ಮುಸ್ಲಿಂ ಸಮುದಾಯ ಹಠ ಮಾಡದೇ ದೇವಸ್ಥಾನ ಬಿಟ್ಟು ಕೊಡಬೇಕು: ಮುತಾಲಿಕ್

Public TV
2 Min Read
Pramod Muthalik 9

ಕೊಪ್ಪಳ: ಮಸೀದಿ ಜಾಗದಲ್ಲಿ ಹಿಂದೂ ದೇವಸ್ಥಾನಗಳು ಪತ್ತೆಯಾಗುತ್ತಿದ್ದು, ಮುಸ್ಲಿಂ ಸಮುದಾಯದ ಮುಖಂಡರು ಸೌಹಾರ್ದಯುತವಾಗಿ ಆ ಸ್ಥಳಗಳನ್ನು ಹಿಂದೂಗಳಿಗೆ ಒಪ್ಪಿಸಿದರೆ ಮಾದರಿಯಾಗುತ್ತಾರೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು.

ಮಳಲಿ ಮಸೀದಿ ಜೀರ್ಣೋದ್ಧಾರದ ವೇಳೆ ದೇವಸ್ಥಾನ ಪತ್ತೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಶಾಸ್ತ್ರೋಕ್ತವಾಗಿ ದೇವಸ್ಥಾನ ಪತ್ತೆ ಮಾಡಿರುವುದು ಸ್ವಾಗತಾರ್ಹವ. ಈ ಹಿಂದೆಯೇ ಇದು ದೇವಸ್ಥಾನ ಅಂತಾ ಗೊತ್ತಿತ್ತು. ಅಧಿಕೃತವಾಗಿ ಮತ್ತು ಶಾಸ್ತ್ರೋಕ್ತವಾಗಿ ಇದನ್ನು ಸ್ಪಷ್ಟಪಡಿಸಿದ್ದಾರೆ. ಆ ಮಸೀದಿ ಜಾಗದಲ್ಲಿ ವೀರಶೈವ ಲಿಂಗಾಯತ ಮಠವಿತ್ತು ಎಂಬುದು ನನ್ನ ಗಮನಕ್ಕೆ ಬಂದಿದೆ ಎಂದು ವಿವರಿಸಿದರು. ಇದನ್ನೂ ಓದಿ: ಬಸವಣ್ಣ ಐಕ್ಯ ಸ್ಥಳ ಕೂಡಲಸಂಗಮಕ್ಕೆ ರಾಜ್ಯಪಾಲರ ಭೇಟಿ 

Pramod Muthalik 1 1

ಮುಸ್ಲಿಂ ಸಮುದಾಯ ಹಠ ಮಾಡದೇ ದೇವಸ್ಥಾನ ಬಿಟ್ಟು ಕೊಡಬೇಕು. ದಾಳಿ ಮಾಡಿ, ದೇವಸ್ಥಾನ ಮಸೀದಿ ಮಾಡಿರುವ ದಾಳಿಕೋರರಿಗೆ ದೇಶದ ಮುಸ್ಲಿಮರಿಗೆ ಸಂಬಂಧವಿಲ್ಲ. ಇಲ್ಲಿನ ಹಿಂದೂ ಸಮಾಜಕ್ಕೆ ಗೌರವ ನೀಡಿ, ಮುಸ್ಲಿಮರು ದೇವಸ್ಥಾನ ಬಿಟ್ಟುಕೊಡಬೇಕು. ಮುಸಲ್ಮಾನರು ಸೌಹಾರ್ದತೆಯಿಂದ ಹಿಂದೂಗಳಿಗೆ ಒಪ್ಪಿಸಬೇಕು. ಸರ್ಕಾರ ದತ್ತ ಪೀಠದಲ್ಲಿ ಯಾಕೆ ಅರ್ಚಕರನ್ನು ನೇಮಕ ಮಾಡಿಲ್ಲ ಎಂಬುದು ನನಗೆ ಅರ್ಥವಾಗುತ್ತಿಲ್ಲ ಎಂದರು.

