಬು ರುಶ್ಚಿಕಾಸನ, ಲಿಖಿರಾಸನ, ತ್ರಿಪುರಾಸನ, ಹೀಗೆ ಸಾಕಷ್ಟು ಯೋಗ ಪ್ರಕಾರದ ಆಸನಗಳನ್ನು ಕಲಿತಿದ್ದಾಳೆ.
ಖುಷ್ಬುಗೆ ಯೋಗ ಅಂದರೆ ತುಂಬಾ ಇಷ್ಟ. ಅಷ್ಟೇ ಅಲ್ಲದೇ ಆರೋಗ್ಯ ಸಮಸ್ಯೆ ಇದುದ್ದರಿಂದ ಯೋಗ ಮಾಡೋಕೆ ಆರಂಭಿಸಿದ್ದಳು. ಈಗ ರಾಷ್ಟ್ರ ಮಟ್ಟದ ಸಾಧನೆ ಮಾಡುವ ಮಟ್ಟಕ್ಕೆ ಬೆಳೆದಿದ್ದಾಳೆ. ಖುಷ್ಬು ಯೋಗ ಸಾಧನೆಗೆ ಪ್ರೇರಕವಾಗಿದ್ದು ವಿಜಯ ಮಹಾಂತೇಶ್ ಪ್ರೌಢಶಾಲೆಯ ದೈಹಿಕ ತರಬೇತಿ ಶಿಕ್ಷಕರಾದ ಎಂಎಸ್ ಮಾವಿನಕಾಯಿ. ಇವರು ಯೋಗದಲ್ಲಿ ಎಂ.ಫಿಲ್ ಮಾಡಿರುವ ಶಿಕ್ಷಕರಾಗಿದ್ದು, ಅವರು ಖುಷ್ಬು ಯೋಗಶ್ರದ್ಧೆ ನೋಡಿ ಸೂಕ್ತ ಕಲಿಕೆ ನೀಡಿದ್ದಾರೆ. ಇದರಿಂದ ತಮ್ಮ ಶಿಷ್ಯೆ ಖುಷ್ಬು ಯೋಗದಲ್ಲಿ ಚಿನ್ನದ ಪದಕ ಪಡೆದಿದ್ದಾಳೆ ಎಂದು ಶಾಲಾ ಮುಖ್ಯ ಶಿಕ್ಷಕ ದಯಾನಂದ್ ಪಾಟೀಲ್ ಹೇಳಿದ್ದಾರೆ.
ಖುಷ್ಬು ಚಿನ್ನದ ಪದಕ ಪಡೆದಿರುವುದು ತಮಗೆ ಖುಷಿ ತಂದಿದೆ. ಖುಷ್ಬು ಯೋಗ ಸಾಧನೆಯಿಂದ ರಾಜ್ಯ ಹಾಗೂ ಶಾಲೆಗೂ ಸಹ ಹೆಮ್ಮೆ ತರುವಂತೆ ಮಾಡಿದ್ದಾಳೆ. ಕೇವಲ ರಾಷ್ಟ್ರಮಟ್ಟದಲ್ಲಷ್ಟೇ ಅಲ್ಲದೇ ಅಂತರಾಷ್ಟ್ರೀಯ ಮಟ್ಟದಲ್ಲಿ ಖುಷ್ಬು ಸಾಧನೆ ಮಾಡಲಿ ಎಂದು ದೈಹಿಕ ತರಬೇತಿ ಶಿಕ್ಷಕ ಎಂ.ಎಸ್ ಮಾವಿನಕಾಯಿ ತಮ್ಮ ಆಶಯವನ್ನ ವ್ಯಕ್ತಪಡಿಸಿದ್ದಾರೆ.
ಖುಷ್ಟು ಹವಾಲ್ದಾರ್ ಎಂಬ ಪ್ರತಿಭಾವಂತ ವಿದ್ಯಾರ್ಥಿನಿ ಯೋಗಾಭ್ಯಾಸದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ, ಜಿಲ್ಲೆ ಹಾಗೂ ರಾಜ್ಯದ ಹೆಸರನ್ನ ಬೆಳಗುವಂತೆ ಮಾಡಲಿ ಅನ್ನೋದೆ ಎಲ್ಲರ ಆಶಯವಾಗಿದೆ.
ಚಿನ್ನದ ಪದಕ