ಅಲ್ಲಿನ ಮುಸ್ಲಿಂ ಮುಖಂಡರು ಸೌಹಾರ್ದಯುತವಾಗಿ ಆ ಸ್ಥಳವನ್ನು ಹಿಂದೂಗಳಿಗೆ ಒಪ್ಪಿಸಬೇಕು. ಇಲ್ಲವಾದರೆ ವಿನಾಕಾರಣ ಗಲಭೆ, ಸಂಘರ್ಷಕ್ಕೆ ಕಾರಣವಾಗಬಾರದು. ಮಳಲಿಯ ದೇವಸ್ಥಾನವನ್ನು ಹಿಂದೂಗಳಿಗೆ ಒಪ್ಪಿಸಿದರೆ ಸೌಹಾರ್ದತೆ ಉಳಿಯುತ್ತದೆ. ಈ ಮೂಲಕ ಇದು ಇಡೀ ದೇಶಕ್ಕೆ ಮಾದರಿಯಾಗಲಿದೆ. ಇಲ್ಲವಾದರೆ ಮತ್ತೆ ದ್ವೇಷ, ಸಂಘರ್ಷ, ಕೋರ್ಟ್ ಅಂತಾ ಶುರುವಾಗುತ್ತೆ. ಇದೆಲ್ಲ ಆಗಬಾರದು ಎಂಬುದು ನಮ್ಮೆಲ್ಲರ ಆಶಯವಾಗಿದೆ ಎಂದು ವಿವರಿಸಿದರು.

Pramod Muthalik 2 1

1983ರಲ್ಲಿ ರಾಷ್ಟ್ರಪತಿ ಅವರಿಗೆ ವಿಎಚ್‍ಪಿ ರಾಷ್ಟ್ರೀಯ ಅಧ್ಯಕ್ಷರು ಒಂದು ಮನವಿ ಸಲ್ಲಿಸಿದ್ದರು. ಅಶೋಕ್ ಸಿಂಘಾಲ್ ಅವರು ರಾಷ್ಟ್ರಪತಿಗಳಿಗೆ ದಾಖಲೆ ಸಮೇತ ಮನವಿ ಸಲ್ಲಿಸಿದ್ದರು. ಸುಮಾರು 30 ಸಾವಿರ ದೇವಸ್ಥಾನಗಳನ್ನು ಒಡೆದು ಮಸೀದಿ ಕಟ್ಟಿದ್ದರ ಬಗ್ಗೆ ಮಾಹಿತಿ ನೀಡಿದ್ದರು. ಈ ಪೈಕಿ 3 ದೇವಸ್ಥಾನ ಮಾತ್ರ ನಮಗೆ ಬಿಟ್ಟು ಕೊಡಿ ಎಂದು ಮನವಿ ಮಾಡಿದ್ದರು ಎಂದರು.

ಮಥುರಾ, ಅಯೋಧ್ಯಾ ಮತ್ತು ಕಾಶಿ ದೇವಸ್ಥಾನಗಳನ್ನು ಕೊಡುವಂತೆ ಮನವಿ ಮಾಡಿದ್ದರು. ಆಗಿನ ಸರ್ಕಾರ, ಮುಸ್ಲಿಮರು ಇದಕ್ಕೆ ಒಪ್ಪಿರಲಿಲ್ಲ. ಇದೀಗ ಒಂದೊಂದಾಗಿ ದೇವಸ್ಥಾನ ಪತ್ತೆಯಾಗುತ್ತಿವೆ. ಪ್ರತಿಯೊಂದನ್ನೂ ಹೋರಾಟ ಮಾಡಿ ನಾವು ವಾಪಾಸ್ ಪಡೆಯುತ್ತೇವೆ. ಕಾಂಗ್ರೆಸ್‍ಗೆ, ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದೇನೆ. ಹಿಂದೂ ಸಮಾಜ ಜಾಗೃತವಾಗಿದ್ದು, ದೇವಸ್ಥಾನ ವಾಪಾಸ್ ಪಡೆಯುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಸುನೀಲ್ ಸಂಕ್, ಪ್ರಕಾಶ್ ಹುಕ್ಕೇರಿ ಗೆಲ್ಲುವ ವಿಶ್ವಾಸವಿದೆ: ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ

ಬಿಜೆಪಿ, ಸರ್ಕಾರದ ದಿವ್ಯ ನಿರ್ಲಕ್ಷ್ಯ ಕಾಣಿಸುತ್ತಿದೆ. ಬಹುಷ ಅವರು ಎಲೆಕ್ಷನ್ ಸಮಯ ಕಾಯುತ್ತಿದ್ದಾರೇನೋ. ನಮ್ಮಂತಹ ಹೋರಾಟಗಾರರಿಗೆ, ಹಿಂದು ವಾದಿಗಳಿಗೆ, ಪ್ರಮಾಣಿಕರಿಗೆ ರಾಜಕೀಯದ ಬಾಗಿಲು ಮುಚ್ಚಿದೆ ಎಂದು ಹೇಳಿದರು.

 

Share This Article
Leave a Comment

Leave a Reply

Your email address will not be published. Required fields are marked *